ವಿಶ್ವಸಂಸ್ಥೆ: ಪಾಕಿಸ್ತಾನದಲ್ಲಿ ಬಿನ್ ಲಾಡೆನ್ ಕೊಲ್ಲಲ್ಪಟ್ಟನು ಎಂಬ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಪಾಕ್​ಗೆ ಕುಟುಕಿದ ಇಸ್ರೇಲ್ | Israel

Benjamin Netanyahu 13
Published on

Israel: ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್​ನನ್ನು ಪಾಕಿಸ್ತಾನ ತನ್ನ ನೆಲದಲ್ಲಿ ಆಶ್ರಯ ಪಡೆದು ಕೊಲ್ಲಲ್ಪಟ್ಟನು ಎಂಬ ಅಂಶವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಇಸ್ರೇಲ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಟುವಾಗಿ ಟೀಕಿಸಿದೆ.

ಈ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಇಸ್ರೇಲ್‌ನ ಖಾಯಂ ಪ್ರತಿನಿಧಿ ಡ್ಯಾನಿ ಡ್ಯಾನನ್, ಪಾಕಿಸ್ತಾನದಲ್ಲಿ ಬಿನ್ ಲಾಡೆನ್ ನಿರ್ನಾಮವಾದಾಗ, ವಿದೇಶಿ ನೆಲದಲ್ಲಿ ಭಯೋತ್ಪಾದಕನನ್ನು ಏಕೆ ಗುರಿಯಾಗಿಸಿಕೊಂಡು ದಾಳಿ ಮಾಡಿದರು ಎಂಬ ಪ್ರಶ್ನೆ ಕೇಳಲಾಗಲಿಲ್ಲವೇ? ಎಂದು ಯುಎನ್​ನಲ್ಲಿ ಪಾಕಿಸ್ತಾನದ ವಿಶ್ವಸಂಸ್ಥೆ ರಾಯಭಾರಿ ಅಸಿಮ್ ಇಫ್ತಿಕರ್ ಅಹ್ಮದ್ ಕಡೆಗೆ ಕೈ ತೋರಿಸುತ್ತಾ ಇಸ್ರೇಲ್​ ರಾಯಭಾರಿ ಪ್ರಶ್ನಿಸಿದ್ದಾರೆ.

ಒಬ್ಬ ಭಯೋತ್ಪಾದಕನಿಗೆ ಪಾಕ್​ನಲ್ಲಿ ಏಕೆ ಆಶ್ರಯ ನೀಡಲಾಯಿತು? ಇಂದು ಪಾಕ್​​ಗೆ ಇದೇ ಪ್ರಶ್ನೆಯನ್ನು ಕೇಳಬೇಕು. ಬಿನ್ ಲಾಡೆನ್‌ಗೆ ಯಾವುದೇ ವಿನಾಯಿತಿ ಇರಲಿಲ್ಲ, ಮತ್ತು ಹಮಾಸ್‌ಗೆ ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ, ಎಂದು ಡ್ಯಾನನ್ ತಿಳಿಸಿದರು.

ಕತಾರ್ ರಾಜಧಾನಿ ದೋಹಾದಲ್ಲಿ ಹಮಾಸ್ ನಾಯಕರ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಚರ್ಚಿಸಲು ಗುರುವಾರ ನಡೆದ ಭದ್ರತಾ ಮಂಡಳಿ ಸಭೆಯಲ್ಲಿ ಇಸ್ರೇಲ್ ಮತ್ತು ಪಾಕ್​ ರಾಯಭಾರಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಪಾಕ್ ​ಖಾಯಂ ಪ್ರತಿನಿಧಿ ಅಹ್ಮದ್, ಕತಾರ್ ವಿರುದ್ಧ ಇಸ್ರೇಲ್‌ನ ದಾಳಿಯನ್ನು ಅಪ್ರಚೋದಿತ ಆಕ್ರಮಣ ಎಂದು ಕರೆದಿದ್ದಾರೆ. ಇದು ಪ್ರಾದೇಶಿಕ ಶಾಂತಿಯನ್ನು ಹಾಳು ಮಾಡುವ ದಾಳಿಯಾಗಿದೆ. ಗಾಜಾದ ಮೇಲೆ ಇಸ್ರೇಲ್ ದಾಳಿಯನ್ನು ಕ್ರೂರವಾಗಿದೆ. ಇಸ್ರೇಲ್​ ಮಿಲಿಟರಿ ಕ್ರಮಗಳ ಸಿರಿಯಾ, ಲೆಬನಾನ್, ಇರಾನ್ ಮತ್ತು ಯೆಮೆನ್‌ನಲ್ಲಿ ಪದೇ ಪದೇ ಗಡಿಯಾಚೆಗಿನ ದಾಳಿಗಳ ಮೂಲಕ ಇಸ್ರೇಲ್ ಪದೇ ಪದೇ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ಪಾಕಿಸ್ತಾನಿ ರಾಯಭಾರಿ ಆರೋಪಿಸಿದ್ದಾರೆ.

ಪಾಕ್​ ರಾಯಭಾರಿಗೆ ಬಲವಾಗಿ ಪ್ರತಿಕ್ರಿಯಿಸಿದ ಡ್ಯಾನನ್​, ವಾಸ್ತವವೆಂದರೆ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಇದಕ್ಕೆ ಯಾರೂ ಅಮೆರಿಕವನ್ನು ಖಂಡಿಸಲಿಲ್ಲ. ಈ ಮಂಡಳಿಯ ಇತರ ದೇಶಗಳು ಭಯೋತ್ಪಾದಕರ ಮೇಲೆ ದಾಳಿ ಮಾಡಿದಾಗ, ಯಾರೂ ಅಮೆರಿಕವನ್ನು ಖಂಡಿಸುವುದಿಲ್ಲ. ಇದು ಎರಡು ಮಾನದಂಡಗಳ ವಿಷಯ. ನೀವು ನಿಮಗೆ ಅನ್ವಯಿಸುವ ಮಾನದಂಡಗಳಿಗಿಂತ ವಿಭಿನ್ನ ಮಾನದಂಡಗಳನ್ನು ಇಸ್ರೇಲ್‌ಗೆ ಅನ್ವಯಿಸಿದಾಗ, ಇದು ವಿಶ್ವಸಂಸ್ಥೆಯ ಸಮಸ್ಯೆಯಾಗಿದೆ ಎಂದು ಖಾರವಾಗಿ ಉತ್ತರಿಸಿದ್ದಾರೆ.

9/11 ಉಗ್ರ ದಾಳಿ ನಡೆದ ಸತ್ಯವನ್ನು ಪಾಕ್​ ಬದಲಾಯಿಸಲು ಸಾಧ್ಯವಿಲ್ಲ. ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿದ್ದನು ಮತ್ತು ಪಾಕ್​​​ನಲ್ಲಿ ಕೊಲ್ಲಲ್ಪಟ್ಟನು ಎಂಬ ಸತ್ಯವನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನೀವು ನಮ್ಮನ್ನು ಟೀಕಿಸಿದಾಗ ನಾನು ನಿಮ್ಮನ್ನು ಕೇಳುತ್ತೇನೆ, ಪಾಕ್ ಭವಿಷ್ಯದಲ್ಲಿ ಉಗ್ರ ದಾಳಿಗಳು ಮುಂದುವರಿಯುತ್ತದೆ ಎಂದು ನನಗೆ ಖಚಿತವಾಗಿದೆ ಎಂದು ಡ್ಯಾನನ್ ಹೇಳಿದರು.

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಬೋಟಾಬಾದ್‌ನಲ್ಲಿ 2011ರ ಮೇ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಅಮೆರಿಕ ಪಡೆಗಳು ಬಿನ್ ಲಾಡೆನ್‌ನನ್ನು ಹೊಡೆದುರುಳಿಸಿದ್ದವು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net