ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂಗೆ ಕ್ಲೀನ್​ಚಿಟ್?

ವಿಜಯವಾಣಿ (4)
Published on

ಹೈಕೋರ್ಟ್​ಗೆ ವರದಿ ಸಲ್ಲಿಸಲು ಲೋಕಾ ತಯಾರಿ | ನಾಳೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವ ಸಾಧ್ಯತೆ

ಮೈಸೂರು: ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಆರೋಪ ಪ್ರಕರಣದ ಕುರಿತು ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು ಸಮಗ್ರ ವರದಿಯನ್ನು ಜ.25ರಂದು ಹೈಕೋರ್ಟ್​ಗೆ ಸಲ್ಲಿಸುವ ಸಾಧ್ಯತೆ ಇದೆ. 14 ನಿವೇಶನಗಳ ಹಂಚಿಕೆಯಲ್ಲಿ 50:50 ಅನುಪಾತ ಅನುಸರಿಸಲಾಗಿದೆ. ಸೈಟ್ ಹಂಚಿಕೆ ವಿಚಾರದಲ್ಲಿ ಮುಡಾ ನಿಯಮ ಉಲ್ಲಂಘಿಸಲಾಗಿದ್ದು, ಅಧಿಕಾರಿಗಳ ಲೋಪವಿದೆ. ಆದರೆ, ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಪ್ರಭಾವ ಬೀರಿರುವುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಲೋಕಾಯುಕ್ತ ಎಸ್​ಪಿ ಟಿ.ಜೆ. ಉದೇಶ್ ನೇತೃತ್ವದ ತಂಡವು ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸಿದೆ. ಜ.25ಕ್ಕೆ ಹೈಕೋರ್ಟ್​ಗೆ ವರದಿ ನೀಡಬೇಕಿದ್ದು, ಇದಕ್ಕಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಲೋಕಾಯುಕ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಮೂಲಕ ನಿಗದಿತ ದಿನದಂದು ಹೈಕೋರ್ಟ್​ಗೆ ಪೂರ್ಣ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗುತ್ತದೆ. ಈಗಾಗಲೇ ಸುಮಾರು 400 ಪುಟಗಳ ಮಧ್ಯಂತರ ವರದಿಯನ್ನು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಆರೋಪಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎನ್.ಪಾರ್ವತಿ, ಬಾವಮೈದ ಮಲ್ಲಿಕಾರ್ಜುನಸ್ವಾಮಿ ಹಾಗೂ ಜಮೀನು ಮಾಲೀಕ ದೇವರಾಜು ಅವರನ್ನು ಲೋಕಾಯುಕ್ತ ಪೊಲೀಸರು ಈಗಾಗಲೇ ವಿಚಾರಣೆ ಮಾಡಿದ್ದಾರೆ. ಅಲ್ಲದೆ ಸಂಬಂಧಪಟ್ಟ ಕೆಲ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಆಧರಿಸಿ ವರದಿ ತಯಾರಿಸಿದ್ದಾರೆ.

ದಾಖಲೆ ಪರಿಶೀಲನೆ: ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ಮುಡಾ ಕಚೇರಿಯಲ್ಲಿ ಬುಧವಾರ, ಗುರುವಾರವೂ ದಾಖಲಾತಿ ಪರಿಶೀಲನಾ ಕಾರ್ಯ ನಡೆಸಿದ್ದಾರೆ.

ಸಂದೇಹ ನಿಜವಾಗುತ್ತಿದೆ

ಶಿವಮೊಗ್ಗ: ಮುಡಾ ಹಗರಣದಲ್ಲಿ ಲೋಕಾಯುಕ್ತ ತನಿಖೆ ಪಾರದರ್ಶಕವಾಗಿ ನಡೆಯುವುದಿಲ್ಲ ಎಂದು ಈ ಹಿಂದೆಯೇ ಬಿಜೆಪಿ ಆರೋಪಿಸಿತ್ತು. ಈಗ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿಗೆ ಲೋಕಾಯುಕ್ತ ತನಿಖೆಯಲ್ಲಿ ಕ್ಲೀನ್​ಚಿಟ್ ನೀಡಲಾಗಿದೆ ಎನ್ನಲಾಗುತ್ತಿದೆ. ಒಂದು ವೇಳೆ ಕ್ಲೀನ್​ಚಿಟ್ ನೀಡಿದರೆ ನಮ್ಮ ಆರೋಪ ನಿಜವಾದಂತೆಯೇ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ ಎಂಬುದು ಸಾಬೀತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದರು. ಈಗಾಗಲೇ ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಮುಡಾ ಹಗರಣ ಆಳ, ಅಗಲ ಎಲ್ಲವೂ ಬಹಿರಂಗವಾಗಿದೆ. ಒಂದು ವೇಳೆ ಸಿಎಂ ಹಾಗೂ ಅವರ ಪತ್ನಿಗೆ ಕ್ಲೀನ್​ಚಿಟ್ ನೀಡಿದರೆ ಬಿಜೆಪಿ ನಿಶ್ಚಿತವಾಗಿಯೂ ಹೋರಾಟ ರೂಪಿಸಲಿದೆ ಎಂದು ಹೇಳಿದರು.

ಬಿಜೆಪಿಯಿಂದ ಮತ್ತೆ ಹೋರಾಟ

ಬೆಂಗಳೂರು: ಮುಡಾ ಅಕ್ರಮ ಮುಚ್ಚಿ ಹಾಕಲು ಲೋಕಾಯುಕ್ತ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರದಡಿ ಕೆಲಸ ಮಾಡುತ್ತಾರೆ. ವರ್ಗಾವನೆ, ಬಡ್ತಿ ಪ್ರತಿಯೊಂದು ಆಡಳಿತಾತ್ಮಕ ವಿಷಯದಲ್ಲಿ ಸರ್ಕಾರದ ನೆರವು ಬೇಕಿರುತ್ತದೆ. ಹೀಗಾಗಿ ವರದಿ ನೀಡಿದರೂ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್​ಚಿಟ್ ನೀಡುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತಪಡಿಸಿದರು. ನಿಜಾಂಶ ಹೊರಬರಲು ಮುಡಾ ಅಕ್ರಮದ ತನಿಖೆ ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿ ಬಿಜೆಪಿ ಮತ್ತೆ ಹೋರಾಟ ಆರಂಭಿಸಲಿದೆ. ಈ ಬೇಡಿಕೆ ಈಡೇರುವ ತನಕ ಹೋರಾಟ ಮುಂದುವರಿಸಲಿದೆ ಎಂದು ಎಚ್ಚರಿಸಿದರು.

ಮುಡಾ ಪ್ರಕರಣದ ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು, ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್​ಚಿಟ್ ನೀಡಿರುವ ನಿರೀಕ್ಷೆ ಇದೆ. ಇದರಿಂದ ನನ್ನ ಹೋರಾಟಕ್ಕೆ ಹಿನ್ನಡೆಯಾಗಲ್ಲ. | ಸ್ನೇಹಮಯಿ ಕೃಷ್ಣ, ಆರ್​ಟಿಐ ಕಾರ್ಯಕರ್ತ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ, ಬಾಮೈದನ ವಿಚಾರಣೆ ಕುರಿತು ಇಡಿ ಮಾಹಿತಿ ನೀಡಿದೆ. ಆದರೆ ಲೋಕಾಯುಕ್ತರು ಏಕೆ ಯಾವುದನ್ನೂ ಬಹಿರಂಗಪಡಿಸಿಲ್ಲ. ಲೋಕಾಯುಕ್ತ ಅಧಿಕಾರಿಗಳ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. | ಟಿ.ಎಸ್.ಶ್ರೀವತ್ಸ ಬಿಜೆಪಿ ಶಾಸಕ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿ ಗಳು ಕ್ಲೀನ್​ಚಿಟ್ ನೀಡಿರುವ ಬಗ್ಗೆ ಮಾಹಿತಿಯಿಲ್ಲ. | ಸಿದ್ದರಾಮಯ್ಯ, ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net