

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಎಂ.ಜಿ.ರಸ್ತೆಯ ಅಗಲೀಕರಣದ ಹಿನ್ನೆಲೆಯಲ್ಲಿ ನಿಗದಿತ ಜಾಗದಲ್ಲಿನ ಕಟ್ಟಡಗಳ ತೆರವು ಕಾರ್ಯಾಚರಣೆ ಮತ್ತಷ್ಟು ಬಿರುಸು ಪಡೆದಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆಬದಿಯಲ್ಲಿನ ಅಂಗಡಿ, ಹೋಟೆಲ್, ಕಚೇರಿಗಳು ಸೇರಿದಂತೆ ವಿವಿಧ ಕಟ್ಟಡಗಳ ಬಳಿ ಎರಡು ರೀತಿಯ ಮಾರ್ಕ್ ಮಾಡಿದ್ದು ಸಂಬಂಧಪಟ್ಟ ಮಾಲೀಕರಿಗೆ ಮುಂದಿನ ಒಂದು ದಿನದೊಳಗೆ ಸ್ವಯಂ ತೆರವು ಕಾರ್ಯಾಚರಣೆ ಕೈಗೊಳ್ಳದಿದ್ದಲ್ಲಿ ಸರ್ಕಾರಿ ಜೆಸಿಬಿಗಳು ಅಖಾಡಕ್ಕೆ ಇಳಿಯಲಿವೆ ಎಂಬುದಾಗಿ ಮೌಖಿಕವಾಗಿ ಎಚ್ಚರಿಕೆ ನೀಡಿದ್ದಾರೆ.
*ಹಳದಿ ಗುರುತಿನವರೆಗೂ ತೆರವು*
ಹೆದ್ದಾರಿ ಪ್ರಾಧಿಕಾರವು ಮೀಟರ್ ಅಡಿಯ ನಿರ್ದಿಷ್ಟ ಲೆಕ್ಕದಲ್ಲಿ ಹಳದಿ ಮತ್ತು ಕೆಂಪು ಗುರುತನ್ನು ಹಾಕಿದೆ. ಪ್ರಸ್ತುತ ಮೊದಲ ಹಂತದಲ್ಲಿ ಹಳದಿ ಮಾರ್ಕ್ ವರೆಗೂ ತೆರವುಗೊಳಿಸುವ ಕೆಲಸವಾಗುತ್ತಿದೆ. ಇದರ ಜಾಗದಲ್ಲಿ ರಸ್ತೆಯ ಅಗಲೀಕರಣವಾಗುತ್ತದೆ. ಉಳಿದಂತೆ ಕೆಂಪು ಮಾರ್ಕ್ ವರೆಗಿನ ತೆರವಿಗೆ ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಲ್ಲಿ ಚರಂಡಿ, ಫುಟ್ ಪಾತ್ ನಿರ್ಮಿಸಿ, ಅಭಿವೃದ್ಧಿಪಡಿಸಲಾಗುತ್ತದೆ. ಕೋಟ್ಯಂತರ ರೂ ವೆಚ್ಚದ ರಸ್ತೆ ಅಗಲೀಕರಣದ ಕೆಲಸವನ್ನು ವಿವಿಧ ಹಂತಗಳಲ್ಲಿ ಕೈಗೊಳ್ಳಲಾಗುತ್ತದೆ.
*ಸ್ವಯಂ ತೆರವು ಕೆಲಸ*
ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆ, ನಗರ ಪೊಲೀಸ್ ಠಾಣೆ, ಮರಳು ಸಿದ್ದೇಶ್ವರ ವೃತ್ತ ಸೇರಿದಂತೆ ವಿವಿಧೆಡೆ ಅಂಗಡಿ ಮಾಲೀಕರು ಸ್ವಯಂ ತೆರವು ಕೆಲಸ ಕೈಗೊಂಡರು.
ಅಧಿಕಾರಿಗಳು ಬಂದರೆ ಜೆಸಿಬಿ ಮೂಲಕ ಮನಸ್ಸಿಗೆ ಬಂದಂತೆ ಕಟ್ಟಡವನ್ನು ಉರುಳಿಬಿಡುತ್ತಾರೆ. ಇದರಿಂದ ನಷ್ಟವಾಗುತ್ತದೆ. ಇದಕ್ಕೆ ಪ್ರಾಧಿಕಾರವು ಗುರುತಿಸಿದ ಜಾಗದವರೆಗೆ ತೆರವು ಕೆಲಸ ಕೈಗೊಳ್ಳಲಾಯಿತು. ಕೂಲಿ ಕಾರ್ಮಿಕರು ಕಟ್ಟರ್, ಸುತ್ತಿ, ಗಢಾರ್ ಸೇರಿದಂತೆ ವಿವಿಧ ಉಪಕರಣಗಳಿಂದ ಕಟ್ಟಡದ ಗೋಡೆಗಳನ್ನು ಹೊಡೆದು ಹಾಕುತ್ತಿದ್ದ, ಸರಕುಗಳ ಸಾಗಾಣೆಯ ದೃಶ್ಯ ಕಂಡು ಬಂತು.
*ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬಂದು ರಸ್ತೆಯ ಅಗಲೀಕರಣದ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಹಾಕಿರುವ ಹಳದಿ ಗುರುತಿನವರೆಗೂ ಕಟ್ಟಡವನ್ನು ತೆರವುಗೊಳಿಸಲಾಗುತ್ತಿದೆ.
ಕುಮಾರ್, ಸ್ಥಳೀಯ ನಿವಾಸಿ, ಚಿಕ್ಕಬಳ್ಳಾಪುರ