

US President:ಶ್ವೇತಭವನದ ಓವಲ್ ಕಚೇರಿಯಲ್ಲಿ ಶುಕ್ರವಾರ(ಫೆ.28) ಖನಿಜ ಒಪ್ಪಂದ ವಿಚಾರವಾಗಿ ಮಾತುಕತೆ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನಡುವೆ ಜಟಾಪಟಿ ನಡೆದಿದೆ ಎಂದು ವರದಿಯಾಗಿದೆ.
ತೀವ್ರ ವಾಗ್ವಾದ ಬಳಿಕ ಖನಿಜ ಒಪ್ಪಂದಕ್ಕೆ ಸಹಿ ಹಾಕದೇ ಸಭೆಯ ಮಧ್ಯದಿಂದ ವೊಲೊಡಿಮಿರ್ ಝೆಲೆನ್ಸ್ಕಿ ಹೊರ ನಡೆದಿದ್ದಾರೆ.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಝೆಲೆನ್ಸ್ಕಿ, ಖಂಡಿತವಾಗಿಯೂ ಎರಡೂ ದೇಶಗಳ ನಡುವಿನ ಸಂಬಂಧವನ್ನು ಸರಿಪಡಿಸಬಹುದು. ಅಮೆರಿಕವನ್ನು ನಮ್ಮ ಪಾಲುದಾರನಾಗಿ ಕಳೆದುಕೊಳ್ಳಲು ಬಯಸುವುದಿಲ್ಲ. ಟ್ರಂಪ್ ನಮ್ಮ ಪರವಾಗಿರಬೇಕೆಂದು ನಿಜವಾಗಿಯೂ ಬಯಸುತ್ತೇನೆ ಎಂದು ಹೇಳಿದರು.
ಮತ್ತೊಂದು ವರದಿಯ ಪ್ರಕಾರ, ಮತ್ತೊಂದು ಆಕ್ರಮಣದ ವಿರುದ್ಧ ಭದ್ರತಾ ಖಾತರಿಗಳನ್ನು ಪಡೆಯುವವರೆಗೆ ಯುಕ್ರೇನ್ ರಷ್ಯಾದೊಂದಿಗೆ ಶಾಂತಿ ಮಾತುಕತೆಗಳಲ್ಲಿ ತೊಡಗುವುದಿಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಇಷ್ಟು ವರ್ಷಗಳ ಕಾಲ ನಿಮ್ಮ (ಯುಕ್ರೇನ್) ಜತೆಗೆ ಅಮೆರಿಕ ಬೆಂಬಲವಾಗಿ ನಿಂತಿದೆ. ಯಾರು ಏನೇ ಹೇಳಿದರೂ ನಿಮಗೆ ಅಮೆರಿಕ ಸಹಾಯ ಮಾಡಿದೆ. ಆದರೆ, ನೀವು ನೀವು ಕದನ ವಿರಾಮಕ್ಕೆ ಒಪ್ಪದೆ ವಿತಂಡವಾದ ಮಾಡಿದ್ದೀರಿ. ನಾವು ಸಾವು ತಡೆಗೆ ಯತ್ನಿಸಿದರೆ ನೀವು ಹೆಣ ನೋಡಲು ಹೋಗುತ್ತೀರಿ ಎಂದು ಝೆಲೆನ್ಸ್ಕಿ ವಿರುದ್ಧ ಟ್ರಂಪ್ ಬೇಸರ ಹೊರಹಾಕಿದ್ದಾರೆ.
ನಾವು ಯಾವುದೇ ದೇಶದ ವ್ಯಾಪ್ತಿಗೆ ಒಳಪಟ್ಟಿಲ್ಲ. ನಾವು ಯಾರ ಮೇಲೂ ದಾಳಿ ಮಾಡಲಿಲ್ಲ. ರಷ್ಯಾದವರೇ ನಮ್ಮ ಮೇಲೆ ದಾಳಿ ಮಾಡಿದ್ದು ಎಂದು ಟ್ರಂಪ್ ಹೇಳಿಕೆ ವಿರುದ್ಧ ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕೂಡ ಕೆಂಡಾಮಂಡಲರಾಗಿದ್ದಾರೆ.(ಏಜೆನ್ಸೀಸ್)