

ಪಟ್ನಾ: ಮನೆಯ ಟೆರೆಸ್ನಲ್ಲಿ ಓದಿಕೊಳ್ಳುತ್ತಿದ್ದ ವಿದ್ಯಾರ್ಥಿನಿಯನ್ನು ಮಂಗಗಳ ಹಿಂಡೊಂದು ತಳ್ಳಿ ಸಾಯಿಸಿರುವ ಘಟನೆ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಪ್ರಿಯಾ ಕುಮಾರ್ ಎಂದು ಗುರುತಿಸಲಾಗಿದ್ದು, ಜನವರಿ 25ರಂದು ಸಿವಾನ್ ಜಿಲ್ಲೆಯ ಮಘರ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಭಗವಾನ್ಪುರ್ ಎಸ್ಎಚ್ಒ ಸುಜಿತ್ ಕುಮಾರ್ ಚೌಧರಿ, ಚಳಿ ಇದ್ದ ಕಾರಣ ಪ್ರಿಯಾ ಮನೆಯ ಟೆರೆಸ್ನಲ್ಲಿ ಓದಿಕೊಳ್ಳುತ್ತಿದ್ದರು. ಈ ವೇಳೆ ಮಂಗಗಳ ಹಿಂಡೊಂದು ಏಕಾಏಕಿ ಆಕೆಯ ಮೇಲೆ ದಾಳಿ ಮಾಡಿದ್ದು, ತಪ್ಪಿಸಿಕೊಳ್ಳಲು ಆಕೆ ಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಕೂಗಿಕೊಂಡಿದ್ದು, ಮಂಗಗಳು ಆಕೆಯನ್ನು ಟೆರೆಸ್ನಿಂದ ತಳ್ಳಿವೆ.
ಗಂಭೀರವಾಗಿ ಗಾಯಗೊಂಡಿದ್ದ ಪ್ರಿಯಾ:ಳನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಕುಟುಂಬಸ್ಥರು ಪೋಸ್ಟ್ಮಾರ್ಟಮ್ ಮಾಡಿಸಲು ನಿರಾಕರಿಸಿದ್ದು, ಯಾವುದೇ ದೂರನ್ನು ದಾಖಲಿಸಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಪಡೆಯಲಾಗಿದೆ ಎಂದು ಭಗವಾನ್ಪುರ್ ಎಸ್ಎಚ್ಒ ಸುಜಿತ್ ಕುಮಾರ್ ಚೌಧರಿ ತಿಳಿಸಿದ್ದಾರೆ.