

ಬೆಂಗಳೂರು: ಹೇಳಿಕೆಗಳು, ಪುಕ್ಕಟೆ ಭರವಸೆಗಳು ಅರ್ಥ ಕಳೆದುಕೊಂಡಿವೆ. ಯಾರೋ ಹೇಳಿಕೆ ಕೊಟ್ಟಾಕ್ಷಣ ಈಡೇರುವುದಿಲ್ಲ. ಅತ್ಯಂತ ಪ್ರೀತಿ, ಮನದಾಳದಿಂದಲೇ ರಾಜ್ಯ ತಿಗಳ ಸಮುದಾಯ ಅಭಿವೃದ್ಧಿ ಮಂಡಳಿಯನ್ನು ಸರ್ಕಾರ ಸ್ಥಾಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರೋಕ್ಷವಾಗಿ ಕಾಂಗ್ರೆಸ್‌ಗೆ ಕುಟುಕಿದರು.
ಸಿಎಂ ಅಧಿಕೃತ ನಿವಾಸ ‘ರೇಸ್‌ವ್ಯೆ ಕಾಟೇಜ್’ನಲ್ಲಿ ತಿಗಳ ಸಮುದಾಯದ ನಿಯೋಗ ಭಾನುವಾರ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೇಳಿಕೆ ಕೊಟ್ಟಿದ್ದರಿಂದಲೇ ಈ ಮಂಡಳಿ ರಚನೆಯಾಯಿತು ಎಂದು ಯಾರೋ ಹೇಳಿಕೊಂಡಿದ್ದಾರೆ. ಬೀದಿಯಲ್ಲಿ ನಿಂತು ಹೇಳಿಕೆ ಕೊಡುವುದಕ್ಕೂ ಕೆಲಸ ಮಾಡಿ ತೋರಿಸುವುದಕ್ಕೂ ವ್ಯತ್ಯಾಸವಿದೆ ಎಂದರು.
ಬೆಂಗಳೂರು ಸುತ್ತಮುತ್ತಲ ನಾಲ್ಕೈದು ಜಿಲ್ಲೆಗಳಲ್ಲಿ ನೆಲೆಸಿರುವ ತಿಗಳ ಸಮುದಾಯದ ಅಹರ್ನಿಶಿ ದುಡಿಮೆ ಶ್ಲಾಘನೀಯ, ಬೆಂಗಳೂರಿಗೆ ಉದ್ಯಾನನಗರಿ ಎಂಬ ಹೆಸರು ಬರುವುದಕ್ಕೆ ಸಮುದಾಯದ ತೆರೆಮರೆ ಕೊಡುಗೆ ದೊಡ್ಡದಿದೆ ಎಂದು ಶ್ಲಾಸಿದರು.
ಸಮುದಾಯದ ಯುವ ಜನರು ಸೇರಿ ಸರ್ವಾಂಗೀಣ ಅಭಿವೃದ್ಧಿಗೆ ಸ್ಥಾಪಿಸಿದ ಮಂಡಳಿಗೆ ಸೂಕ್ತ ಅನುದಾನ ಒದಗಿಸುವ ಜತೆಗೆ ಕಾರ್ಯಕ್ರಮ ಪ್ರಕಟಿಸಲಾಗುವುದು. ಸಮುದಾಯದ ಜನರು ಈ ನೆರವು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ಕೋರಿದರು. ತಿಗಳ ಸಮುದಾಯದ ತುಮಕೂರಿನ ಜ್ಞಾನಾಂದಪುರಿ ಸ್ವಾಮೀಜಿ, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಸಮುದಾಯದ ಮುಖಂಡರು ಇದ್ದರು.