

ಚಂಡೀಗಢ: ಸ್ಮಾರ್ಟ್ಫೋನ್ ಯುಗದಲ್ಲಿ ಅನುಕೂಲಕ್ಕಿಂತ ಅನಾನುಕುಲತೆಗಳೇ ಹೆಚ್ಚಾಗುತ್ತಿದ್ದು, ಇದರಿಂದ ಜನರು ಬಾಧಿತರಾಗುತ್ತಿದ್ದಾರೆ. ತಂತ್ರಜ್ಞಾನದಿಂದ ಎಷ್ಟು ಅನುಕೂಲಗಳಿದೆಯೋ ಅಷ್ಟು ಅನಾನುಕೂಲತೆ ಅಷ್ಟೇ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇದೀಗ ವಿದ್ಯಾರ್ಥಿಗಳ ಗುಂಪೊಂದು ಶಿಕ್ಷಕರ (Teacher) ಕುರ್ಚಿಯಡಿ ಬಾಂಬ್ (Bomb) ಇಟ್ಟು ಸಿಡಿಸಿರುವ ಘಟನೆ ನಡೆದಿದ್ದು, ಇದು ಚರ್ಚಾಸ್ಪದ ವಿಚಾರವಾಗಿದೆ.
ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕೃತ್ಯ ಎಸಗಿದ ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತು ಮಾಡಲಾಗಿದೆ. ಘಟನೆಯಲ್ಲಿ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದ್ದು, ಶಿಕ್ಷಣ ಇಲಾಖೆ ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ನರೇಶ್ ಮೆಹ್ತಾ, ವಿದ್ಯಾರ್ಥಿಗಳ ಗುಂಪೊಂದಕ್ಕೆ ವಿಜ್ಞಾನ ಶಿಕ್ಷಕಿ (Teacher) ಬೈದಿದ್ದರು. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳ ಗುಂಪು ಯೂಟ್ಯೂಬ್ ನೋಡಿ ಬಾಂಬ್ (Bomb) ತಯಾರಿಸುವುದನ್ನು ಕಲಿತು ಅದನ್ನು ತಂದು ಶಿಕ್ಷಕಿ ಕೂರುವ ಕುರ್ಚಿಯ ಕೆಳಗೆ ಅಂಟಿಸಿ ರಿಮೋಟ್ ಮೂಲಕ ಅದನ್ನು ಸಿಡಿಸಿದ್ದಾರೆ. ಸ್ಫೋಟದ ರಭಸಕ್ಕೆ ಕುರ್ಚಿಯಲ್ಲಿ ರಂದ್ರ ಸೃಷ್ಟಿಯಾಗಿದ್ದು, ಶಿಕ್ಷಕಿಗೆ ಯಾವುದೇ ಗಾಯಗಳಾಗಿಲ್ಲ.
ಓರ್ವ ಕುರ್ಚಿಯಡಿ ಬಾಂಬ್ ಇಟ್ಟಿದ್ದರೆ ಇನ್ನೊಬ್ಬ ರಿಮೋಟ್ನಿಂದ ಬಟನ್ ಒತ್ತಿ ಸಿಡಿಸಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣವಾದ 13 ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತು ಮಾಡಲಾಗಿದ್ದು, ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನರೇಶ್ ಮೆಹ್ತಾ ತಿಳಿಸಿದ್ಧಾರೆ.