

ಬೆಂಗಳೂರು/ಬೀದರ್: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆಯಲಿರುವ ಚುನಾವಣಾ ಕಣದಲ್ಲಿ ರಾಜಕೀಯ ವಾಕ್ಸಮರ ಏರಿಕೆಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಚಾರದ ಅಖಾಡಕ್ಕೆ ಧುಮುಕುವ ಮೂಲಕ ಮತ್ತಷ್ಟು ರಂಗೇರಿಸಿದ್ದಾರೆ. ಬೆಂಗಳೂರು ನಗರ ಕ್ಷೇತ್ರದ ವ್ಯಾಪ್ತಿಯ ಆನೇಕಲ್ ತಾಲೂಕು ಅತ್ತಿಬೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು, ವಿಜಯಸಂಕಲ್ಪ ಯಾತ್ರೆ ಪ್ರಾರಂಭಿಸಿದ್ದು, ವಿಶೇಷ ವಿಮಾನದ ಮೂಲಕ ಬೀದರ್ಗೆ ತೆರಳಿ ಅಲ್ಲಿಯೂ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾದರು. ಸಿಎಂ ಬೊಮ್ಮಾಯಿ ವಿಜಯಸಂಕಲ್ಪ ಯಾತ್ರೆ ಇನ್ನೆರಡು ದಿನ ಮುಂದುವರಿಯಲಿದ್ದು, ಸೋಮವಾರ ಗದಗ, ಹಾವೇರಿ ಜಿಲ್ಲಾ ಪ್ರಚಾರ ಸಮಾವೇಶಗಳನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬೆಳಗಾವಿ ಜಿಲ್ಲಾ ಬಿಜೆಪಿ ಏರ್ಪಡಿಸಿರುವ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಮಂಗಳವಾರ ಬೆಳಗ್ಗೆ 11ಕ್ಕೆ ಪಾಲ್ಗೊಳ್ಳಲಿದ್ದಾರೆ.
ಜನ ಕೇಂದ್ರಿತ ಸಮಗ್ರ ಅಭಿವೃದ್ಧಿ ರಾಜ್ಯ ಸರ್ಕಾರದ ದೃಢ ಸಂಕಲ್ಪವಾಗಿದೆ. ಬೆಂಗಳೂರು ಜತೆಗೆ ಆಸುಪಾಸಿನ ಗ್ರಾ.ಪಂ.ಗಳ ಅಭಿವೃದ್ಧಿಗೆ ಸಮಾನ ಆದ್ಯತೆ, ಉದ್ಯಮಗಳಿಂದ ಸಂಗ್ರಹಿತ ತೆರಿಗೆಯು ಆಯಾ ಗ್ರಾ.ಪಂ.ಗಳಿಗೆ ಒದಗಿಸಲಾಗುವುದು. ಅಮೃತ ಗ್ರಾ.ಪಂ. ಯೋಜನೆಯಡಿ ರಾಜ್ಯದ 750 ಗ್ರಾ.ಪಂ.ಗಳಿಗೆ ತಲಾ 25 ಲಕ್ಷ ರೂ. ಅನುದಾನ ಒದಗಿಸಿ ಮೂಲ ಸವಲತ್ತು ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಈ ಯೋಜನೆ ಸಫಲವಾದರೆ ಮುಂದಿನ ಬಜೆಟ್ನಲ್ಲಿ ಎಲ್ಲ ಗ್ರಾ.ಪಂ.ಗಳನ್ನು ಸೇರಿಸಲಾಗುವುದು. ಅಲ್ಲದೆ, ಪ್ರತಿ ಗ್ರಾ.ಪಂ. ವ್ಯಾಪ್ತಿಗೆ ಸರಾಸರಿ ನಾಲ್ಕು ಹಳ್ಳಿಗಳು ಬರಲಿದ್ದು, ನಿವೇಶನರಹಿತರು ಮತ್ತು ಮನೆಯಿಲ್ಲದವರನ್ನು ಗುರುತಿಸಿ, ಎಲ್ಲರಿಗೂ ನಿವೇಶನ ಮತ್ತು ತಲೆ ಮೇಲೊಂದು ಸೂರು ಕೊಡುವ ಯೋಜನೆ ರೂಪಿಸುವ ಚಿಂತನೆಯಿದೆ ಎಂದು ಭರವಸೆಗಳ ಸುರಿಮಳೆ ಹರಿಸಿದರು. ಕಲ್ಯಾಣ ಕರ್ನಾಟಕದಲ್ಲಿ ಇನ್ನೂ ಖಾಲಿ ಇರುವ 14 ಸಾವಿರ ಹುದ್ದೆ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಕೆಕೆಆರ್ಡಿಬಿಯಿಂದ 3000 ಕೋಟಿ ರೂ. ಕ್ರಿಯಾಯೋಜನೆ ರೂಪಿಸಲು ಸೂಚನೆ ನೀಡಿರುವೆ ಎಂದು ಸಿಎಂ ಬೀದರ್ನಲ್ಲಿ ತಿಳಿಸಿದರು.
ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ದಣಿವರಿಯದೆ ಸುತ್ತಾಡುತ್ತಿದ್ದಾರೆ. ಪಕ್ಷದ ಸಂಘಟನೆ ಬಲವರ್ಧನೆ ಹಾಗೂ ಕಾರ್ಯಕರ್ತರಲ್ಲಿ ಹುರುಪು ತುಂಬಲು ಉದ್ದೇಶಿತ ಜನ ಸ್ವರಾಜ್ ಯಾತ್ರೆಯಲ್ಲಿ ನ.18ರಿಂದ ನಾಲ್ಕು ದಿನಗಳ ಕಾಲ ಭಾಗವಹಿಸಿದ್ದರು. ಎರಡು ದಿನಗಳ ವಿರಾಮದ ಬಳಿಕ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯದಲ್ಲಿ ನ.24ರಿಂದ ತೊಡಗಿಕೊಂಡಿದ್ದು, ಶಿವಮೊಗ್ಗ ಕ್ಷೇತ್ರದಿಂದ ಅಭಿಯಾನ ಆರಂಭಿಸಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ, ದಾವಣಗೆರೆ, ಮಾಯಕೊಂಡ, ಶಿವಮೊಗ್ಗ ಜಿಲ್ಲೆ ಶಿಕಾಪುರಿ, ಶಿರಾಳಕೊಪ್ಪ, ತೀರ್ಥಹಳ್ಳಿ, ಸಾಗರ, ಸೊರಬ, ದಾವಣಗೆರೆ ಜಿಲ್ಲೆ ಹೊನ್ನಾಳಿ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ, ಕಡೂರು, ದಾವಣಗೆರೆ ಜಿಲ್ಲೆ ಅನಗೋಡು, ಮಂಡ್ಯ ಜಿಲ್ಲೆ ಮಂಡ್ಯ, ಚಾಮರಾಜನಗರ ಜಿಲ್ಲೆ ಸಂತೇಮರಹಳ್ಳಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದಾರೆ. ಕಳೆದ 12 ದಿನಗಳಲ್ಲಿ 15ಕ್ಕೂ ಹೆಚ್ಚು ಪ್ರಚಾರ ಸಭೆಗಳು, ಮುಖಂಡರು ಮತ್ತು ಕಾರ್ಯಕರ್ತರ ಭೇಟಿ, ಪ್ರಮುಖರಿಗೆ ಮನವರಿಕೆ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು, ಬಿಎಸ್ವೈ ಹೋದೆಡೆಯಲ್ಲೆಲ್ಲ ಭರ್ಜರಿ ಸ್ವಾಗತ ಲಭಿಸಿದೆ. ಕಾರ್ಯಕರ್ತರು ಮತ್ತು ಅಭಿಮಾನಿಗಳು ಉತ್ಸಾಹಭರಿತರಾಗಿ ಬರಮಾಡಿಕೊಂಡಿದ್ದು, ಮೇಲ್ಮನೆ ಚುನಾವಣೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಆತ್ಮವಿಶ್ವಾಸವೂ ಹೆಚ್ಚಿದೆ ಎಂದು ಪಕ್ಷದ ಮೂಲಗಳು ವಿಶ್ಲೇಷಿಸಿವೆ.
ಮಂಡ್ಯ: ರಾಜ್ಯದಲ್ಲಿ ಒಬ್ಬಿಬ್ಬರಿಂದಾಗಿ ಕಾಂಗ್ರೆಸ್ ಉಸಿರಾಡುತ್ತಿದೆ. ಅದನ್ನು ನಿಲ್ಲಿಸಬೇಕಾದರೆ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಅಂತೆಯೇ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದ ಕಾಳಿಕಾಂಬ ಕಲ್ಯಾಣ ಮಂಟಪದಲ್ಲಿ ವಿಧಾನ ಪರಿಷತ್ ಚುನಾವಣೆ ಸಂಬಂಧ ಭಾನುವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಕಡೆ ಪ್ರವಾಸ ಮಾಡುತ್ತೇನೆ. ಈ ಮೂಲಕ 140ಕ್ಕೂ ಹೆಚ್ಚು ಕ್ಷೇತ್ರವನ್ನು ಗೆಲ್ಲುತ್ತೇವೆ. ವಿಧಾನಪರಿಷತ್ ಚುನಾವಣೆಯಲ್ಲಿ ಮಂಡ್ಯ ಸೇರಿ 15 ರಿಂದ 16 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
ಸಮಾವೇಶಕ್ಕೆ ಆಗಮಿಸಿದಾಗ ಸಿಕ್ಕ ಅದ್ಧೂರಿ ಸ್ವಾಗತಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖುಷಿಪಟ್ಟರು. 150 ಕೆಜಿ ತೂಕದ ಬೃಹತ್ ಹೂವಿನ ಹಾರವನ್ನು ಕ್ರೇನ್ ಮುಖಾಂತರ ಹಾಕುವ ಮೂಲಕ ಸ್ವಾಗತಿಸಲಾಯಿತು. ಸಮಾವೇಶದಲ್ಲಿ ಕಿಕ್ಕಿರಿದು ತುಂಬಿದ್ದ ಸದಸ್ಯರು ಮತ್ತು ಕಾರ್ಯಕರ್ತರನ್ನು ಕಂಡು, ನನ್ನ ಸ್ವಂತ ಜಿಲ್ಲೆಯಲ್ಲಿ ಪಕ್ಷ ಬೆಳೆಯುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತಿದೆ. ಮಂಡ್ಯ ದಲ್ಲಿ ಸಿಕ್ಕ ಪ್ರತಿಕ್ರಿಯೆ ಕಂಡು ನಂಬಲು ಸಾಧ್ಯವಾಗ ದಂತಾಗಿದೆ. ಇದು ಶಿವಮೊಗ್ಗ ನಗರವೇನೋ ಎನ್ನಿಸುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಹಾಗೂ ವಿಜಯೇಂದ್ರ ಬರುತ್ತೇವೆ. ಪ್ರತಿ ಕ್ಷೇತ್ರಕ್ಕೂ ಭೇಟಿ ಮಾಡಿ ಮತಯಾಚನೆ ಮಾಡುತ್ತೇವೆ. ಈ ಮೂಲಕ ಜಿಲ್ಲೆಯಿಂದ 4 ರಿಂದ 5 ಜನ ಶಾಸಕರನ್ನು ಆಯ್ಕೆ ಮಾಡೋಣ ಎಂದರು.
ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳ ಭರ್ತಿಗೆ ಕಾಲ ಸನ್ನಿಹಿತವಾಗಿದೆ ಎಂಬ ಸಂದೇಶ ಆಡಳಿತ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದ್ದು, ಸಂಪುಟದಲ್ಲಿ ಸ್ಥಾನಪಡೆಯಬೇಕೆಂದು ಆಸೆಹೊತ್ತ ಶಾಸಕರು ಬಿ.ಎಸ್. ಯಡಿಯೂರಪ್ಪ ಹಿಂದೆಮುಂದೆ ಓಡಾಟ ಹೆಚ್ಚಿಸಿದ್ದಾರೆ. ಸದ್ಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅಥವಾ ಬಿಎಸ್ವೈ ಮನವೊಲಿಸಿದರೆ ಮಾತ್ರ ಸಂಪುಟ ಸೇರಲು ಸಾಧ್ಯ ಎಂದು ಭಾವಿಸಿ ಆ ನಿಟ್ಟಿನಲ್ಲಿ ಹಲವು ಶಾಸಕರು ಪ್ರಯತ್ನ ನಡೆಸಿದ್ದು, ಬೆಳಗಾವಿಯಲ್ಲಿ ಸಂಪುಟ ವಿಸ್ತರಣೆ ತೀರ್ವನಕ್ಕೊಂದು ಮೂರ್ತ ರೂಪ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜಾತಿ ಮತ್ತು ಜಿಲ್ಲಾವಾರು ಪ್ರಾತಿನಿಧ್ಯ ಮುಂದಿಟ್ಟುಕೊಂಡು ತಮ್ಮ ಬೇಡಿಕೆ ಮುಂದಿಡಲು ಹತ್ತಕ್ಕೂ ಹೆಚ್ಚು ಶಾಸಕರು ಸಿದ್ಧತೆ ನಡೆಸಿದ್ದು, ಬೆಳಗಾವಿಯಲ್ಲಿ ಡಿ.13ರಿಂದ ಹತ್ತು ದಿನಗಳ ಅವಧಿಯಲ್ಲಿ ಸಿಎಂ ಮೇಲೆ ಒತ್ತಡ ಉದ್ದೇಶ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ದೂರವಾಣಿ ಮೂಲಕ ಸಂರ್ಪಸಿರುವ ಸಿಎಂ, ಅಧಿವೇಶನ ಬಳಿಕ ದೆಹಲಿ ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ.