ಅನುಕಂಪ ಬೇಡ, ಅನುಭೂತಿ ತೋರಿಸಿ: ಅಂಧ ಸಾಧಕರ ಜತೆಗೆ ಮಾತುಕತೆ

Clubhouse
Published on
ಬ್ರೖೆಲ್ ಲಿಪಿ ಸಂಶೋಧಿಸಿದ ಲೂಯಿ ಬ್ರೖೆಲ್ ಅವರ ಜನ್ಮದಿನದ ಅಂಗವಾಗಿ ‘ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್’ ಆಯೋಜಿಸಿದ್ದ ಕ್ಲಬ್ ಹೌಸ್ ಸಂವಾದದಲ್ಲಿ, ಅಂಧರಿಗೆ ಇರುವ ಅವಕಾಶಗಳು ಮತ್ತು ಸವಾಲನ್ನು ಎದುರಿಸುವ ಬಗ್ಗೆ ಮೂವರು ಅಂಧ ಸಾಧಕರು ಬೆಳಕು ಚೆಲ್ಲಿದರು. ಐಎಎಸ್ ಅಧಿಕಾರಿ ಕೆಂಪಹೊನ್ನಯ್ಯ, ‘ನಡೆದಾಡುವ ಕಂಪ್ಯೂಟರ್’ ಎಂದೇ ಖ್ಯಾತರಾದ ಬಸವರಾಜ ಶಂಕರ ಉಮರಾಣಿ, ಸಮರ್ಥನಂ ಅಂಗವಿಕಲರ ಸಂಸ್ಥೆ ಸಂಸ್ಥಾಪಕ ಡಾ.ಜಿ.ಕೆ.ಮಹಾಂತೇಶ್ ಭಾಗವಹಿಸಿ ತಮ್ಮ ಜೀವನಪಯಣ ವಿವರಿಸಿದ್ದಲ್ಲದೆ, ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಶ್ರೋತೃಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಛಲವಿದ್ದರೆ ಐಎಎಸ್ ಸಹ ಕಷ್ಟ ಏನಲ್ಲ...

| ಕೆಂಪಹೊನ್ನಯ್ಯ

ಅಂಧತ್ವಕ್ಕೆ ಒಳಗಾಗಿದ್ದೇನೆ, ಬದುಕನ್ನು ಕತ್ತಲೆ ಆವರಿಸಿದೆ ಎಂಬ ಆಲೋಚನೆ ಬಿಟ್ಟು ಬಿಡಿ. ನಮ್ಮ ಬಡತನ, ಕುಟುಂಬ, ನಮ್ಮ ಆರ್ಥಿಕ ಸ್ಥಿತಿಗತಿ ನಮಗೆ ಸ್ಪೂರ್ತಿಯಾಗಬೇಕು. ನಮ್ಮ ಪರಿಸ್ಥಿತಿಯನ್ನು ನಾವೇ ಬದಲು ಮಾಡಿಕೊಳ್ಳಬೇಕು. ಕೆರಿಯರ್ ಗೈಡೆನ್ಸ್​ನಲ್ಲಿ ಭಾಗವಹಿಸಬೇಕು. ಸಾಧಕ ಅಂಧರು ನಮಗೆ ಸ್ಪೂರ್ತಿಗಳಾಗಬೇಕು. ನಾವು ಬೆಳೆದ ಮೇಲೆ, ಸಮಾಜದಿಂದ ದೂರ ಉಳಿದಿರುವವರನ್ನು ಮುಖ್ಯವಾಹಿನಿಗೆ ಕರೆ ತರಬೇಕು. ದೇಶದಲ್ಲಿ 12 ಅಂಧರು ಐಎಎಸ್ ಆಗಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಸಾಧಿಸುವ ಛಲ ಇದ್ದರೆ, ಐಎಎಸ್ ಕಷ್ಟ ಏನಲ್ಲ. ಸಮಾಜ ಈಗ ಬದಲಾಗಿದೆ. ಮೊದಲು ನಮ್ಮನ್ನು ಕುರುಡ, ಕುಂಟ, ಕಿವುಡ ಈ ರೀತಿ ಲೇವಡಿ ಮಾಡುತ್ತಿದ್ದರು. ಇಂದು ವಿಕಲಚೇತನ, ವಿಶೇಷ ಚೇತನ, ದಿವ್ಯಾಂಗ ಈ ರೀತಿ ಒಳ್ಳೆಯ ಭಾಷೆಯಲ್ಲಿ ಕರೆಯುತ್ತಾರೆ. ಗರ್ಭಿಣಿಯರಿಗೆ ಪೌಷ್ಟಿಕಾಂಶದ ಆಹಾರ ನೀಡುವ ಮೂಲಕ ಮಕ್ಕಳು ಅಂಗವಿಕಲರಾಗುವುದನ್ನು ತಪ್ಪಿಸಬೇಕು. ಸಂಬಂಧದಲ್ಲಿ ಮದುವೆಯಾಗುವುದರ ಬಗ್ಗೆ ಅರಿವು ಮೂಡಿಸಬೇಕು.

ಪರಿಚಯ: ಚಿಕ್ಕ ವಯಸ್ಸಿನಲ್ಲೇ ಕಣ್ಣು ಕಳೆದುಕೊಂಡರೂ, ಕಡು ಬಡತನದ ಪರಿಸ್ಥಿತಿಯಲ್ಲಿದ್ದರೂ, ಛಲ ಬಿಡದೆ, ವ್ಯಾಸಂಗ ಮಾಡಿ ಐಐಎಸ್ ಅಧಿಕಾರಿಯಾದವರು. ತುಮಕೂರು ಮೂಲದ ಕೆಂಪಹೊನ್ನಯ್ಯ ಅವರು 2017ರಲ್ಲಿ, ಮೂರನೇ ಪ್ರಯತ್ನದಲ್ಲಿ ಯುಪಿಎಸ್​ಸಿಯಲ್ಲಿ 340ನೇ ಸ್ಥಾನಗಳಿಸಿದರು. ಈಗ ಪಶ್ಚಿಮ ಬಂಗಾಳದ ವೆಸ್ಟ್ ಮಿಡ್ನಾಪುರದಲ್ಲಿ ಅಪರ ಜಿಲ್ಲಾಧಿಕಾರಿಯಾಗಿದ್ದಾರೆ. ತಂತ್ರಜ್ಞಾನ ಸಹಾಯದಿಂದ ಕಡತಗಳನ್ನು ಬ್ರೖೆಲ್ ಲಿಪಿಗೆ ಕನ್ವರ್ಟ್ ಮಾಡಿಕೊಂಡು ‘ಸತತ ಪ್ರಯತ್ನ, ಸ್ನೇಹಿತರು ಮತ್ತು ಪತ್ನಿ ಅಚಿಂತಾ ನೆರವಿನಿಂದ ಈ ಸಾಧನೆ ಸಾಧ್ಯವಾಗಿದೆ’ ಎನ್ನುತ್ತಾರೆ ಕೆಂಪಹೊನ್ನಯ್ಯ.

ಅಂಧರೂ ತೆರಿಗೆ ಕಟ್ಟುವ ಹಂತಕ್ಕೆ ಬೆಳೆಯಬೇಕು...

| ಡಾ.ಜಿ.ಕೆ.ಮಹಾಂತೇಶ್

ಅಂಧರು, ಅಂಗವಿಕಲರು ಎಂದಾಕ್ಷಣ ಅವರಿಂದ ಏನೂ ಸಾಧ್ಯವಿಲ್ಲ, ಸರ್ಕಾರ ನೀಡುವ ಪಿಂಚಣಿಗಾಗಿ ಕಾಯುತ್ತಿರುತ್ತಾರೆ ಎಂಬ ಮನೋಭಾವ ತೊಡೆದು ಹಾಕಿ, ನಾವೂ ತೆರಿಗೆ ಪಾವತಿಸುವಂತಾಗಬೇಕು. ಅಂಗವಿಕಲರು ಎಂದರೆ ಜನರು ತಾತ್ಸಾರ ಮನೋಭಾವನೆಯಲ್ಲಿ ನೋಡುವುದು ಈಗ ಕಡಿಮೆಯಾಗಿರುವುದು ಉತ್ತಮ ಬೆಳವಣಿಗೆ. ಅದರೂ, ಕೆಲವರು ಈಗಲೂ ‘ನಾನು ಅಂಗವಿಕಲ, ನನ್ನಿಂದ ಏನೂ ಸಾಧ್ಯವಿಲ್ಲ’ ಎಂಬ ಮನೋಭಾವನೆಯಲ್ಲಿ ಬದುಕುತ್ತಿದ್ದಾರೆ. ಇದು ತಪು್ಪ. ಅಂಗವಿಕಲರಿಗೆ ಸರ್ಕಾರ ಪಿಂಚಣಿ ನೀಡುತ್ತದೆ. ಅದು ನಿಜ. ಆದರೆ, ಇವರು ತಮ್ಮಲ್ಲಿರುವ ಶಕ್ತಿಯಿಂದ ಗುರುತಿಸಿಕೊಂಡು ಜೀವನದಲ್ಲಿ ಮುಂದೆ ಬಂದು ಸರ್ಕಾರಕ್ಕೆ ತೆರಿಗೆ ಪಾವತಿಸುವ ಹಂತಕ್ಕೆ ಬೆಳೆಯಬೇಕು. ಛಲ ಮತ್ತು ದೃಢ ಗುರಿಯಿದ್ದಲ್ಲಿ ಇದು ಸಾಧ್ಯ. ಅಂಧರು ಸಹ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಸಮರ್ಥನಂ ಅಂಗವಿಕಲರ ಸಂಸ್ಥೆಯನ್ನು ಸ್ಥಾಪಿಸಿದ್ದೇನೆ. ಈ ನಿಟ್ಟಿನಲ್ಲಿ ಕೈಲಾದ ನೆರವು ನೀಡುತ್ತಿದ್ದೇನೆ. ಸಂಸ್ಥೆಯಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಶಿಕ್ಷಣ ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ಬಯಸಿದ ಮಾಧ್ಯಮದಲ್ಲಿ ಪುಸ್ತಕಗಳನ್ನು, ಧ್ವನಿ ಮುದ್ರಣಗಳನ್ನು ನೀಡುತ್ತಿದ್ದೇವೆ. ಧಾರವಾಡದಲ್ಲಿ ಸಮರ್ಥನಂ ಕೇಂದ್ರ ಆರಂಭಿಸುತ್ತಿದ್ದು, ಇಲ್ಲಿ ಶಿಕ್ಷಣ, ಕೌಶಲ ಶಿಕ್ಷಣ, ತಂತ್ರಜ್ಞಾನದ ಪರಿಚಯ ಮಾಡಿಕೊಡಲಾಗುತ್ತದೆ. ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ.

ಪರಿಚಯ: ಜಿ.ಕೆ.ಮಹಾಂತೇಶ್ ಅವರ ತಂದೆ ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಅವಿಭಕ್ತ ಕುಟುಂಬವಾಗಿದ್ದರಿಂದ ಕುಟುಂಬದಲ್ಲಿ ಮೊದಲ ಗಂಡು ಮಗು ಎಂದು ಎಲ್ಲರೂ ಸಂಭ್ರಮಿಸಿದರು. 6 ತಿಂಗಳು ಮಗುವಿದ್ದಾಗ ಜ್ವರ ಬಂದು, ಅದು ದೃಷ್ಟಿಹಾನಿಗೆ ಕಾರಣವಾಯಿತು. ನಂತರ ಬೆಂಗಳೂರಿನ ರಮಣ ಮಹರ್ಷಿ ಅಂಧರ ಶಾಲೆಗೆ ದಾಖಲಿಸಲಾಯಿತು. ಸಮರ್ಥನಂ ಸಂಸ್ಥೆ ಮೂಲಕ ಅಂಧರಿಗೆ ಕ್ರಿಕೆಟ್ ಕಲಿಕೆ ಮತ್ತು ಅಂಗವಿಕಲರಿಗೆ ವಸತಿ ಸೌಲಭ್ಯ ಕಲ್ಪಿಸುತ್ತಿದ್ದಾರೆ. ಇಂದು ಈ ಸಂಸ್ಥೆಯು 16 ನಗರ, 12 ರಾಜ್ಯಗಳಲ್ಲಿ ವಿಭಾಗವನ್ನು ಹೊಂದಿದ್ದು, 600ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಅವರ ಜೀವಾಳ. ಭಾರತದ ಅಂಧರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ, ವಿಶ್ವ ಅಂಧರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಸ್ಪೂರ್ತಿ ನೀಡುತ್ತಿದ್ದಾರೆ. ಅಂಧರಿಗಾಗಿ ಅನೇಕ ತಂತ್ರಜ್ಞಾನ ಸುಧಾರಣೆಗಳನ್ನು ಸಹ ಕೈಗೊಂಡಿದ್ದಾರೆ.

ಆತ್ಮಸ್ಥೈರ್ಯ ಮುಖ್ಯ

| ಬಸವರಾಜ ಶಂಕರ ಉಮರಾಣಿ

ಅಂಧರಾದ ಮಾತ್ರಕ್ಕೆ ಜೀವನವೇ ಮುಗಿದು ಹೋಯಿತು ಎಂಬ ಕಲ್ಪನೆಯಿಂದ ಹೊರಬನ್ನಿ. ಜನರು ಹೇಳುವುದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಡಿ. ಆತ್ಮಸ್ಥೈರ್ಯ ಕಳೆದುಕೊಳ್ಳದೇ ಮುನ್ನುಗ್ಗಬೇಕು. ಕೆಲವರು ಹುಟ್ಟುತ್ತಲೇ ಅಂಧರಾಗಿರಬಹುದು; ಕೆಲವೊಮ್ಮೆ ಅಪಘಾತಗಳಿಂದಾಗಿ ಅಂಧತ್ವ, ಅಂಗವಿಕಲತೆಗೆ ಒಳಗಾಗಬಹುದು. ಆದರೆ, ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಾರದು. ಅಂಧರಿಗೆ ಇತರೆ ಎಲ್ಲ ಅಂಗಗಳಲ್ಲಿ ಅತಿ ಹೆಚ್ಚಿನ ಶಕ್ತಿಯನ್ನು ದೇವರು ನೀಡಿರುತ್ತಾರೆ. ಅದನ್ನು ಬಳಕೆ ಮಾಡಿಕೊಂಡು ನಾವು ವಿಭಿನ್ನ ಮಾತ್ರವಲ್ಲ ವಿಶಿಷ್ಟ ಎಂಬುದನ್ನು ತೋರಿಸಬೇಕು.

ಪರಿಚಯ: ಜನ್ಮತಃ ಅಂಧರಾದ ಬಸವರಾಜ ಉಮರಾಣಿ ಅವರು ಕಣ್ಣಿದ್ದವರನ್ನು ಮೀರಿಸುವಂತೆ ಅಂಕಿಯ ಲೆಕ್ಕಗಳನ್ನು ಗಣಕ ಯಂತ್ರಗಳಿಗಿಂತಲೂ ವೇಗವಾಗಿ ಉತ್ತರಿಸಬಲ್ಲರು. ಬೆಳಗಾವಿ ಜಿಲ್ಲೆ ಅಥಣಿಯವರು. ‘ನಡೆದಾಡುವ ಕಂಪ್ಯೂಟರ್’ಎಂದೇ ಖ್ಯಾತರಾಗಿರುವ ಬಸವರಾಜ, ‘ಮಾನವ ಕಂಪ್ಯೂಟರ್’ ಎಂದೇ ಪ್ರಸಿದ್ಧರಾಗಿದ್ದ ಶಂಕುತಲಾ ದೇವಿ ಅವರಿಂದ ಪ್ರೇರಿತವಾಗಿ ಶಾಲಾ ದಿನಗಳಲ್ಲಿ ಗಣಿತ ಕಲಿತು, ಲೆಕ್ಕಗಳನ್ನು ಕ್ಷಣಾರ್ಧದಲ್ಲಿ ಬಿಡಿಸುವ ಚಾತುರ್ಯ ರೂಢಿಸಿಕೊಂಡರು. ಪ್ರತಿಯೊಂದು ರಾಷ್ಟ್ರದ ಕ್ರಿಕೆಟ್ ತಂಡದ ನಾಯಕರ ಹೆಸರು ಮತ್ತು ಅವರು ಗಳಿಸಿದ ರನ್, ಪಡೆದ ವಿಕೆಟ್, ಕ್ಯಾಚ್​ಗಳ ಬಗ್ಗೆ ವಿವರವಾಗಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಹೇಳಬಲ್ಲರು. ಬೇರೆ ಬೇರೆ ನೋಟುಗಳ ಮೌಲ್ಯ, ಎಂದೋ ಕೇಳಿದ ದೂರವಾಣಿ ನಂಬರ್ ನಿಖರವಾಗಿ ಹೇಳಬಲ್ಲರು. ‘ನನ್ನ ಪ್ರತಿಭೆಯನ್ನು ಕರ್ನಾಟಕಕ್ಕೆ ಪರಿಚಯಿಸಿದ್ದೇ, ವಿಜಯವಾಣಿ- ದಿಗ್ವಿಜಯ ನ್ಯೂಸ್’ಎಂದು ಉಮರಾಣಿ ಹೇಳುತ್ತಾರೆ.

ಶರಣು ಶರಣಯ್ಯ: ಕ್ಲಬ್ ಹೌಸ್​ನಲ್ಲಿ ಭಾಗವಹಿಸಿದ್ದ ಕಾವ್ಯಾ ಎನ್ನುವವರು ಪ್ರಶ್ನೆ ಕೇಳಿ ಮಾಹಿತಿ ಪಡೆದ ಬಳಿಕ ‘ಶರಣು ಶರಣಯ್ಯ ಶರಣು ಬೆನಕ...’ ಸ್ತುತಿಯನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸುವ ಮೂಲಕ ಸಂವಾದದ ಮೆರುಗನ್ನು ಹೆಚ್ಚಿಸಿದರು.

ಫಟಾಫಟ್ ಉತ್ತರ...: ಬಸವರಾಜ ಉಮರಾಣಿ ಅವರು ಸಂವಾದದ ಸಮಯದಲ್ಲಿ, ಅನೇಕರ ಜನ್ಮದಿನಾಂಕವನ್ನು ಕೇಳಿ ಅದು ಯಾವ ವಾರ ಎಂಬುದನ್ನು ಕ್ಷಣಾರ್ಧದಲ್ಲಿ ಹೇಳಿ ಚಾತುರ್ಯ ತೋರಿದರು.

ಬ್ರೈಲ್​ ಲಿಪಿಯ ಪ್ರಯೋಜನದ ಬಗ್ಗೆ ಏನನ್ನುತ್ತೀರಿ?

- ಇಂದು ಅಂಧರು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿರುವುದೇ ಇದರ ಪ್ರಯೋಜನಕಾರಿತ್ವಕ್ಕೆ ಒಂದು ನಿದರ್ಶನ. ತಂತ್ರಜ್ಞಾನ ಸಹಾಯದಿಂದ ಅನೇಕ ಕೆಲಸಗಳು ಸುಲಭವಾಗಿವೆ.

ನಾನು ಒಬ್ಬ ಅಂಗವಿಕಲ. ನನ್ನ ಸ್ನೇಹಿತನಿಗೆ 23 ವರ್ಷದ ಬಳಿಕ ಅಂಧತ್ವ ಬಂದಿದೆ. ಇದಕ್ಕೆ ಕಾರಣವೇನು?

- ನಿಖರವಾಗಿ ಇದೇ ಕಾರಣ ಎಂದು ನಾವು ಹೇಳುವುದಕ್ಕೆ ಸಾಧ್ಯವಿಲ್ಲ. ನೇತ್ರತಜ್ಞರನ್ನು ಸಂರ್ಪಸುವುದು ಉತ್ತಮ.

ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆರಂಭಿಸಲು ಸರ್ಕಾರಕ್ಕೆ ಆಸಕ್ತಿ ಇಲ್ಲವೇ?

- ಬೆಂಗಳೂರಿನಲ್ಲಿ ದೊಡ್ಡದಾದ ವಸತಿ ಸಹಿತ ತರಬೇತಿ ಕೇಂದ್ರ ಸ್ಥಾಪಿಸಬೇಕು. ದೂರದ ಜಿಲ್ಲೆಯವರು ಇಲ್ಲೇ ಬಂದು ಉಳಿದು ತರಬೇತಿ ಪಡೆಯುವಂತಾಗಬೇಕು. ಸರ್ಕಾರ ಈ ಕೆಲಸ ಮಾಡಬೇಕು. ಇಲ್ಲವಾದರೆ, ಎನ್​ಜಿಒಗಳು ಮುಂದೆ ಬರಬೇಕು. ಜಿಲ್ಲಾ ಕೇಂದ್ರಗಳಲ್ಲೂ ಆರಂಭವಾಗಬೇಕು.

ಕಣ್ಣಿನ ಸಮಸ್ಯೆ ಎದುರಾದಾಗ ಹೆಚ್ಚು ಜನರು ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸುವುದು ಯಾವಾಗ?

- ಸರ್ಕಾರದ ಹಂತದಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ. ಅಲ್ಲದೆ, ಸಾರ್ವಜನಿಕರು ಸಹ ಸರ್ಕಾರಿ ಆಸ್ಪತ್ರೆಗಳಲ್ಲಿ ನಂಬಿಕೆ ಇಡಬೇಕಿದೆ. ಎಲ್ಲರೂ ಸೇರಿ ವ್ಯವಸ್ಥೆಯನ್ನು ಸರಿಪಡಿಸಬೇಕು.

ರಕ್ತಸಂಬಂಧಗಳಲ್ಲಿ ಮದುವೆಯಾಗುವುದನ್ನು ತಡೆದು, ಜನರಿಗೆ ಅರಿವು ಮೂಡಿಸುವ ಕೆಲಸ ಸರ್ಕಾರದಿಂದ ಆಗಬೇಕಲ್ಲವೆ?

ಈ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕೇಂದ್ರ ಸರ್ಕಾರ ಹೆಣ್ಣುಮಕ್ಕಳ ಆರೋಗ್ಯ, ಶಿಕ್ಷಣ ಇತ್ಯಾದಿ ಆಲೋಚನೆ ಇಟ್ಟುಕೊಂಡು, ಮದುವೆ ವಯಸ್ಸನ್ನು 21ಕ್ಕೆ ಏರಿಕೆ ಮಾಡುತ್ತಿದೆ. ಎನ್​ಜಿಒಗಳು ಸಹ ಇದರ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು.

ಸರ್ಕಾರ ಗ್ರಾಮೀಣ ಭಾಗದ ಅಂಗವಿಕಲರನ್ನು ಕಡೆಗಣಿಸಿದೆ ಎಂಬ ಭಾವನೆ ಇದೆ...

- ಪ್ರತಿ ಜಿಲ್ಲೆಯಲ್ಲೂ ಅಂಗವಿಕಲರ ಕಲ್ಯಾಣಾಧಿಕಾರಿಗಳು ಇರುತ್ತಾರೆ. ಅವರು ಅಂಗವಿಕಲರನ್ನು ಗುರುತಿಸಿ ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುತ್ತಾರೆ. ಕಡೆಗಣಿಸಿದಾಗ ಉನ್ನತಾಧಿಕಾರಿಗಳ ಗಮನಕ್ಕೆ ತರುವುದು ಸೂಕ್ತ.

ಎಲ್ಲ ಅಂಧರಿಗೆ ಬ್ರೖೆಲ್ ಲಿಪಿ ಕಲಿಯುವುದಕ್ಕೆ ಅವಕಾಶ ಇದೆಯಾ?

- ಖಂಡಿತಾ ಅವಕಾಶ ಇದೆ. ಆಸಕ್ತಿ ಇದ್ದಲ್ಲಿ ನಾವು ಕಲಿಸಿಕೊಡುತ್ತೇವೆ. ಈಗ ತಂತ್ರಜ್ಞಾನ ಹೆಚ್ಚು ಬೆಳವಣಿಗೆ ಹೊಂದಿರುವುದರಿಂದ ಬ್ರೖೆಲ್ ಅತ್ಯವಶ್ಯಕ ಅಂತೇನೂ ಅಲ್ಲ.

ಅಂಧತ್ವ ಬಾರದಂತೆ ಎಚ್ಚರವಹಿಸಲು ಸರ್ಕಾರ ನೀಡುವ ವಿಟಮಿನ್ ‘ಎ’ ಲಸಿಕೆ ಕೊರತೆ ಇದೆ. ಈ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ...

- ಎಲ್ಲ ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆ ಎನ್ನಲಾಗದು. ಯಾವ ಜಿಲ್ಲೆಯಲ್ಲಿ ತೊಂದರೆ ಇದೆಯೋ ತಕ್ಷಣ ಸರ್ಕಾರದ ಗಮನಕ್ಕೆ ತರಬೇಕು.

ಅಂಧರನ್ನು ಸಮಾಜ ನಡೆಸಿ ಕೊಳ್ಳುವ ವಿಧಾನವೇ ಬೇರೆ, ಅವರಿಂದ ಯಾವ ರೀತಿ ಕೆಲಸ ತೆಗೆಯಬೇಕೆಂಬ ಕನಿಷ್ಠ ಜ್ಞಾನ ಕೂಡ ಇರುವುದಿಲ್ಲ. ಇದಕ್ಕೆ ಪರಿಹಾರ ಏನು?

- ಅದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು. ನಾವೂ ಎಲ್ಲರಂತೆ ಬದುಕಲು ಸಹಕರಿಸಬೇಕು. ಅಂಧರ ಬಗ್ಗೆ ಅನುಕಂಪ ಬೇಡ, ಅನುಭೂತಿ ಇರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net