ಪೌರಕಾರ್ಮಿಕರು ನಾರಾಯಣ ಸ್ವರೂಪಿಗಳು: ಶಾಸಕ ಚನ್ನಬಸಪ್ಪ

poura karmikara dincharane
ಅಂಬೇಡ್ಕರ್ ಭವನದಲ್ಲಿ ಪೌರ ಕಾರ್ಮಿಕರ ದಿನವನ್ನು ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ ಉದ್ಘಾಟಿಸಿದರು. ಡಾ. ಧನಂಜಯ ಸರ್ಜಿ, ಎನ್.ಗೋವಿಂದ, ಲಿಂಗೇಗೌಡ, ಕರಿಭೀಮಣ್ಣನವರ್, ಡಿ.ಮೋಹನ್ ಕುಮಾರ್, ಮಂಜಣ್ಣ, ಎಸ್.ಆರ್.ನಾಗೇಶ್, ಎನ್.ಎಂ.ಸುನೀಲ್‌ಕುಮಾರ್, ತ್ರಿವೇಣಿ ಇದ್ದರು.
Published on

ಶಿವಮೊಗ್ಗ: ಸಮಾಜವನ್ನು ಸ್ವಚ್ಛಗೊಳಿಸುವ ಕಾಯಕ ಮಾಡುತ್ತಿರುವ ಪೌರಕಾರ್ಮಿಕರು ನಾರಾಯಣ ಸ್ವರೂಪಿಗಳು. ಪೌರ ಕಾರ್ಮಿಕರ ಯೋಗಕ್ಷೇಮ ಚೆನ್ನಾಗಿದ್ದರೆ ಸಮಾಜ ಸದೃಢವಾಗಿರುತ್ತದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದಿಂದ ಪೌರಕಾರ್ಮಿಕರ ದಿನಾಚರಣೆ-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಸುಂದರವಾಗಿ, ಚೆನ್ನಾಗಿರಬೇಕೆಂದರೆ ಸ್ವಚ್ಛತೆ ಇರಬೇಕು. ಇಂತಹ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಪೌರ ಕಾರ್ಮಿಕರು ನಾರಾಯಣಿ ಸ್ವರೂಪಿಯಾಗಿದ್ದು ಇವರ ಕಾರ್ಯ ಪವಿತ್ರವಾದದ್ದು ಮತ್ತು ಮೆಚ್ಚುವಂತದ್ದು. ಪೌರ ಕಾರ್ಮಿಕರ ಬಗ್ಗೆ ಪಾಲಿಕೆ ಯಾವಾಗಲೂ ಕಾಳಜಿ ಹೊಂದಿದೆ ಎಂದರು.
ಮಹಾತ್ಮಾ ಗಾಂಧೀಜಿ ಅವರು ಕಾರ್ಮಿಕರಲ್ಲಿ ಹರಿಯನ್ನು ಕಾಣುತ್ತಿದ್ದೇನೆಂದಿದ್ದರು. ಪೌರ ಕಾರ್ಮಿಕರಿಲ್ಲದಿದ್ದರೆ ಸಮಾಜದ ಆರೋಗ್ಯ ಸಾಧ್ಯವಿಲ್ಲ. ಸಮಾಜದ ಸ್ವಾಸ್ಥ ್ಯ ಕಾಯುವ ಪೌರ ಕಾರ್ಮಿಕರ ಕುಟುಂಬಗಳು ಚೆನ್ನಾಗಿರಬೇಕು. ಆರೋಗ್ಯದಿಂದ ಕೂಡಿರಬೇಕು. ಇತ್ತೀಚೆಗೆ ಅನೇಕ ಕಾರ್ಮಿಕರ ಮಕ್ಕಳು ವಿದ್ಯಾವಂತರಾಗಿ ಉತ್ತಮ ಹುದ್ದೆಗಳನ್ನು ಮಾಡತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ವಿದ್ಯಾವಂತರಾಗಬೇಕು ಎಂದು ಹೇಳಿದರು.
ಒಂದು ಹಂತದಲ್ಲಿ ಪೌರ ಕಾರ್ಮಿಕರು ಸಮಾಜದ ಉಳ್ಳವರ ಮನಸ್ಸನ್ನು ಸಹ ಬದಲಾಯಿಸುವ ಕೆಲಸ ಮಾಡಿದ್ದಾರೆ. ಬರ, ನೆರೆ ಪರಿಸ್ಥಿತಿಯಲ್ಲಿ ತಮ್ಮ ಕಲ್ಯಾಣ ನಿಧಿಯ ಹಣ ನೀಡಿದ್ದಾರೆ. ಕರೊನಾ ಸಮಯದಲ್ಲಿ ತಮ್ಮ ಜೀವದ ಹಂಗುತೊರೆದು ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದ ಅವರು, ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು.
ಶಾಸಕಿ ಶಾರದಾ ಪೂರ‌್ಯಾನಾಯ್ಕ ಮಾತನಾಡಿ, ನಗರದ ಸ್ವಚ್ಛತೆ ಹಾಗೂ ನಮ್ಮೆಲ್ಲರ ಆರೋಗ್ಯ ಕಾಪಾಡುವ ಕೆಲಸವನ್ನು ಸ್ವಾಭಿಮಾನದಿಂದ ಮಾಡುತ್ತಿರುವ ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಶಾಸಕರು ಪ್ರಯತ್ನಿಸುತ್ತೇವೆ. ತಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗುತ್ತೇವೆ. ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.
ಎಂಎಲ್‌ಸಿ ಡಾ.ಧನಂಜಯ ಸರ್ಜಿ ಮಾತನಾಡಿ, ಸಮಾಜದ ರೋಗವನ್ನು ತಡೆಯುವ ಮತ್ತು ಕಾಯಿಲೆ ಬಾರದಂತೆ ಮಾಡುವ ಶಕ್ತಿ ಪೌರ ಕಾರ್ಮಿಕರಿಗಿದೆ. ಇಂತಹ ಪೌರ ಕಾರ್ಮಿಕರಿಗೆ ಒಳ್ಳೆಯ ಆರೋಗ್ಯ, ಆಯುಷ್ಯವನ್ನು ಭಗವಂತ ನೀಡಬೇಕು. ಅವರು ಹೃದಯ ಶ್ರೀಮಂತಿಕೆಯಿಂದ ಸ್ವಚ್ಛತಾ ಕಾರ್ಯ ಮಾಡುತ್ತಿದ್ದು ನಿಮ್ಮ ಜೀವನವೂ ನೆಮ್ಮದಿಯಿಂದ ಕೂಡಿರಬೇಕು ಎಂದರು.
ಸಮಾರಂಭಕ್ಕೂ ಮುನ್ನ ರಾಮಣ್ಣಶೇಷ್ಠಿ ಪಾರ್ಕ್‌ನಿಂದ ಅಂಬೇಡ್ಕರ್ ಭವನದವರೆಗೆ ಪೌರಕಾರ್ಮಿಕರ ಮೆರವಣಿಗೆ ನಡೆಯಿತು. ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಪಾಲಿಕೆ ಉಪ ಆಯುಕ್ತ ಲಿಂಗೇಗೌಡ, ಕರಿಭೀಮಣ್ಣನವರ್, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ, ಪ್ರಧಾನ ಕಾರ್ಯದರ್ಶಿ ಡಿ.ಮೋಹನ್ ಕುಮಾರ್, ಖಜಾಂಚಿ ಮಂಜಣ್ಣ, ಸಂಘಟನಾ ಕಾರ್ಯದರ್ಶಿ ಎಸ್.ಆರ್.ನಾಗೇಶ್, ನಿರ್ದೇಶಕರಾದ ಎನ್.ಎಂ.ಸುನೀಲ್‌ಕುಮಾರ್, ತ್ರಿವೇಣಿ ಮತ್ತಿತರರು ಪಾಲ್ಗೊಂಡಿದ್ದರು.

ಮಂಡಿಯೂರಿ ನಮಸ್ಕರಿಸಿದ ಶಾಸಕ, ಆಯುಕ್ತೆ
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ 29 ಪೌರ ಕಾರ್ಮಿಕರನ್ನು ಪಾಲಿಕೆಯಿಂದ ಸನ್ಮಾನಿಸಲಾಯಿತು. ಶಾಸಕ ಎಸ್.ಎನ್.ಚನ್ನಬಸಪ್ಪ ಮತ್ತು ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಪೌರ ಕಾರ್ಮಿಕರ ಸೇವೆ ಸ್ಮರಿಸಿ ವೇದಿಕೆಯಲ್ಲೇ ಮಂಡಿಯೂರಿ ನಮಸ್ಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net