

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿಲ್ಲದ ಜಿಲ್ಲೆಗಳಲ್ಲಿ ಓಡಾಟ ಹಾಗೂ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶ ಕಲ್ಪಿಸುವ ಬಗ್ಗೆ ಏ.14ರವರೆಗಿನ ಪರಿಸ್ಥಿತಿ ಗಮನಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಮಂಗಳವಾರ ದಿಗ್ವಿಜಯ ನ್ಯೂಸ್ ಚಾನಲ್ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು ಕರೊನಾ ಮಟ್ಟಹಾಕಲು ಕೈಗೊಂಡಿರುವ ಕ್ರಮ, ಲಾಕ್ಡೌನ್ ಕುರಿತಂತೆ ಮುಕ್ತವಾಗಿ ಮಾತನಾಡಿದರು. ತೆಲಂಗಾಣ ಸಿಎಂ ರೀತಿಯಲ್ಲಿ ಜೂನ್ ತನಕ ಲಾಕ್ಡೌನ್ ವಿಸ್ತರಿಸಬೇಕೆಂದು ನಾನು ಹೇಳುವುದಿಲ್ಲ, ಡಾ. ದೇವಿಶೆಟ್ಟಿ ಸೇರಿ ಅನೇಕ ತಜ್ಞರು ಏಪ್ರಿಲ್ ಕೊನೆಯ ವಾರ ಹಾಗೂ ಮೇ ಮೊದಲ ವಾರದಲ್ಲಿ ಸೋಂಕು ಉಲ್ಬಣವಾಗಬಹುದೆಂಬ ಅಭಿಪ್ರಾಯ ನೀಡುತ್ತಿದ್ದಾರೆ. ಆದ್ದರಿಂದ ಜನ ಮನೆಯಿಂದ ಹೊರ ಬರದಿದ್ದರೆ ನಿಯಂತ್ರಣ ಸಾಧ್ಯವಾಗುತ್ತದೆ. ಆದ್ದರಿಂದಲೇ ಸರ್ಕಾರ ಪದೇ ಪದೆ ಮನವಿ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು. ಏ. 14 ರೊಳಗೆ ನಾವು ನಿರೀಕ್ಷೆ ಮಾಡಿರುವಷ್ಟು ನಿಯಂತ್ರಣಕ್ಕೆ ಬಂದರೆ ಕೆಲವು ಜಿಲ್ಲೆಗಳಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ರೋಗ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಪೂರ್ಣ ತೆರವು ಮಾಡಲಾಗದು, ಪರಿಸ್ಥಿತಿ ನೋಡಿಕೊಂಡು ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಅನೇಕ ಮುಂದುವರೆದ ರಾಷ್ಟ್ರಗಳಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿರುವುದನ್ನು ಗಮನದಲ್ಲಿಟ್ಟುಕೊಂಡು, ಏ. 14 ರ ತನಕ ಸರ್ಕಾರದೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕ್ರಿಮಿನಲ್ ಮೊಕದ್ದಮೆ: ಆರೋಗ್ಯ ಕಾರ್ಯಕರ್ತರ ಮೇಲೆ ಯಾರಾದರೂ ಹಲ್ಲೆ ಮಾಡಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಾಮಗಾರಿ: ಕೆಲವೊಂದು ಅಗತ್ಯ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗುತ್ತದೆ. ಬಿಬಿಎಂಪಿ ಆಯುಕ್ತರನ್ನು ಕರೆದು ಕೆಲವೊಂದು ರಸ್ತೆಗಳ ಕಾಮಗಾರಿಗಳನ್ನು ಲಾಕ್ಡೌನ್ ಮುಗಿಯುವುದರೊಳಗೆ ಪೂರ್ಣಗೊಳಿಸುವಂತೆಯೂ ಹೇಳಿದ್ದೇನೆ ಎಂದರು.
ಶಾಸಕರ ವೇತನ ಕಡಿತ: ಸಂಸದರ ವೇತನ ಕಡಿತ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಶಾಸಕರ ವೇತನ ಶೇ. 30ರಷ್ಟು ಕಡಿತ ಮಾಡುವ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದೆಂದು ಸಿಎಂ ತಿಳಿಸಿದರು. ಈ ಹಣವನ್ನು ಖಜಾನೆಯಲ್ಲಿ ಪ್ರತ್ಯೇಕ ಖಾತೆಯಲ್ಲಿಟ್ಟು ಕರೊನಾ ನಿಯಂತ್ರಣಕ್ಕೆ ಬಳಕೆ ಮಾಡಲಾಗುವುದು ಎಂದು ವಿವರಿಸಿದರು.