

ಒಂದೆಡೆ ಆಡಳಿತ ಸುಧಾರಣೆಯ ಆಶಯಗಳು, ಆ ಕುರಿತಾದ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಸರ್ಕಾರವೂ ಮಹತ್ವದ ಸುಧಾರಣೆಗಳನ್ನು ತರುತ್ತೇವೆ ಎಂಬ ಆಶ್ವಾಸನೆ ನೀಡುತ್ತದೆ. ಆದರೆ, ಸರ್ಕಾರದ ಮೂಗಿನಡಿಯಲ್ಲೇ, ಪ್ರಮುಖ ಇಲಾಖೆಯಲ್ಲೇ ಅಕ್ರಮ/ಅವ್ಯವಹಾರ ನಡೆಯುವುದು ತೀರಾ ದುರದೃಷ್ಟಕರ. ಪಾರದರ್ಶಕ ಆಡಳಿತಕ್ಕಾಗಿ ಹೊಸ ಮತ್ತು ಬಿಗಿ ನಿಯಮಗಳು ಬರುತ್ತಲೇ ಇವೆ. ಇದರ ಅನುಷ್ಠಾನ ಪರಿಣಾಮಕಾರಿಯಾಗಿ ನಡೆಯುವ ಮುನ್ನವೇ ಅಪಸವ್ಯಗಳು ಬಹಿರಂಗಗೊಳ್ಳುತ್ತಿವೆ. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿ ಜ್ಯೇಷ್ಠತೆಯ ಅರ್ಹತೆ ಇಲ್ಲದಿದ್ದರೂ ಬಡ್ತಿ ಪಡೆದವರಿಗೀಗ ಹಿಂಬಡ್ತಿಯ ಶಿಕ್ಷೆಯಾಗಿದ್ದರೆ, ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿ ಪ್ರಮೋಷನ್ ಪಡೆದವರಿಗೆ ಹಿಂಬಡ್ತಿ ಜತೆಗೆ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಬಂಧನದ ಭೀತಿಯೂ ಎದುರಾಗಿದೆ. ಈ ಪ್ರಕರಣ ಗಂಭೀರವಾದ ಕಳವಳ ಮತ್ತು ಜಿಜ್ಞಾಸೆಯನ್ನು ಹುಟ್ಟುಹಾಕಿದೆ. ಇತರ ಇಲಾಖೆಗಳಲ್ಲಿ ಈ ಬಗೆಯ ಪ್ರಕರಣಗಳು, ಅಕ್ರಮಗಳು ನಡೆದಿವೆಯೇ ಎಂಬ ಅನುಮಾನ ಬಲಗೊಂಡಿದೆ. ನಕಲಿ ಪ್ರಮಾಣಪತ್ರ ನೀಡಿ ಬಡ್ತಿ ಪಡೆದಿರುವುದು ನೈತಿಕತೆಗೆ ಕಪು್ಪಚುಕ್ಕೆಯೇ ಸರಿ.
ಅರ್ಹತೆ ಇಲ್ಲದಿದ್ದರೂ 16 ಅಧಿಕಾರಿಗಳಿಗೆ ಸಹಾಯಕ ನಿರ್ದೇಶಕ ಹುದ್ದೆಯಿಂದ ಉಪ ನಿರ್ದೇಶಕ ಹುದ್ದೆಗೆ 2018ರಲ್ಲಿ ಬಡ್ತಿ ಕೊಡಲಾಗಿದೆ. ಹೊರ ರಾಜ್ಯದ ವಿಶ್ವವಿದ್ಯಾಲಯ, ರಾಜ್ಯ ಮುಕ್ತ ವಿವಿ ಮತ್ತು ದೂರಶಿಕ್ಷಣದ ಮೂಲಕ ಪಡೆದಿರುವ ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿದ 37 ಅಧಿಕಾರಿಗಳಿಗೆ ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಯಿಂದ ಸಹಾಯಕ ನಿರ್ದೇಶಕ ಹುದ್ದೆಗೆ ಬಡ್ತಿ ಕೊಟ್ಟು ಅಕ್ರಮ ಎಸಗಲಾಗಿದೆ. ಇಲಾಖೆ ಪರಿಶೀಲನೆಯಲ್ಲಿ ಇದು ಬಯಲಾಗಿದೆ.
ಇಂಥ ಕೃತ್ಯ ಎಸಗಿದವರು, ಅದಕ್ಕೆ ಬೆಂಬಲವಾಗಿ ನಿಂತವರು ಮತ್ತು ಈ ಬಗೆಯ ಅಕ್ರಮ ಜಾಲಗಳನ್ನು ವಿಸ್ತರಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರ ಇಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇದೆ. ಇಲ್ಲದಿದ್ದಲ್ಲಿ ಕಾನೂನಿನ ಅಥವಾ ಶಿಕ್ಷೆಯ ಭಯ ಇಲ್ಲದೆ ಇಂಥ ಮೋಸಗಳನ್ನು ಎಸಗುವವರ ಸಂಖ್ಯೆ ಹೆಚ್ಚಬಹುದು. ಇಲಾಖೆಗಳ ಪರಿಶೀಲನೆ ಪ್ರಕ್ರಿಯೆಯೂ ತ್ವರಿತವಾಗಿ ಮತ್ತು ಪರಿಣಾಮಕಾರಿ ನಡೆದರೆ ಇಂಥ ಘಟನೆಗಳನ್ನು ತಡೆಯಬಹುದು ಇಲ್ಲವೆ ಬೇಗನೆ ಪತ್ತೆ ಹಚ್ಚಬಹುದು. ಇನ್ನಾದರೂ, ಎಚ್ಚೆತ್ತುಕೊಂಡು ಸ್ವಚ್ಛ ಆಡಳಿತದತ್ತ ಗಮನ ನೀಡಲಿ. ಎಲ್ಲ ಇಲಾಖೆಗಳಲ್ಲೂ ಸೂಕ್ತ ಪರಿಶೀಲನೆ ಕೈಗೊಳ್ಳಲಿ.