ಜಾನಪದ ಕಲೆಗಳ ಉಳಿವಿಗೆ ಸರ್ಕಾರ ಬದ್ಧ ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ

JANAPADA
Published on

ಬೆಂಗಳೂರು: ಜಾನಪದ ಕಲೆಗಳ ಉಳಿ ವಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಮಕರ ಸಂಕ್ರಾಂತಿ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪದ್ಮನಾಭನಗರದ ಅಟಲ್ ಬಿಹಾರಿ ವಾಜಪೇಯಿ ಆಟದ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.

ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಹಾವೇರಿಯಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸಿದ್ದೆ. ಆ ಮೂಲಕ ಜಾನಪದ ಕಲೆಗಳ ಉಳಿವು, ಬೆಳವಣಿಗೆಗೆ ಕ್ರಮ ಕೈಗೊಂಡಿದ್ದೆ. ಜಾನಪದ ಕಲಾವಿದರಿಗೆ ಸರ್ಕಾರ ಮಾಸಾಶನ ನೀಡುತ್ತಿದೆ. ಈ ಮೂಲಕ ಗುರು ಶಿಷ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಜಾನಪದ ಕಲೆಗಳ ಉತ್ತೇಜನಕ್ಕೆ ಇನ್ನಷ್ಟು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಎತ್ತಿನಗಾಡಿ ಸವಾರಿ

ಜಾತ್ರೆಯ ಉದ್ಘಾಟನೆಗೆ ಆಗಮಿಸಿದ ಸಿಎಂ ಅವರನ್ನು ಮೈದಾನದ ಗೇಟ್​ನಿಂದ ವೇದಿಕೆಗೆ ಸಾಂಪ್ರದಾಯಿಕವಾಗಿ ಎತ್ತಿನಗಾಡಿಯಲ್ಲಿ ಕರೆತರಲಾಯಿತು. ಕಂದಾಯ ಸಚಿವ ಅಶೋಕ್ ಜತೆ ಎತ್ತಿನಗಾಡಿ ಏರಿದ ಸಿಎಂ ಮೈದಾನವನ್ನು ಒಂದು ಸುತ್ತು ಹಾಕಿ ವೇದಿಕೆಗೆ ಆಗಮಿಸಿದ್ದು ವಿಶೇಷವಾಗಿತ್ತು. ಹಾಲಕ್ಕಿ ಜನಾಂಗದ ಸುಗ್ಗಿ ಕುಣಿತ, ಸಿದ್ಧಿ ಸಮುದಾಯದ ಸಿದ್ದಿ ಕುಣಿತ, ಡೊಳ್ಳು ಕುಣಿತ, ಕಂಸಾಳೆ, ಪೂಜಾ ಕುಣಿತ ಸೇರಿ ಅಂದಾಜು 500 ಕಲಾತಂಡಗಳು ವಿವಿಧ ಜಾನಪದ ಗಾಯನ ಹಾಗೂ ನೃತ್ಯ ಪ್ರದರ್ಶನ ನೀಡಿದವು. 3 ಗಂಟೆ ಕುಳಿತು ಕಾರ್ಯಕ್ರಮಗಳನ್ನು ಯಡಿಯೂರಪ್ಪ ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net