

ರಾಣೆಬೆನ್ನೂರ: ತ್ಯಾಜ್ಯ ವಿಲೇವಾರಿ ಬಹಳ ಕಷ್ಟಕರ ಕೆಲಸವಾಗಿದ್ದು ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಪೌರ ಕಾರ್ಮಿಕರ ಕೆಲಸ ದೇವರ ಕೆಲಸವಾಗಿದೆ. ನಗರ ಬೆಳೆದಂತೆ ಜನಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ನಗರಸಭೆ ಪೌರ ಕಾರ್ಮಿಕರ ಸಂಖ್ಯೆ ಕೂಡ ಏರಿಸಬೇಕಿದೆ ಎಂದು ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ ಹೇಳಿದರು.
ಇಲ್ಲಿಯ ನಗರಸಭೆ ವತಿಯಿಂದ ನಗರದ ಎಪಿಎಂಸಿ ವರ್ತಕರ ಸಂಘದ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಸ್ತುತ ನಗರದ ಜನಸಂಖ್ಯೆ ಸುಮಾರು 1.30 ಲಕ್ಷವಿದ್ದು ಪೌರ ಕಾರ್ಮಿಕರು ಕೇವಲ 200 ಜನರಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಜನರಿಗೆ ಉದ್ಯೋಗ ಕೊಡಬೇಕಿದೆ. ಪೌರ ಕಾರ್ಮಿಕರು ಚನ್ನಾಗಿ ಕೆಲಸ ಮಾಡಿದರೆ ನಗರಕ್ಕೆ ಒಳ್ಳೆಯ ಹೆಸರು ಬರುತ್ತದೆ. ನಗರಸಭೆ ರ‌್ಯಾಂಕ್ ಬಂದರೆ ಅದರ ಹಿಂದೆ ಪೌರ ಕಾರ್ಮಿಕರ ಶ್ರಮವಿದೆ. ಹೀಗಾಗಿ ನಾವೆಲ್ಲ ಬಹಳ ಗೌರವಯುತವಾಗಿ ಪೌರ ಕಾರ್ಮಿಕರನ್ನು ಕಾಣಬೇಕು ಎಂದರು.
ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಪೌರ ಕಾರ್ಮಿಕರು ಕರೊನಾ ಸಮಯದಲ್ಲಿ ಯಾವುದೆ ಭಯವಿಲ್ಲದೆ ಕೆಲಸ ಮಾಡಿ ನಗರದ ಸ್ವಚ್ಛತೆ ಕಾಪಾಡಿರುವುದು ಹೆಮ್ಮೆಯ ಸಂಗತಿ. ಪೌರ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಪ್ರತಿ ವರ್ಷ ಒಂದು ಬಾರಿ ಮಾತ್ರ ಮಾಡಲಾಗುತ್ತಿದ್ದು ಅದನ್ನು ಪ್ರತಿ ಆರು ತಿಂಗಳಿಗೊಮ್ಮೆ ಮಾಡಲು ಕ್ರಮ ಕೈಗೊಳ್ಳಬೇಕು. ಪೌರ ಕಾರ್ಮಿಕರು ಮದ್ಯದ ದಾಸರಾಗದೆ ಉತ್ತಮ ಆರೋಗ್ಯ ಹೊಂದಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಡಬೇಕು ಎಂದರು.
ನಗರಸಭೆ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಪೌರ ಕಾರ್ಮಿಕರ ದಿನಾಚರಣೆ ಸಮಾರಂಭವನ್ನು ಪೌರ ಕಾರ್ಮಿಕರಾದ ನೀಲಪ್ಪ ಬುಳ್ಳಪ್ಪನವರ ಮತ್ತು ಮೈಲವ್ವ ಹೊನ್ನಮ್ಮನವರ ಅವರಿಂದ ಉದ್ಘಾಟನೆ ಮಾಡಿಸಿದ್ದು, ವಿಶೇಷವಾಗಿತ್ತು. ಪೌರ ಕಾರ್ಮಿಕ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಗರಸಭೆ ಸದಸ್ಯರಾದ ಪ್ರಕಾಶ ಪೂಜಾರ, ಪ್ರಭಾವತಿ ತಿಳವಳ್ಳಿ, ಜಯಶ್ರೀ ಪಿಸೆ, ರಮೇಶ ಕರಡೆಣ್ಣನವರ, ಶೇಖಪ್ಪ ಹೊಸಗೌಡ್ರ, ಮಂಜುಳಾ ಹತ್ತಿ, ಮಾಜಿ ಸದಸ್ಯ ಬಸವರಾಜ ಹುಚಗೊಂಡರ, ಮೈಲಪ್ಪ ಗೋಣಿಬಸಮ್ಮನವರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಹೇಶ ಕಲಾಲ, ಮಂಜುಳಾದೇವಿ, ಮಧು ಕೋಳಿವಾಡ ಮತ್ತಿತರರು ಉಪಸ್ಥಿತರಿದ್ದರು.