ಕೈಮುಗಿದು ಪ್ರಾರ್ಥಿಸುವೆ, ಕಡ್ಡಾಯವಾಗಿ ಆರೋಗ್ಯ ಪರೀಕ್ಷಿಸಿಕೊಳ್ಳಿ

BSY 22 Dec 19
Published on

ಬೆಂಗಳೂರು: ‘ಕೈಮುಗಿದು ಪ್ರಾರ್ಥಿಸುವೆ, ದಯಮಾಡಿ ಆರೋಗ್ಯ ತಪಾಸಣೆ ಮಾಡಿಕೊಳ್ಳಿ’ ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿ ನಿಜಾಮುದ್ದೀನ್ ಧರ್ಮ ಸಮಾವೇಶಕ್ಕೆ ಹೋಗಿ ಬಂದವರಿಗೆ ಮಾಡಿಕೊಂಡಿರುವ ಮನವಿ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ 391 ಜನರನ್ನು ಈಗಾಗಲೇ ಗುರುತಿಸಿ ಹೋಮ್ ಕ್ವಾರಂಟೈನ್/ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಇನ್ನುಳಿದವರನ್ನೂ ಪತ್ತೆ ಮಾಡಲಾಗುತ್ತಿದೆ. ಈ ಸಂಖ್ಯೆ ಹೆಚ್ಚಬಹುದೆಂಬ ನಿರೀಕ್ಷೆ ಇದೆ ಎಂದರು. ಇವರು ಧರ್ಮಪ್ರಚಾರ ಮತ್ತು ಇತರ ಚಟುವಟಿಕೆಗಳಿಗಾಗಿ ವಿವಿಧ ಜಿಲ್ಲೆಗಳಿಗೆ ತೆರಳಿ ಲಾಕ್​ಡೌನ್ ಹಿನ್ನೆಲೆಯಲ್ಲಿ ಅಲ್ಲಿಯೇ ಸಿಲುಕಿಕೊಂಡಿರುವ ಸಾಧ್ಯತೆ ಇದೆ. ಇವರು ಎಲ್ಲಿದ್ದಾರೆಯೋ ಅಲ್ಲಿಯೇ ಕ್ವಾರಂಟೈನ್​ವಾಡಿ ಮಾಹಿತಿ ನೀಡುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ವ್ಯಾಪಕ ವಿಚಾರಣೆ ಮತ್ತು ತಾಂತ್ರಿಕ ಪ್ರಯತ್ನಗಳ ಅಗತ್ಯವಿದೆ ಎಂದರು.

ಬೀದರ್​ನಲ್ಲಿ 91 ಜನರನ್ನು ಪರೀಕ್ಷಿಸಲಾಗಿದ್ದು, 11 ಜನರಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸ ಲಾಗಿದ್ದು, ಅವರಿಗೆ ಸೋಂಕು ತಗಲದೆ ಇರುವುದು ತಿಳಿದು ಬಂದಿದೆ. ಕರೊನಾವನ್ನು ಸಮರ್ಥವಾಗಿ ನಿಯಂತ್ರಿಸಲು ಎಲ್ಲ ಧರ್ಮಗುರುಗಳು ಸಹಕರಿಸಬೇಕು. ಸಮುದಾಯದ ಜನರಲ್ಲಿ ಅರಿವು ಮೂಡಿಸಿ, ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮೈಸೂರಿನಲ್ಲೂ ನಡೆದಿತ್ತು ಜಮಾತ್

ದೆಹಲಿ ಜಮಾತ್ ಧಾರ್ವಿುಕ ಕಾರ್ಯಕ್ರಮ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದ್ದು, ಜಮಾತ್​ನಲ್ಲಿ ಪಾಲ್ಗೊಂಡವರ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. ಮತ್ತೊಂದೆಡೆ ಇದೇ ರೀತಿಯ ಜಮಾತ್ ಮೈಸೂರು ಹೊರವಲಯದಲ್ಲೂ ನಡೆದಿತ್ತು. ಅದರಲ್ಲಿ ಬರೋಬ್ಬರಿ 20 ಸಾವಿರ ಜನ ಪಾಲ್ಗೊಂಡಿದ್ದರು...! ನಗರದ ಹೊರ ವಲಯದ ಎಚ್.ಡಿ.ಕೋಟೆ ರಸ್ತೆಯ ಪಿಂಜರಾಪೋಲ್ ಬಳಿ ಮಾರ್ಚ್ ಮೊದಲ ವಾರದಿಂದ ಮಾ.20ರವರೆಗೆ ಜಮಾತ್ ನಡೆದಿತ್ತು. ಈ ಜಮಾತ್​ನಲ್ಲಿ ರಾಜ್ಯದ ವಿವಿಧೆಡೆಯಿಂದ 20 ಸಾವಿರ ಜನರು ಪಾಲ್ಗೊಂಡಿದ್ದರು. ಆದರೆ, ಒಂದು ಸಮಾಧಾನಕರ ಸಂಗತಿ ಅಂದರೆ ಅಲ್ಲಿಯವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಕರೊನಾ ಸೋಂಕು ವರದಿಯಾಗಿರಲಿಲ್ಲ. ಆದರೆ, ದೆಹಲಿ ಜಮಾತ್​ನಲ್ಲಿ ಪಾಲ್ಗೊಂಡ ಹಲವರಿಗೆ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇದೀಗ ವಿವಿಧೆಡೆ ನಡೆದಿರುವ ಜಮಾತ್​ನಲ್ಲಿ ಪಾಲ್ಗೊಂಡವರ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.

ದೆಹಲಿ ಮರ್ಕಜ್ ಸಮಾವೇಶದ ಮಾಹಿತಿಗಾಗಿ ಮಧ್ಯಂತರ ಅರ್ಜಿ

ಬೆಂಗಳೂರು: ದೆಹಲಿಯ ಮರ್ಕಜ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ವ್ಯಕ್ತಿಗಳ ಮಾಹಿತಿ ಯನ್ನು ರಾಜ್ಯ ಸರ್ಕಾರಕ್ಕೆ ಒದಗಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೖಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ. ಲಾಕ್​ಡೌನ್ ಘೋಷಣೆಯಿಂದ ಸಂಕಷ್ಟಕ್ಕೀಡಾಗಿರುವ ರಾಜ್ಯದ ಜನತೆಗೆ ಪರಿಹಾರ ಹಾಗೂ ಕರೊನಾ ಸೋಂಕಿತರಿಗೆ ಸೂಕ್ತ ವೈದ್ಯಕೀಯ ಸೇವೆ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಈಗಾಗಲೆ ಪಿಐಎಲ್ ಸಲ್ಲಿಸಿರುವ ನಗರದ ವಕೀಲೆ ಗೀತಾ ಮಿಶ್ರಾ, ಅದೇ ಅರ್ಜಿಗೆ ಪೂರಕವಾಗಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಕರೊನಾ ಸೋಂಕಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಶುಕ್ರವಾರ ನಡೆಯಲಿದ್ದು, ಅವುಗಳೊಂದಿಗೆ ಮಧ್ಯಂತರ ಅರ್ಜಿಯನ್ನೂ ವಿಚಾರಣೆಗೆ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

ನಿಜಾಮುದ್ದೀನ್ ಧಾರ್ವಿುಕ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕು. ಜೀವಕ್ಕಿಂತ ಯಾವ ಧರ್ಮವೂ ದೊಡ್ಡದಲ್ಲ. ಇದು ಜಾತಿ-ಧರ್ಮಗಳ ಪ್ರಶ್ನೆಯಲ್ಲ. ರಾಷ್ಟ್ರದ ಭವಿಷ್ಯದ ಪ್ರಶ್ನೆ. | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net