ಹಿಮಾಚಲದ ಬಿಲಾಸ್ಪುರದಲ್ಲಿ ಮೇಘಸ್ಫೋಟ; ಕೃಷಿಭೂಮಿಗಳಿಗೆ ಹಾನಿ, ಅವಶೇಷಗಳಡಿ ಸಿಲುಕಿದ ವಾಹನಗಳು| cloudburst

himachala
Published on

ಶಿಮ್ಲಾ: ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿ ಇಂದು (ಸೆ.13) ಮುಂಜಾನೆ ಸಂಭವಿಸಿದ ಮೇಘಸ್ಫೋಟದಿಂದ ಹಲವಾರು ವಾಹನಗಳು ಅವಶೇಷಗಳಡಿಯಲ್ಲಿ ಹೂತುಹೋಗಿವೆ. ಮತ್ತೊಂದೆಡೆ ಕೃಷಿ ಭೂಮಿಗೂ ಹಾನಿಯಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ನಿನ್ನೆ ಸಂಜೆಯ ಹೊತ್ತಿಗೆ, ಅಟ್ಟಾರಿ-ಲೇಹ್ ರಸ್ತೆ (ರಾಷ್ಟ್ರೀಯ ಹೆದ್ದಾರಿ-3), ಆಟ್-ಸೈಂಜ್ ರಸ್ತೆ (NH-305), ಮತ್ತು ಅಮೃತಸರ-ಭೋಟಾ ರಸ್ತೆ (NH-503A) ಸೇರಿದಂತೆ ಒಟ್ಟು 503 ರಸ್ತೆಗಳು ಸಂಚಾರಕ್ಕೆ ಮುಚ್ಚಲ್ಪಟ್ಟಿದ್ದವು. ಹೆಚ್ಚುವರಿಯಾಗಿ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ರಾಜ್ಯಾದ್ಯಂತ ಕೆಲವೆಡೆ ವಿದ್ಯುತ್ ಮತ್ತು ನೀರು ಸರಬರಾಜು ಯೋಜನೆಗಳು ಅಸ್ತವ್ಯಸ್ತಗೊಂಡಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಮಾಹಿತಿ ನೀಡಿದೆ.

ನೈನಾ ದೇವಿ ವಿಧಾನಸಭಾ ಕ್ಷೇತ್ರದ ನಮ್ಹೋಲ್ ಪ್ರದೇಶದ ಗುತ್ರಹಾನ್ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದೆ. ಉಕ್ಕಿ ಹರಿಯುವ ನೀರು ಕೃಷಿ ಭೂಮಿಯನ್ನು ಕೊಚ್ಚಿ ಹಾಕಿದೆ ಎಂದು ಸ್ಥಳೀಯ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಇಂದು ಮತ್ತು ನಾಳೆ ರಾಜ್ಯದ ಪ್ರತ್ಯೇಕ ಭಾಗಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಸ್ಥಳೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ನಾಲ್ಕು ವಾಹನಗಳು ಅವಶೇಷಗಳಡಿಯಲ್ಲಿ ಹೂತುಹೋಗಿವೆ ಎಂದು ಬಿಲಾಸ್ಪುರದ ಉಪ ಆಯುಕ್ತ ರಾಹುಲ್ ಕುಮಾರ್ ತಿಳಿಸಿದ್ದಾರೆ. ಬೆಳೆ ಹಾನಿಯನ್ನು ನಿರ್ಣಯಿಸಲಾಗುತ್ತಿದೆ ಮತ್ತು ವರದಿಗಳು ಬಂದ ನಂತರ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಸಂಚಾರವನ್ನು ಪುನಃಸ್ಥಾಪಿಸಲು ಲೋಕೋಪಯೋಗಿ ಇಲಾಖೆ ಅವಶೇಷಗಳನ್ನು ತೆರವುಗೊಳಿಸಲು ಪ್ರಾರಂಭಿಸಿದೆ ಎಂದಿದ್ದಾರೆ. ಜೂನ್ 20 ರಂದು ಮುಂಗಾರು ಆರಂಭವಾದಾಗಿನಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಮಳೆ ಸಂಬಂಧಿತ ಘಟನೆಗಳು ಮತ್ತು ರಸ್ತೆ ಅಪಘಾತಗಳಲ್ಲಿ ಒಟ್ಟು 386 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ 218 ಸಾವುಗಳು ಮಳೆ ಸಂಬಂಧಿತ ಘಟನೆಗಳಿಂದ ಸಂಭವಿಸಿದ್ದರೆ, 168 ಸಾವುಗಳು ರಸ್ತೆ ಅಪಘಾತಗಳಿಂದ ಸಂಭವಿಸಿವೆ ಎಂದು ಅಂದಾಜಿಸಲಾಗಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net