

ಬೆಂಗಳೂರು: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಕ್ಕಣಚಾರಿ ಎಂಬುವವರಿಗೆ ಸೇರಿದ ಬಟ್ಟೆ ಅಂಗಡಿ ಸುಟ್ಟು ಕರಕಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ವಿವಿ ಬಡಾವಣೆಯ ಗಂಗಮ್ಮ ಗುಡಿ ಬಳಿ ಈ ಘಟನೆ ನಡೆದಿದ್ದು, ಜೀವನಕ್ಕೆ ಆಧಾರವಾಗಿಟ್ಟುಕೊಂಡಿದ್ದ ಅಂಗಡಿ ಸುಟ್ಟು ಹೋಗಿರುವುದರಿಂದ ಬದುಕು ಬೀದಿಗೆ ಬಂದಿದೆ.
ಕಳೆದ ಹಲವು ದಿನಗಳಿಂದ ಅಂಗಡಿ ಮುಂದೆ ವಾಲಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ ಬದಲಾವಣೆ ಮಾಡುವಂತೆ ಸಾಕಷ್ಟು ಬಾರಿ ಅಂಗಡಿ ಮಾಲೀಕ ಜಕ್ಕಣಚಾರಿ ದೂರು ನೀಡಿದ್ದರು. ಆದರೆ ಎಷ್ಟೇ ದೂರು ನೀಡಿದರೂ ಟ್ರಾನ್ಸ್ಫಾರ್ಮರ್ ಬದಲಾಯಿಸದೆ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಂಜಾನೆ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದ್ದು, ಟ್ರಾನ್ಸ್ಫಾರ್ಮರ್ನಿಂದ ಅಂಗಡಿಗೆ ಬೆಂಕಿ ಹೊತ್ತುಕೊಂಡು ಸುಟ್ಟು ಕರಕಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆ ಹಾಗೂ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ನ್ಯಾಯ ಕೊಡಿಸುವಂತೆ ನೊಂದ ಅಂಗಡಿ ಮಾಲೀಕರು ಒತ್ತಾಯ ಮಾಡಿದ್ದಾರೆ.