ಸಿಎಂ ಬಿಎಸ್​ವೈ ಹುಟ್ಟುಹಬ್ಬ: ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದು, ಸೇರಿ ಗಣ್ಯರ ಉಪಸ್ಥಿತಿ

BSY 1
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು 78ನೇ ವಸಂತಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ನೆಚ್ಚಿನ ಜನನಾಯಕನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಧೀಮಂತ ನಾಯಕನಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪಕ್ಷಾತೀತವಾಗಿ ರಾಜಕೀಯ ನಾಯಕರು ಆಗಮಿಸಿದ್ದಾರೆ.

ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಸ್.ಎಂ.ಕೃಷ್ಣ ಅವರು ಪಾಲ್ಗೊಂಡಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವ ರಾಜನಾಥ್​ ಸಿಂಗ್ ಆಗಮಿಸಿದ್ದಾರೆ. ಉಳಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಸೇರಿದಂತೆ, ಸಚಿವರು, ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಬಿಎಸ್​ವೈ ಅಭಿಮಾನಿಗಳು ಭಾಗಿಯಾಗಿ ನೆಚ್ಚಿನ ನಾಯಕನಿಗೆ ಶುಭಾಶಯಗಳ ಹೊಳೆಯನ್ನೇ ಹರಿಸುತ್ತಿದ್ದಾರೆ.​

ಸಮಾರಂಭದಲ್ಲಿ ಸಮಯ ಪಾಲನೆ ಮಾಡಿದ ಸಿಎಂ ಬಿಎಸ್​ವೈ 5 ಗಂಟೆಯ ಕಾರ್ಯಕ್ರಮಕ್ಕೆ 20 ನಿಮಿಷ ಮುಂಚಿತವಾಗಿ ಆಗಮಿಸಿದರು. ಈ ವೇಳೆ ಬಿಎಸ್​ವೈ ಬರುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಸ್ವಾಗತಿಸಿದರು. ಅಲ್ಲದೆ, ಶುಭಾಶಯ ಕೋರಿದರು. ಬಳಿಕ ಸಭಿಕರ ಸಾಲಿನಲ್ಲಿ ಕುಳಿತ ಸಿಎಂ ಬಿಎಸ್​ವೈ ಸಂಗೀತ ಕಾರ್ಯಕ್ರಮವನ್ನು ವೀಕ್ಷಿಸಿದರು.

ಸದ್ಯ ಅರಮನೆ ಮೈದಾನದಲ್ಲಿ ಸಮಾರಂಭ ನಡೆಯುತ್ತಿದ್ದು ಬಿಎಸ್​ವೈ ಅವರ ಸಾಧನೆಗಳನ್ನು ಮೆಲುಕು ಹಾಕುತ್ತಿದ್ದಾರೆ. ಸಮಾರಂಭದ ವೇದಿಕೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಸ್.ಎಂ. ಕೃಷ್ಣ, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್​, ಬಿಜೆಪಿ ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಸುರೇಶ್ ಅಂಗಡಿ, ಪ್ರಲ್ಹಾದ್ ಜ್ಯೋಷಿ, ಸಾಹಿತಿ ಸಿದ್ದಲಿಂಗಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net