

ಪಣಜಿ : ಗೋವಾದಲ್ಲಿ ಜಾರಿಯಲ್ಲಿರುವ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂವಿಧಾನದ ರಚನಾಕಾರರು ಭಾರತಕ್ಕಾಗಿ ಪ್ರಸ್ತಾಪಿಸಿದ ಕಾನೂನು ವ್ಯವಸ್ಥೆ ಇದೇ ಆಗಿದ್ದು, ರಾಜ್ಯದಲ್ಲಿ ಅದನ್ನು ಪ್ರಾಯೋಗಿಕವಾಗಿ ಕಾಣುವ ಅವಕಾಶವಿದೆ ಎಂದಿದ್ದಾರೆ.
ಗೋವಾದಲ್ಲಿ ಬಾಂಬೆ ಹೈಕೋರ್ಟ್ನ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಸಂವಿಧಾನದ ರಚನೆಕಾರರು ಭಾರತಕ್ಕಾಗಿ ಉದ್ದೇಶಿಸಿದ ಯೂನಿಫಾರಂ ಸಿವಿಲ್ ಕೋಡ್ ಗೋವಾದಲ್ಲಿ ಜಾರಿಯಲ್ಲಿದೆ. ಈ ಸಂಹಿತೆಯ ಅಡಿಯಲ್ಲಿ ನ್ಯಾಯದಾನ ಮಾಡುವ ಅವಕಾಶ ನನಗೆ ಲಭಿಸಿದೆ. ಗೋವಾದ ಎಲ್ಲಾ ನಾಗರೀಕರಿಗೂ ಧರ್ಮದ ಭೇದವಿಲ್ಲದೆ ಮದುವೆ ಮತ್ತು ಆಸ್ತಿ ವಿಚಾರದ ಕಾನೂನುಗಳು ಏಕರೂಪವಾಗಿ ಅನ್ವಯಿಸುತ್ತವೆ" ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಹೇಳಿದರು. (ಏಜೆನ್ಸೀಸ್)