

ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಯನ್ನು ಕೋವಿಡ್ 19 ಕಾರಣಕ್ಕೆ ಮುಂದೂಡುವಂತೆ ಕೆಲವು ಆಕಾಂಕ್ಷಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಮುಂದೂಡಲ್ಪಡಬಹುದೇನೋ ಎಂಬ ಆಸೆ ಅನೇಕರಲ್ಲಿ ಇತ್ತು. ಆದರೆ, ಡೌಟೇ ಬೇಡ ಅಕ್ಟೋಬರ್ 4ಕ್ಕೇ ನಡೆಯಲಿದೆ ಸಿವಿಲ್ ಸರ್ವೀಸ್ ಪ್ರಿಲಿಮ್ಸ್ ಎಕ್ಸಾಂ.
ಸಿವಿಲ್ ಸರ್ವೀಶ್ ಪರೀಕ್ಷಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಸಲ್ಲಿಸಿದ್ದ ದೂರು ಅರ್ಜಿ ವಿಚಾರಣೆ ಮುಂದುವರಿಸಿದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಬಿ.ಆರ್.ಗವಾಯಿ, ಕೃಷ್ಣ ಮುರಾರಿ ಅವರನ್ನು ಒಳಗೊಂಡ ನ್ಯಾಯಪೀಠ, ಪರೀಕ್ಷೆ ಮುಂದೂಡಲು ನಿರಾಕರಿಸಿತು. ಕೋವಿಡ್ 19, ಕೆಲವು ಕಡೆ ಪ್ರವಾಹ ಕಾರಣಕ್ಕೆ ಪರೀಕ್ಷೆಯನ್ನು ಮುಂದೂಡಲಾಗದು. ಈ ವರ್ಷದ ಪರೀಕ್ಷೆಯನ್ನು ಮುಂದಿನ ವರ್ಷದ ಪರೀಕ್ಷೆ ಜತೆಗೆ ಸೇರಿಸಿ ಮಾಡುವುದರಿಂದ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ ಎಂದು ಸ್ಪಷ್ಟಪಡಿಸಿತು.
ಪರೀಕ್ಷೆ ನಡೆಸುವುದಕ್ಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆ ಮುಂದೂಡಲಾಗದು ಎಂದು ನ್ಯಾಯಪೀಠಕ್ಕೆ ಕಳೆದ ವಿಚಾರಣೆ ವೇಳೆ ಯುಪಿಎಸ್ಸಿ ಸ್ಪಷ್ಟಪಡಿಸಿತ್ತು. ಅದೇ ಸಂದರ್ಭದಲ್ಲಿ, ಯಾಕೆ ಪರೀಕ್ಷೆ ಮುಂದೂಡಲಾಗದು ಎಂಬುದಕ್ಕೆ ಸಕಾರಣಗಳ ಅಫಿಡವಿಟ್ ಸಲ್ಲಿಸುವುದಕ್ಕೆ ಯುಪಿಎಸ್ಸಿಗೆ ನ್ಯಾಯಪೀಠ ಸೂಚಿಸಿತ್ತು. ಅದನ್ನು ಪರಿಶೀಲಿಸಿದ ಬಳಿಕ ನ್ಯಾಯಪೀಠ ಈ ತೀರ್ಪು ನೀಡಿದೆ. (ಏಜೆನ್ಸೀಸ್)