

ಬೆಂಗಳೂರು: ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರಾಣಪ್ರತಿಷ್ಠೆ ನಿಮಿತ್ತ ಸ್ವಚ್ಛ ತೀರ್ಥಕ್ಷೇತ್ರ ಅಭಿಯಾನಕ್ಕೆ ಬಿಜೆಪಿ ನಾಯಕರ ಸಾಥ್ ನೀಡಿ, ಕೇಸರಿಪಡೆ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟ ನಾಯಕರು, ರಾಷ್ಟ್ರಮಂದಿರದ ಭವ್ಯ ಸ್ವಾಗತಕ್ಕಾಗಿ ಸ್ವಚ್ಛ ತೀರ್ಥ ಅಭಿಯಾನದಲ್ಲಿ ಭಾನುವಾರ ಉತ್ಸಾಹದಿಂದ ಪಾಲ್ಗೊಂಡು, ಕಾರ್ಯಕರ್ತರಲ್ಲಿ ಹುರುಪು ತುಂಬಿದರು.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವರು, ಸಂಸದ-ಶಾಸಕರು ಬಹುತೇಕ ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರ ಕೇಂದ್ರ ಸ್ಥಾನದ ಒಂದು ದೇವಸ್ಥಾನದಲ್ಲಿ ಕಸ ಬಳಿದು ಎತ್ತಿ ಹಾಕಿ, ನೀರೆತ್ತಿ ತೊಳೆದು ಚೊಕ್ಕಟಗೊಳಿಸಿದರು.
224 ವಿಧಾನಸಭೆ ಕ್ಷೇತ್ರಗಳ ತಲಾ ಒಂದು ದೇವಸ್ಥಾನದಲ್ಲಿ ಸ್ವಚ್ಛತಾ ಕಾಯ ನಡೆದಿದೆ. ಇಷ್ಟಲ್ಲದೆ, ಅನೇಕ ಮುಖಂಡರು ಸ್ವಯಂಪ್ರೇರಿತವಾಗಿ ತಂಡ ಕಟ್ಟಿಕೊಂಡು ಗುಡಿಗಳನ್ನು ಸ್ವಚ್ಛ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಶಿಕಾರಿಪುರದ ಹುಚ್ಚರಾಯ ದೇವಸ್ಥಾನದ ಆವರಣವನ್ನು ಬಿ.ವೈ.ವಿಜಯೇಂದ್ರ ಸ್ವಚ್ಛಗೊಳಿಸಿ ಈ ಅಭಿಯಾನ ಜ.21ರವರೆಗೆ ಎಲ್ಲೆಡೆ ನಡೆಯಲಿದೆ. ಜ.22ರಂದು ಪ್ರತಿ ಮನೆಯಲ್ಲಿ ರಾಮಜ್ಯೋತಿ ಬೆಳಗುವ ಮೂಲಕ ಶ್ರೀರಾಮನನ್ನು ಸ್ವಾಗತಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿನ ಜಯನಗರದ ವಿನಾಯಕ ದೇವಸ್ಥಾನದಲ್ಲಿ ಆರ್.ಅಶೋಕ್ ಸ್ವಚ್ಛತಾ ಕಾರ್ಯ ನಡೆಸಿದರೆ ಸಂಸದ ಮುನಿಸ್ವಾಮಿ ಇನ್ನಿತರ ಮುಖಂಡರು ನೆರವಾದರು. ಮಲ್ಲೇಶ್ವರದ ಕೋದಂಡರಾಮ ದೇವಸ್ಥಾನದಲ್ಲಿ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಚಿವರಾದ ಕೆ.ಗೋಪಾಲಯ್ಯ, ಮುನಿರತ್ನ ಮತ್ತಿತರ ಶಾಸಕರು ಅಭಿಯಾನದಲ್ಲಿ ಪಾಲ್ಗೊಂಡರೆ, ಕಾರ್ಯಕರ್ತರು ಕೈಜೋಡಿಸಿದರು.