ಅನ್ಯರಾಜ್ಯ ವ್ಯಾಪಾರಸ್ಥರ ಅಂಗಡಿ ತೆರವುಗೊಳಿಸಿ

Clear the shops of foreign traders
ಕಲಾದಗಿಯಲ್ಲಿ ಅನ್ಯರಾಜ್ಯದ ವ್ಯಾಪಾರಸ್ಥರನ್ನು ತೆರವುಗೊಳಿಸುವಂತೆ ವ್ಯಾಪರಸ್ಥರ ಸಂಘ ಹಾಗೂ ಕನ್ನಡಪರ ಸಂಘಟನೆ ವತಿಯಿಂದ ಉಪತಹಸೀಲ್ದಾರ್ ಆರ್.ಆರ್. ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಾಣೇಶ ವಿಜಾಪುರ, ಸುಭಾಸ ದುರ್ವೆ, ಸೈಪುದ್ದೀನ್ ಹುಬ್ಬಳ್ಳಿ, ಮಹಾಗುಂಡಪ್ಪ ಮುಧೋಳ ಇದ್ದಾರೆ.
Published on

ಕಲಾದಗಿ: ಗ್ರಾಮದಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಮಾರುವುದರ ಮೂಲಕ ಗ್ರಾಹಕರಿಗೆ ಹಾಗೂ ಅಕ್ರಮ ವ್ಯವಹಾರದಿಂದ ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಅನ್ಯರಾಜ್ಯದ ವ್ಯಾಪರಸ್ಥರ ಅಂಗಡಿಗಳನ್ನು ಸರ್ಕಾರ ಕೂಡಲೇ ತೆರುವುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಉಗ್ರವಾಗುತ್ತದೆ ಎಂದು ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಸವರಾಜ ಧರ್ಮಂತಿ ಎಚ್ಚರಿಸಿದರು.

ಗ್ರಾಮದಲ್ಲಿ ಅನ್ಯರಾಜ್ಯದವರ ವ್ಯಾಪಾರವಹಿವಾಟನ್ನು ವಿರೋಧಿಸಿ ಸ್ಥಳೀಯ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ಸೋಮವಾರ ಕರೆ ನೀಡಿದ್ದ ‘ಕಲಾದಗಿ ಬಂದ್’ ಪ್ರತಿಭಟನೆಯಲ್ಲಿ ನಾಡಕಚೇರಿಯ ಮುಂದೆ ಉಪ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಿಗ ವ್ಯಾಪಾರಸ್ಥರಿಗೆ ಆಧ್ಯತೆ ಇರಬೇಕು. ಬೇರೆ ರಾಜ್ಯದವರು ನಮ್ಮ ಅನ್ನವನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ. ತೆರಿಗೆಗಳನ್ನು ವಂಚಿಸುತ್ತಿರುವ ಇವರ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಬೇಕು ಎಂದು ಆಗ್ರಹಿಸಿದ ಅವರು ಸ್ಥಳಿಯ ಅಂಗಡಿಗಳ ಮಾಲೀಕರು ಈ ವ್ಯಾಪಾರಿಗಳನ್ನು ಬಿಡಿಸದಿದ್ದರೆ ಮುಂದೆ ಅವರ ಮನೆಯ ಮುಂದೆಯೇ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಯುವಮುಖಂಡ ಬೀಳಗಿಯ ಪ್ರವೀಣ ಪಾಟೀಲ ಮಾತನಾಡಿ, ಗ್ರಾಮದಿಂದ ಬೇರೇ ರಾಜ್ಯದ ಅಂಗಡಿಕಾರರನ್ನು ಕಳುಹಿಸಲು ಫೆ.15ರವರೆಗೆ ಗಡವು ನೀಡುತ್ತಿದ್ದೇವೆ. ತೆರವಾಗದಿದ್ದರೆ ಹೋರಾಟ ತೀವ್ರಗೊಳ್ಳುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕರವೇ ಜಿಲ್ಲಾ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ ಹಾಗೂ ಇನ್ನೊರ್ವ ಹೋರಾಟಗಾರ್ತಿ ಮಂಜುಳಾ ಆ.ಮೇರಾಕರ ಅವರುಗಳು ಮಾತನಾಡಿ, ಬೀಳಗಿಯಲ್ಲಿ ಇಂಥಹುದೇ ಹೋರಾಟ ಮಾಡಿ ಯಶಸ್ವಿಯಾಗಿದ್ದು, ಇಷ್ಟಕ್ಕೆ ವ್ಯವಸ್ಥೆ ಸರಿಯಾಗದಿದ್ದರೆ ಇಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹೋರಾಟದಲ್ಲಿ ಪಾಲ್ಗೊಳುತ್ತಾರೆ ಎಂದರು.

ಕಲಾದಗಿ ವ್ಯಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಪ್ರಾಣೇಶ ವಿಜಾಪುರ, ಅಧ್ಯಕ್ಷ ಸುಭಾಸ ದುರ್ವೆ, ಉಪಾಧ್ಯಕ್ಷ ಸೈಪುದ್ದೀನ್ ಹುಬ್ಬಳ್ಳಿ, ಕಾರ್ಯದರ್ಶಿ ಮಹಾಗುಂಡಪ್ಪ ಮುಧೋಳ, ಬಶೇಟ್ಟೆಪ್ಪ ಅಂಗಡಿ, ಸಲೀಂಶೇಖ, ನಿಂಗಪ್ಪ ಅರಕೇರಿ, ಪಕೀರಪ್ಪ ಮಾದರ, ಬಸವರಾಜ ಕುಳ್ಳೊಳ್ಳಿ, ಮಲ್ಲಪ್ಪ ಜಮಖಂಡಿ, ಭೀಮಶಿ ಕರಡಿಗುಡ್ಡ, ಶಶಿಧರ ಮಲ್ಲಿಕಾರ್ಜುನಮಠ, ಮಲ್ಲು ಕುಂದರಗಿ, ಮಂಜುನಾಥ ಪವಾರ, ನಜೀರಹ್ಮದ ಧನ್ನೂರ ಮತ್ತಿತರರಿದ್ದರು.

ಕಲಾದಗಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಪ್ರತಿಭಟನಾ ಅಂಗವಾಗಿ ಗ್ರಾಮದ ಎಲ್ಲ ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಬೆಳಗ್ಗೆ 11ಗಂಟೆಗೆ ಗ್ರಾಮದ ಹೊರರಸ್ತೆಯಲ್ಲಿರುವ ಶ್ರೀ ಸಾಯಿ ಮಂದಿರದ ಬಳಿ ಸ್ಥಳೀಯ ವ್ಯಾಪಾರಸ್ಥರು, ಮುಖಂಡರು, ಮಹಿಳೆಯರು, ವಿವಿಧ ಸಂಘಟನೆಯವರು ಜಮಾವಣೆಗೊಂಡು ಅಲ್ಲಿಂದ ಪ್ರತಿಭಟನಾ ಮೆರವಣಿಗೆಯು ಬಸ್‌ನಿಲ್ದಾಣ, ಅಂಬೇಡ್ಕರ ವೃತ್ತ, ಹೊಸೂರ ಚೌಕ, ಬಸವಣ್ಣದೇವರ ಓಣಿ, ಕೊಬ್ರಿ ಸರ್ಕಲ್, ಬಸವೇಶ್ವರ ಸರ್ಕಲ್ ಮೂಲಕ ಸಾಗಿ ನಾಡಕಛೇರಿಯನ್ನು ತಲುಪಿತು. ಪ್ರತಿಭಟನಾಕಾರರು ಕೆಲಹೊತ್ತು ಬಾಗಲಕೋಟೆ-ಬೆಳಗಾವಿ ರಸ್ತೆಯನ್ನು ತಡೆದು ನಂತರ ಕೊಬ್ಬರಿ ಸರ್ಕಲ್‌ನಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಸ್ಥಳಿಯ ಠಾಣಾಧಿಕಾರಿ ಚಂದ್ರಶೇಖರ ಹೆರಕಲ್ ರಕ್ಷಣೆ ಒದಗಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net