

ನವದೆಹಲಿ: ನವೆಂಬರ್ 22ರಿಂದ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೆ (Border-Gavaskar Trophy) ಸಂಬಂಧಿಸಿದಂತೆ ಈಗಾಗಲೇ ಭಾರತ ಹಾಗೂ ಆಸ್ಟ್ರೇಲಿಯಾ ತಂಡವು ಅಭ್ಯಾಸ ನಡೆಸುತ್ತಿದ್ದು, ನಾಯಕ ರೋಹಿತ್ ಶರ್ಮ (Rohit Sharma) ಹೊರತುಪಡಿಸಿ ತಂಡದ ಬಹುತೇಕ ಆಟಗಾರರು ಈಗಾಗಲೇ ಆಸ್ಟ್ರೇಲಿಯಾದಲ್ಲಿದ್ದು, ಕೋಚ್ ಗೌತಮ್ ಗಂಭೀರ್ (Gautam Gambhir) ಮಾರ್ಗದರ್ಶನದಲ್ಲಿ ತಯಾರಿ ನಡೆಸುತ್ತಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ ನಾಯಕ ರೋಹಿತ್ ಶರ್ಮ ಕ್ರಿಕೆಟ್ನಿಂದ ಬಿಡುವು ಪಡೆದುಕೊಂಡಿದ್ದು, ಸರಣಿಯ ಮೊದಲೆರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ನವೆಂಬರ್ 15ರಂದು ರೋಹಿತ್ ಪತ್ನಿ ರಿತಿಕಾ ಗಂಡು ಮಗುವುಗೆ ಜನ್ಮ ನೀಡಿದ್ದು, ರೋಹಿತ್ ಶರ್ಮಾ ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ಹಾರಲಿದ್ದಾರೆ. ಇವರ ಜೊತೆಗೆ ತಂಡದಲ್ಲಿಲ್ಲದ ಮತ್ತೊಬ್ಬ ಆಟಗಾರ ಕೂಡ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾಕ್ಕೆ ತೆರಳಲು ರೋಹಿತ್ ಶರ್ಮ (Rohit Sharma) ಈಗಾಗಲೇ ತಯಾರಿ ನಡೆಸಿದ್ದು, ಸರಣಿಯ ಮೊದಲನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರೆ ಎಂಬುದು ಖಚಿತವಾಗಿಲ್ಲ. ಎರಡನೇ ಪಂದ್ಯದಲ್ಲಿ ರೋಹಿತ್ ಕಣಕ್ಕಿಳಿಯುವುದು ಪಕ್ಕಾ ಎಂದು ಹೇಳಲಾಗಿದ್ದು, ಇದೀಗ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಕೂಡ ರೋಹಿತ್ ಶರ್ಮಾ ಅವರೊಂದಿಗೆ ಬಾರ್ಡರ್ ಗವಾಸ್ಕರ್ (Border-Gavaskar Trophy) ಟ್ರೋಫಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.
ಗಾಯ ಹಾಗೂ ಫಿಟ್ನೆಸ್ ಸಮಸ್ಯೆಯಿಂದಾಗಿ ಒಂದು ವರ್ಷಗಳ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದ ಮೊಹಮ್ಮದ್ ಶಮಿ (Mohammed Shami) ಸದ್ಯ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದು, ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ಮಾತುಕತೆ ಶುರುವಾಗಿದ್ದು, ಹೀಗಾಗಿ ಸರಣಿಯ ಎರಡನೇ ಪಂದ್ಯಕ್ಕೂ ಮುನ್ನ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದು ಎಂದು ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶಮಿಯ ಭವಿಷ್ಯ ಎನ್ಸಿಎ (NCA) ನೀಡುವ ಫಿಟ್ನೆಸ್ ವರದಿಯ ಮೇಲೆ ನಿರ್ಧಾರವಾಗಲಿದೆ. ಒಂದು ವೇಳೆ ಶಮಿ ಪೂರ್ಣ ಫಿಟ್ ಆಗಿದ್ದಾರೆ ಎಂಬ ವರದಿ ಬಂದರೆ, ಅವರು ರೋಹಿತ್ ಶರ್ಮಾ ಜೊತೆಗೆ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಮೊದಲ ಪಂದ್ಯದಲ್ಲಿ ಶಮಿ ಆಡುವುದು ಅನುಮಾನವಾಗಿದ್ದರೂ, ಎರಡನೇ ಪಂದ್ಯದಿಂದ ಅವರು ತಂಡದಲ್ಲಿ ಸ್ಥಾನ ಪಡೆಯುವುದು ಪಕ್ಕಾ ಆಗಿದೆ.
ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar) ಟೆಸ್ಟ್ ಸರಣಿಯೂ ನವೆಂಬರ್ 22ಕ್ಕೆ ಆರಂಭವಾಗಲಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.