ಪೌರಕಾರ್ಮಿಕರು ಸ್ವಚ್ಛ ನಗರದ ರೂವಾರಿಗಳು

klr pks day
ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಹಮ್ಮುಕೊಂಡಿದ್ದ ಪೌರಕಾರ್ಮಿಕರ ದಿನ ಕಾರ್ಯಕ್ರಮವನ್ನು ಶಾಸಕ ಕೊತ್ತೂರು ಜಿ.ಮಂಜುನಾಥ್​ ಉದ್ಘಾಟಿಸಿದರು. ರಾಕೇಶ್​, ಅಂಬರೀಶ್​, ಪ್ರವಿಣ್​ಗೌಡ, ಲಕ್ಷ್ಮೀ ದೇವಮ್ಮ, ಸಂಗೀತಾ ಇದ್ದರು.
Published on

ಕೋಲಾರ: ಯಾವುದೇ ಭೇದ ಭಾವ ಇಲ್ಲದೆ ನಗರದ ಸ್ವಚ್ಛತೆಯಲ್ಲಿ ತೊಡಗಿರುವವರೇ ನಿಜವಾದ ಪೌರಕಾರ್ಮಿಕರು. ಅವರ ಸೇವೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಗರಸಭೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನ ಉದ್ಘಾಟಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ನರೇಂದ್ರ ಮೋದಿ ಅವರು ಪೌರಕಾರ್ಮಿಕರ ಪಾದಪೂಜೆ ಮಾಡಿದ್ದಾರೆ. ಇಲ್ಲಿಯೇ ಅರ್ಥ ಮಾಡಿಕೊಳ್ಳಬೇಕು ಅವರ ಸೇವೆ ಎಂತಹದ್ದು ಎಂದರು.
ನಾವು ಯಾವತ್ತು ಪೌರಕಾರ್ಮಿಕರ ಪರವಾಗಿ, ಅಭಿವೃದ್ಧಿಗಾಗಿ ಜತೆ ಇರುತ್ತೇವೆ. ಸಾಕಷ್ಟು ಮಂದಿ ಸೇವಾವಧಿಯಲ್ಲೇ ಮೃತಪಟ್ಟಿದ್ದಾರೆ. ಆದರೆ ಅವರಿಗೆ ಯಾವುದೇ ಸೌಲಭ್ಯ ದೊರಕುತ್ತಿಲ್ಲ. ಈ ಕುರಿತು ಸದಸ್ಯರು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಜಾಗದ ಸಮಸ್ಯೆ ಬಗೆಹರಿಸಿ ನಿವೇಶನ ರಹಿತ ಪೌರಕಾರ್ಮಿಕರಿಗೆ ಹಕ್ಕು ಪತ್ರ ವಿತರಿಸಲು ಕ್ರಮವಹಿಸಲಾಗುವುದು. ಇನ್ನು ಕೆಲಸ ಕಾಯಂ ಆಗಬೇಕಾದರೆ ಹಣಕಾಸು ಇಲಾಖೆ, ಇಎಂಎ ಅನುಮತಿ ಬೇಕು, ಇದಕ್ಕೆ ನಾವು ಸಂಪನ್ಮೂಲ ಆದಾಯ ಕುರಿತು ಮಾಹಿತಿ ನೀಡಬೇಕು. ಹಂತಹಂತವಾಗಿ ಕ್ರಮಕೈಗೊಂಡು ಸರ್ಕಾರದಿಂದ ರ್ನಿಣಯ ಮಾಡಿಸಲಾಗುವುದು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಮಾತನಾಡಿ, ನಾಗರಿಕರ ಆರೋಗ್ಯ ಕಾಪಾಡುತ್ತಿರುವ ಯೋಧರು ಪೌರಕಾರ್ಮಿಕರು. ಚಳಿ, ಗಾಳಿ, ಮಳೆ ಲೆಕ್ಕಿಸದೆ ಮುಂಜಾನೆಯಿಂದ ಕಸ ವಿಲೇವಾರಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರ ಸೇವೆಯನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದರು.
ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಪೌರಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು.
ಟೌನ್​ ಅಭಿವೃದ್ಧಿಗೆ ಸಾವಿರ ಕೋಟಿ
ಕೋಲಾರ ಟೌನ್​ ಅಭಿವೃದ್ಧಿಪಡಿಸಲು ಬರೋಬ್ಬರಿ 1,000 ಕೋಟಿ ರೂ. ಆದರೂ ಸಾಲದು. ಯುಜಿಡಿ ಬಾಕಿ ಕೆಲಸ ಪೂರ್ಣಗೊಳಿಸಲು ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದ್ದು, ಶೀಘ್ರ ಟೆಂಡರ್​ ಕರೆಯಲಾಗುವುದು. ಈ ಬಗ್ಗೆ ನಿಗಮದ ಶಾಸಕ ಎಸ್​.ಎನ್​ ನಾರಾಯಣಸ್ವಾಮಿ ತಿಳಿಸಿದ್ದಾರೆ. ಇನ್ನು ಮುಂದೆ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಪೌರಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲಾಗುವುದು ಎಂದು ಕೊತ್ತೂರು ಜಿ.ಮಂಜುನಾಥ್​ ತಿಳಿಸಿದರು.
ಹಿಂದೆಯಲ್ಲ ಸಾಗುವಳಿ ಚೀಟಿಗಳನ್ನು ಸಭೆಯಲ್ಲೇ ಬರೆದು ಕೊಡುತ್ತಿದ್ದರು, ಆದರೆ ಈಗ ಪದ್ಧತಿ ಬದಲಾಗಿದೆ. ಸಮಿತಿಯಲ್ಲಿರುವ ಅಧ್ಯಕ್ಷ, ಸದಸ್ಯರೆಲ್ಲ ಸಮ್ಮತಿಸಿ ಕೊಡಬೇಕು. ಸ್ಥಳಕ್ಕೆ ಭೇಟಿ ನೀಡಲೇ ಬೇಕು. ಇದರಿಂದಾಗಿ ಅಕ್ರಮಕ್ಕೆ ಅವಕಾಶವಿಲ್ಲ. ನಿವೇಶನ ಸಮಸ್ಯೆ ಬಗೆಹರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಹೆಚ್ಚಿನ ಬಿಲ್​ ಪಾವತಿ
ಕಸ ವಿಲೇವಾರಿಗಾಗಿ ನಗರಸಭೆಗೆ ಬಂದಿದ್ದ ವಾಹನಗಳಿಗೆ ಇನ್ನೂ ನೋಂದಣಿ ಮಾಡಿಸಿಲ್ಲ. ಇದು ಚುನಾವಣೆಗೆ ಮೊದಲೇ ನಡೆದಿರುವ ಪ್ರಕ್ರಿಯೆ ಆಗಿದ್ದು, ಬಿಲ್​ ಸಹ ಪಾವತಿಯಾಗಿದೆ. ಇನ್ನು ವಾಹನಗಳ ಬ್ಯಾಟರಿಗಳಿಗೆ 66,000 ಬಿಲ್​ ಮಾಡಲಾಗಿದೆ. ಅದರ ಅಸಲಿ ದರ 35 ಸಾವಿರೂ. ಇದಕ್ಕೆಲ್ಲ ಯಾರು ಜವಾಬ್ದಾರಿ?, ವಾರದಲ್ಲಿ ಮಾಹಿತಿ ನೀಡಿ ಮುಂದಿನ ಸಭೆಯೊಳಗೆ ಸಮಸ್ಯೆ ಸರಿಪಡಿಸಬೇಕು ಎಂದು ಮಂಜುನಾಥ್​ ಅಧಿಕಾರಿಗಳಿಗೆ ತಾಕೀತು ಮಾಡಿದರು.

3 ಮಕ್ಕಳಿಗೆ ವಿದ್ಯಾಭ್ಯಾಸ
ಪೌರ ಕಾರ್ಮಿಕರ ಮೂವರು ಮಕ್ಕಳಿಗೆ ಸ್ವಂತ ಖರ್ಚಿನಲ್ಲಿ ವಿದ್ಯಾಭ್ಯಾಸ ಕೊಡಿಸುತ್ತೇನೆ ಎಂದು ವಿಧಾನ ಪರಿಷತ್​ ಸದಸ್ಯ ಇಂಚರ ಗೋವಿಂದರಾಜು ಘೋಷಿಸಿದರು. ಸದನದಲ್ಲಿ ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಸರ್ಕಾರದ ಸಂಸ್ಥೆಯಲ್ಲಿ ದುಡಿಯುವ ವರ್ಗದವರಿಗೆ ಸೌಲಭ್ಯಗಳು ದೊರೆಯುತ್ತವೆ. ಆದರೆ ಪೌರಕಾರ್ಮಿಕರನ್ನು ಸೌಲಭ್ಯಗಳಿಂದ ವಂಚಿಸಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ್​, ನಗರಸಭೆ ಉಪಾಧ್ಯಕ್ಷೆ ಸಂಗೀತಾ ಜಗದೀಶ್​, ಮಾಲೂರು ಪುರಸಭೆ ಅಧ್ಯಕ್ಷೆ ಕೋಮಲಾ, ಸದಸ್ಯರಾದ ಪ್ರವಿಣ್​ಗೌಡ, ಅಂಬರೀಶ್​, ರಾಕೇಶ್​, ರಮೇಶ್​, ಗುಣಶೇಖರ್​, ಅಪ್ಸರ್​, ಪ್ರಭಾರ ಪೌರಾಯುಕ್ತೆ ಅಂಬಿಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net