

ನವದೆಹಲಿ: ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಮೇಘಸ್ಪೋಟ ಮುಂದುವರಿದಿದ್ದು, ಪ್ರವಾಹ ಮತ್ತು ಭೂಕುಸಿತದಿಂದಾಗಿ ಅಪಾರ ಹಾನಿ ಸಂಭವಿಸಿದೆ. ಉತ್ತರಾಖಂಡದಲ್ಲಿ 15 ಜನರು ಮೃತಪಟ್ಟಿದ್ದು, 16 ಮಂದಿ ಕಣ್ಮರೆ ಮತ್ತು ಹಿಮಾಚಲ ಪ್ರದೇಶದಲ್ಲಿ ಮೂವರು ಮೃತಪಟ್ಟಿದ್ದಾರೆ.
ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ಸುರಿದ ಮಳೆಯಿಂದಾಗಿ ಹಲವು ರಸ್ತೆಗಳು, ವಾಹನಗಳು ಕೊಚ್ಚಿ ಹೋಗಿವೆ. ಭೂಕುಸಿತದಿಂದಾಗಿ ರಸ್ತೆಗಳು ಬಂದ್ ಆಗಿವೆ. ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ನಲ್ಲಿ ಸೋಮವಾರ ತಡರಾತ್ರಿ ಮೇಘಸ್ಪೋಟ ಉಂಟಾಗಿದೆ. ಮಾಲ್ದೇವ್ತಾ, ಹಾಥಿ ಬರ್ಕಲಾ, ಜಾಲಿ ಗ್ರಾಂಟ್ ಮತ್ತು ಕಲ್ಸಿಯಲ್ಲಿ ಹೆಚ್ಚಿನ ಮಳೆ ಸುರಿದಿದ್ದು, ಇದರಿಂದಾಗಿ ಮಾಲ್ದೇವ್ತಾ, ಸಂತ್ಲಾದೇವಿ ಮತ್ತು ದಲನ್ವಾಲಾ ಪ್ರದೇಶಗಳಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಭಾರಿ ಮಳೆಯಿಂದಾಗಿ ಸಹಸ್ರಧಾರಾ ನದಿ ಉಕ್ಕಿ ಹರಿದಿದ್ದು, ಪ್ರವಾಹದಿಂದಾಗಿ ಸೇತುವೆ ಕೊಚ್ಚಿ ಹೋಗಿದ್ದು, ಹಲವು ಅಂಗಡಿ-ಹೋಟೆಲ್ಗಳು ಮತ್ತು ಕಟ್ಟಡಗಳಿಗೆ ಹಾನಿಯುಂಟಾಗಿದೆ. ಡೆಹ್ರಾಡೂನ್ನ ವಿವಿಧ ಭಾಗಗಳಲ್ಲಿ ಐವರು ಕೊಚ್ಚಿ ಹೋಗಿದ್ದು, ನೂರಾರು ಜನರು ಸಿಲುಕಿಕೊಂಡಿದ್ದರು.
ಮೂವರ ಸಾವು: ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯ ಧರ್ಮಪುರಿ ಪಟ್ಟಣದಲ್ಲಿ ಸೋಮವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಮನೆ ಮೇಲೆ ಬಂಡೆ ಕುಸಿದು ಮೂವರು ಮೃತಪಟ್ಟಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಧರ್ಮಪುರಿ ಬಸ್ ನಿಲ್ದಾಣ ಜಲಾವೃತವಾಗಿದ್ದು, ಹಲವು ಬಸ್-ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಇದರಿಂದಾಗಿ ಹಿಮಾಚಲಪ್ರದೇಶ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ 20ಕ್ಕೂ ಹೆಚ್ಚು ಬಸ್ಗಳಿಗೆ ಹಾನಿಯಾಗಿದೆ ಎಂದು ಎಸ್ಪಿ ಸಾಕ್ಷಿ ವರ್ವ ತಿಳಿಸಿದ್ದಾರೆ. ಶಿಮ್ಲಾದಲ್ಲಿ ಸೋಮವಾರ ರಾತ್ರಿ 12 ಗಂಟೆಗಳ ಅವಧಿಯಲ್ಲಿ 141 ಮಿ.ಮೀ. ಮಳೆ ಸುರಿದಿದ್ದು, ನಗರದ ಮಧ್ಯಭಾಗದಲ್ಲಿರುವ ಹಿಮ್ಲಾಂಡ್ ಬಳಿ ಗುಡ್ಡ ಕುಸಿದಿದ್ದು, ಹಲವು ವಾಹನಗಳಿಗೆ ಹಾನಿಯುಂಟಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ನನಗೆ ಕರೆ ಮಾಡಿ ಡೆಹ್ರಾಡೂನ್ನ ಮೇಘಸ್ಪೋಟ ಕುರಿತು ಮಾಹಿತಿ ಪಡೆದಿದ್ದಾರೆ. ಪರಿಹಾರ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಪರಿಹಾರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು, ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಳೆಯಿಂದಾಗಿ ಸರ್ಕಾರಿ ಆಸ್ತಿಗಳು ಮತ್ತು ಹಲವು ಕಟ್ಟಡಗಳಿಗೆ ಅಪಾರ ಹಾನಿಯುಂಟಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಎಸ್ಡಿಆರ್ಎಫ್ ಮತ್ತು ಪೊಲೀಸರು ರಕ್ಷಣಾ ಕಾರ್ಯಾ ಚರಣೆಯಲ್ಲಿ ತೊಡಗಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಮಹಾರಾಷ್ಟ್ರದ ಮರಾಠವಾಡ, ನಾಂದೇಡ್ ಮತ್ತು ಜಾಲ್ನಾ ಜಿಲ್ಲೆ ಸೇರಿ ಹಲವು ಭಾಗಗಳಲ್ಲಿ ತೀವ್ರ ಮಳೆ ಸುರಿದಿದ್ದು ಈ ಅವಘಡಗಳಲ್ಲಿ ಮೂವರು ಮೃತಪಟ್ಟಿದ್ದರೆ, 120ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.