ವಾಹನ ಗುಜರಿ, ಯಾರಿಗೆ ಏನು ಲಾಭ?; ಸ್ಪಷ್ಟ ಚಿತ್ರಣ ನೀಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ

Gadkari
Published on

ನವದೆಹಲಿ: ಕರೊನಾ ಸಂಕಷ್ಟಪೀಡಿತ ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡಲು 2021-22ರ ಕೇಂದ್ರ ಮುಂಗಡಪತ್ರದಲ್ಲಿ ಸ್ವಯಂಪ್ರೇರಣೆಯಿಂದ ಹಳೆಯ ವಾಹನ ಗುಜರಿಗೆ ಹಾಕುವ ಯೋಜನೆ ಘೋಷಿಸಲಾಗಿದೆ. ಇದರಿಂದ ಯಾರಿಗೆ ಏನೇನು ಲಾಭ ಆಗಲಿದೆ ಎಂಬ ಸ್ಪಷ್ಟ ಚಿತ್ರಣವನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ.

ಸ್ಕ್ರ್ಯಾಪ್​ಗೆ ತಮ್ಮ ವಾಹನಗಳನ್ನು ಹಾಕುವವರಿಗೆ ಆ ವಾಹನದ ಉತ್ಪಾದಕರು ಕೆಲವೊಂದು ಪ್ರಯೋಜನ ಗಳನ್ನು ಘೋಷಿಸಲಿದ್ದಾರೆ. ವಾಸ್ತವದಲ್ಲಿ ಸ್ಕ್ರ್ಯಾಪ್​ ನೀತಿ ಎಲ್ಲರಿಗೂ ಪ್ರಯೋಜನಕಾರಿ. ಅದು ಆರ್ಥಿಕತೆಯನ್ನು ಉತ್ತೇಜಿಸುವುದಲ್ಲದೆ, ಆಟೋಮೊಬೈಲ್ ಕ್ಷೇತ್ರಕ್ಕೂ ಚೈತನ್ಯ ತುಂಬಲಿದೆ. ಈ ಕ್ರಮದಿಂದಾಗಿ ಪರಿಸರ ಮಾಲಿನ್ಯವೂ ಕಡಿಮೆಯಾಗಿ, ಪರಿಸರಕ್ಕೂ ಒಳಿತಾಗಲಿದೆ ಎಂದು ಸಚಿವ ನಿತಿನ್ ಗಡ್ಕರಿ ವಿವರಿಸಿದ್ದಾರೆ.

ಬಿಡಿಭಾಗಗಳ ಮರುಬಳಕೆ: ಹಳೆಯ ವಾಹನಗಳನ್ನು ಸ್ಕ್ರ್ಯಾಪ್​​ಗೆ ಹಾಕಿದಾಗ ಅವುಗಳಿಂದ ಪ್ರತ್ಯೇಕಿಸಲಾಗುವ ಸ್ಟೀಲ್, ಪ್ಲಾಸ್ಟಿಕ್, ರಬ್ಬರ್, ಅಲ್ಯೂಮಿನಿಯಂ ಮತ್ತು ಇತರ ಬಿಡಿಭಾಗಗಳನ್ನು ಆಟೋಮೊಬೈಲ್ ಬಿಡಿಭಾಗಗಳ ಉತ್ಪಾದನೆಯಲ್ಲಿ ಮರುಬಳಕೆ ಮಾಡಲಾಗುವುದು. ಇದರಿಂದ ಹೊಸ ವಾಹನಗಳ ಉತ್ಪಾದನೆಯ ವೆಚ್ಚ ಶೇಕಡ 30-40 ಇಳಿಕೆಯಾಗಲಿದೆ. ಅದೇ ರೀತಿ, ವಾಹನಗಳಲ್ಲಿ ಹಸಿರು ಇಂಧನ, ವಿದ್ಯುತ್ ಬಳಕೆಗೆ ಸಂಬಂಧಿಸಿದ ಹೊಸ ಹೊಸ ತಂತ್ರಜ್ಞಾನ, ಆವಿಷ್ಕಾರಗಳಿಗೂ ಅವಕಾಶವಾಗಲಿದೆ. ಈ ಎಲ್ಲ ಬೆಳವಣಿಗೆಯಿಂದ ಕಚ್ಚಾತೈಲ ಆಮದಿಗೆ ತಗಲುವ 10 ಲಕ್ಷ ಕೋಟಿ ರೂ. ಕಡಿಮೆಯಾಗಲಿದೆ ಎಂದಿದ್ದಾರೆ ಗಡ್ಕರಿ.

ಪ್ರಸ್ತಾವಿತ ಪ್ರಯೋಜನ?: ನಾಲ್ಕು ಆಸನಗಳ ಹಳೆಯ ಸೆಡಾನ್ ಕಾರನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಈ ಕಾರಿನ ಮೌಲ್ಯ ಮೂರು ವರ್ಷಗಳಲ್ಲಿ 1.80 ಲಕ್ಷ ರೂ. ಕಡಿಮೆಯಾಗಬಹುದು. ಭಾರಿ ಗಾತ್ರದ ವಾಹನಗಳ ಬೆಲೆ ಮೂರು ವರ್ಷದಲ್ಲಿ 8 ಲಕ್ಷ ರೂ. ಕಡಿಮೆಯಾಗುತ್ತದೆ. ಈ ಲೆಕ್ಕ ಸಾಮಾನ್ಯವಾಗಿ ಚಾಲ್ತಿಯಲ್ಲಿದ್ದು, ಸರ್ಕಾರ ಇದನ್ನು ಪರಿಗಣಿಸಲಿದೆ.

ಹಳೇ ವಾಹನಗಳ ಮೇಲೆ ತೆರಿಗೆ: ಕೆಲವು ರಾಜ್ಯಗಳಲ್ಲಿ ಹಳೆಯ ವಾಹನಗಳ ಮೇಲೆ ಮಾಲಿನ್ಯ ತೆರಿಗೆ ವಿಧಿಸಲಾಗುತ್ತಿದೆ. ಇದಕ್ಕೆ ನಿಶ್ಚಿತ ಮಾನದಂಡವಿಲ್ಲ. ಮೋಟಾರು ವಾಹನ ಕಾಯ್ದೆಯ ಚೌಕಟ್ಟನ್ನು ಗಮನದಲ್ಲಿ ಇರಿಸಿಕೊಂಡು ತೆರಿಗೆ ವಿಧಿಸಲು ಬೇಕಾದ ನಿಯಮಗಳನ್ನು ರೂಪಿಸಬೇಕಿದೆ ಎಂದು ಹೆದ್ದಾರಿ ಸಚಿವಾಲಯ ತಿಳಿಸಿದೆ.

ಮಾನವ ಹಸ್ತಕ್ಷೇಪವಿಲ್ಲದ, ಭ್ರಷ್ಟಾಚಾರಕ್ಕೆ, ದಾಖಲೆ ತಿದ್ದುಪಡಿಗೆ ಅವಕಾಶವಿಲ್ಲದ ಫಿಟ್ನೆಸ್ ಟೆಸ್ಟ್ ಮಾಡುವುದಕ್ಕೆ ಬೇಕಾದ ಮೆಕಾನಿಸಂ ಅನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಸ್ಕ್ರ್ಯಾಪಿಂಗ್ ನೀತಿಯಂತೆ ಘೋಷಿಸಬೇಕಾದ ಇನ್​ಸೆಂಟಿವ್ ವಿಚಾರ ಸಂಬಂಧಪಟ್ಟ ಪಾಲುದಾರರ ಜತೆಗೆ ಸರ್ಕಾರ ಮಾತುಕತೆ ನಡೆಸುತ್ತಿದೆ. | ಗಿರಿಧರ್ ಅರಮನೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಾರ್ಯದರ್ಶಿ ಸೆಂಟರ್​ಗಳ ಸ್ಥಾಪನೆ: ಸ್ಕ್ರ್ಯಾಪಿಂಗ್ ನೀತಿ ಅನುಷ್ಠಾನಕ್ಕೆ ದೇಶದಾದ್ಯಂತ ಸರ್ಕಾರದ ಕಡೆಯಿಂದ ಮಾತ್ರವಲ್ಲದೆ, ಪಿಪಿಪಿ ಮಾದರಿ, ಖಾಸಗಿ ಪಾಲುದಾರಿಕೆ, ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಸ್ಕ್ರ್ಯಾಪಿಂಗ್ ಸೆಂಟರ್ ಸ್ಥಾಪಿಸಲಾಗುತ್ತದೆ. ಸ್ಕ್ರಾ್ಯಪ್ ಮೌಲ್ಯ ಮಾಲೀಕರಿಗೆ ನೀಡುವ ಪ್ರಸ್ತಾವನೆ ಇದ್ದು, ಸ್ಕ್ರ್ಯಾಪ್​ ಮಾಡುವಾಗ ವಾಹನಗಳ ಮೌಲ್ಯಮಾಪನ ಮಾಡಿ, ಆ ಮೊತ್ತವನ್ನು ವಾಹನ ಮಾಲೀಕರಿಗೆ ನೀಡಲಾಗುವುದು ಎಂಬ ಅಂಶ ಕರಡು ಪ್ರಸ್ತಾವನೆಯಲ್ಲಿದೆ.

ಹೊಸ ಸ್ಕ್ರ್ಯಾಪ್​ ನೀತಿ

  • ಮೂರು ಬಾರಿ ಫಿಟ್ನೆಸ್ ಟೆಸ್ಟ್ ಫೇಲ್ ಆದ ವಾಹನಗಳು ಕಡ್ಡಾಯವಾಗಿ ಸ್ಕ್ರ್ಯಾಪ್​ ಆಗಲಿವೆ.
  • ಸ್ವಯಂಪ್ರೇರಿತ ಸ್ಕ್ರ್ಯಾಪ್​ ನಿರ್ಧಾರವನ್ನೂ ಫಿಟ್ನೆಸ್ ಟೆಸ್ಟ್ ಆಧರಿಸಿಯೇ ನಿರ್ಧರಿಸಲಾಗುತ್ತದೆ.
  • ಹಳೆಯ ವಾಹನ ಗುಜರಿಗೆ ಹಾಕಿದರೆ ಹೊಸ ವಾಹನ ಖರೀದಿಗೆ ಉತ್ತೇಜನ.
  • ಮಾಲಿನ್ಯಕಾರಕ ವಾಹನಗಳ ಮೇಲೆ ತೆರಿಗೆ ಹೊರೆ- ಹಸಿರು ತೆರಿಗೆ ಮತ್ತು ಇತರ ಸೆಸ್, ಭಾರಿ ಮೊತ್ತದ ದಂಡಗಳು ಖಚಿತ.
  • ಭಾರತವನ್ನು ಜಗತ್ತಿನ ಆಟೋಮೊಬೈಲ್ ಕ್ಷೇತ್ರದ ಹಬ್ ಆಗಿ ರೂಪಿಸುವುದು.
  • ಆಟೋಮೊಬೈಲ್ ಕ್ಷೇತ್ರದ ವಹಿವಾಟು ಮತ್ತು ರಫ್ತು ಹೆಚ್ಚಿಸುವುದು, ಕಚ್ಚಾತೈಲ ಆಮದು ಇಳಿಸುವುದು.

ನೀತಿ ಅನುಷ್ಠಾನದ ಪರಿಣಾಮ

  • ಕನಿಷ್ಠ 30% ಆಟೋಮೊಬೈಲ್ ಉದ್ಯಮ ವಹಿವಾಟು ಹೆಚ್ಚಾಗಲಿದ್ದು, ಉದ್ಯೋಗ ಸೃಜನೆಯಾಗಲಿದೆ.
  • 20 ವರ್ಷ ಮೇಲ್ಪಟ್ಟ 51 ಲಕ್ಷ ಹಳೆಯ ಲಘು ವಾಹನಗಳು ಗುಜರಿ ಸೇರಲಿವೆ. 15 ವರ್ಷ ಮೇಲ್ಪಟ್ಟ 34 ಲಕ್ಷ ಲಘು ವಾಹನಗಳು ಕೂಡ ಗುಜರಿ ಸೇರಲಿವೆ.
  • 15 ವರ್ಷ ಮೇಲ್ಪಟ್ಟ ಮಾನ್ಯತೆ ಹೊಂದಿದ ಫಿಟ್ನೆಸ್ ಪ್ರಮಾಣಪತ್ರವಿಲ್ಲದ 17 ಲಕ್ಷ ಮಧ್ಯಮ, ದೊಡ್ಡ ಗಾತ್ರದ ವಾಹನಗಳು ಸ್ಕ್ರ್ಯಾಪ್​ ಆಗಲಿವೆ.
  • ಸ್ಕ್ರ್ಯಾಪ್​ ನೀತಿ ಅನುಷ್ಠಾನದ ಮೂಲಕ ದೇಶದಾದ್ಯಂತ ಒಟ್ಟು ಒಂದು ಕೋಟಿಗೂ ಅಧಿಕ ವಾಹನಗಳು ಗುಜರಿಗೆ ಸೇರಲಿವೆ.
  • ವಾಹನ ಕ್ಷೇತ್ರದ ವಹಿವಾಟು ಈಗ ಇರುವ 4.50 ಲಕ್ಷ ಕೋಟಿ ರೂಪಾಯಿಯಿಂದ 10 ಲಕ್ಷ ಕೋಟಿ ರೂಪಾಯಿಗೆ ಏರಿಕೆ.
  • ವಾಹನ ರಫ್ತು ವಹಿವಾಟನ್ನು 1.45 ಲಕ್ಷ ಕೋಟಿ ರೂಪಾಯಿಯಿಂದ 3 ಲಕ್ಷ ಕೋಟಿ ರೂಪಾಯಿಗೆ ಏರಿಸುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net