

ಬೆಂಗಳೂರು: ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಅನ್ಯಾಯ, ಅಧರ್ಮ, ಈ ಪಕ್ಷವನ್ನು ಶಾಶ್ವತವಾಗಿ ಅಳಿಸಿ ಹಾಕಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಾಗ್ದಾಳಿ ನಡೆಸಿದರು.
ಇಂದು ಯಲಹಂಕದಲ್ಲಿ ಜಯವಾಹಿನಿ ಚುನಾವಣಾ ಯಾತ್ರೆ ಆರಂಭಿಸಿದ ಸಿಎಂ ಬೊಮ್ಮಾಯಿ ಎಸ್. ಆರ್. ವಿಶ್ವನಾಥ್ ಪರ ಭರ್ಜರಿ ಪ್ರಚಾರ ನಡೆಸಿದರು.
ಬರುವ ದಿನಗಳಲ್ಲಿ ಅತಿ ಹೆಚ್ಚು ಮತಗಳಿಂದ ಆಯ್ಕೆಯಾಗುವ ಕ್ಷೇತ್ರ ಯಲಹಂಕ. ಎಸ್.ಆರ್. ವಿಶ್ವನಾಥ್ ಅವರು ಉತ್ತಮ ಮೂಲಭೂತ ಸೌಕರ್ಯ ಒದಗಿಸಿದ್ದಾರೆ. ಪ್ರವಾಹ ಬರಲಿ ಏನೇ ಬರಲಿ ಹಗಲು-ರಾತ್ರಿಯೆನ್ನದೇ ಪರಿಹಾರ ಕೊಟ್ಟಿದ್ದಾರೆ. ಬಿಡಿಎ ಅಧ್ಯಕ್ಷರಾಗಿ ಹೊಸ ಲೇಔಟ್ ನಿರ್ಮಿಸಿದ್ದಾರೆ. ವಿಶ್ವನಾಥ್ ಅವರು ನಮ್ಮ ಬೆಂಗಳೂರಿನ ಮುತ್ತು. ಅಸಾಧ್ಯ ಎನ್ನುವ ಪದವೇ ಅವರ ಡಿಕ್ಷನರಿಯಲ್ಲಿ ಇಲ್ಲ. ಎಲ್ಲ ವರ್ಗದ ಜನರನ್ನು ಸಮಾನವಾಗಿ ನೋಡಿಕೊಂಡಿದ್ದಾರೆ ಎಂದು ಹೊಗಳಿದರು.
ವಿಶ್ವನಾಥ್ ನನ್ನ ನೆಚ್ಚಿನ ಸ್ನೇಹಿತ, ಬಲಭೀಮ ಸ್ನೇಹಿತ. ಎಸ್.ಆರ್. ವಿಶ್ವನಾಥ್ ನನಗೆ ಮತ್ತಷ್ಟು ಹತ್ತಿರ ಆಗಿದ್ದಕ್ಕೆ ಮತ್ತೊಂದು ಕಾರಣ ಇದೆ. ನಮ್ಮ ತಂದೆಯ ಹೆಸರು ಎಸ್. ಆರ್. ಬೊಮ್ಮಾಯಿ. ನನಗೆ ತಂದೆ ನೆನಪಾದಗಲೆಲ್ಲ ಎಸ್. ಆರ್. ವಿಶ್ವನಾಥ್ಗೆ ಫೋನ್ ಮಾಡುತ್ತೇನೆ. ಎಸ್.ಆರ್. ವಿಶ್ವನಾಥ್ ಎದುರು ಬಂದಾಗಲೆಲ್ಲ ನನಗೆ ನಮ್ಮ ತಂದೆ ನೆನಪಾಗುತ್ತಾರೆ ಎಂದರು.
ಒಂದು ಲಕ್ಷ ಮತಗಳ ಅಂತರದಿಂದ ವಿಶ್ವನಾಥ್ ಗೆಲ್ಲಿಸುವಂತೆ ಸಿಎಂ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಕರೆ ನೀಡಿದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ಕಾಂಗ್ರೆಸ್ ಭ್ರಷ್ಟಾಚಾರದ ಅವಿಭಾಜ್ಯ ಅಂಗ. ಜಾತಿ ಒಡೆಯುವ ಮತ್ತು ಧರ್ಮ ಒಡೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ನ ಗ್ಯಾರೆಂಟಿ ಕಾರ್ಡ್ ವಿಸಿಟಿಂಗ್ ಕಾರ್ಡ್ ಇದ್ದಂತೆ. ಅದನ್ನು ತೆಗೆದುಕೊಂಡು ಹೋಗಿ ಉಪ್ಪಿನ ಕಾಯಿ ಹಾಕಬೇಕಷ್ಟೇ ಎಂದು ಕುಟುಕಿದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಿರಿ. ಈ ಅನಿಷ್ಟ ಕಾಂಗ್ರೆಸ್ ತೊಲಗಿಸಬೇಕು. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಅನ್ಯಾಯ ಹಾಗೂ ಅಧರ್ಮ. ಈ ಪಕ್ಷವನ್ನು ಶಾಶ್ವತವಾಗಿ ಅಳಿಸಿ ಹಾಕಬೇಕು ಎಂದು ಗುಡುಗಿದರು.
ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದೆ. ರಿಡ್ಯೂ ಹಗರಣ, ಪ್ರಶ್ನೆ ಪತ್ರಿಕೆ ಹಗರಣ ,ಎಸ್ಸಿ-ಎಸ್ಟಿ ಮಕ್ಕಳ ಹಾಸಿಗೆಯಲ್ಲೂ ಹಗರಣ ಸೇರಿದಂತೆ ಸಾಕಷ್ಟು ಹಗರಣ ಮಾಡಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ಬೆಂಗಳೂರನ್ನು ಲೂಟಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಮನೆಗೆ ಕಳಿಸುವುದು ಗ್ಯಾರಂಟಿ ಎಂದರು. (ದಿಗ್ವಿಜಯ ನ್ಯೂಸ್)