ಗುಂಪು ಮನೆ ನಿರ್ಮಾಣಕ್ಕೆ ಕ್ರಮ

23 SARAG 02
Published on

ಮೈಸೂರು: ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಸಲಹೆ ನೀಡಿದರು.

ಸರಗೂರು ಪಟ್ಟಣದ ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಅಭಿವೃದ್ಧಿಗೆ ಶಿಕ್ಷಣ ಮೂಲಮಂತ್ರವಾಗಿದ್ದು, ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಆಗ ತಮ್ಮ ಮಕ್ಕಳು ಸರಕಾರಿ ಹುದ್ದೆಗಳನ್ನು ಪಡೆಯಲು ಸಹಕಾರಿ ಆಗಲಿದೆ ಎಂದರು.

ಪ್ರತ್ಯೇಕವಾದ ಅಂಗನವಾಡಿ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಸ್ಲಮ್ ಬೋರ್ಡ್‌ನಿಂದ ಗುಂಪು ಮನೆ ನಿರ್ಮಾಣಕ್ಕೆ ಅರ್ಧ ಎಕರೆ ಜಾಗ ಗುರುತಿಸಿ ಮನೆ ನಿರ್ಮಾಣಕ್ಕೆ ಮುಂದಾಗಲಾಗುವುದು. ದೇವಸ್ಥಾನದ ಕಾಪೌಂಡ್ ಅರ್ಧಕ್ಕೆ ನಿಂತಿದ್ದು, ಪೂರ್ಣಗೊಳಿಸಲು ನವೆಂಬರ್‌ನಲ್ಲಿ ಅನುದಾನ ಬಿಡುಗಡೆಗೊಳಿಸಲಾಗುವುದು. ಪಟ್ಟಣದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಡಬಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಲಾಗುವುದು. 12 ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದ್ದು, ಕಾಂಗ್ರೆಸ್ ಸರಕಾರದಿಂದ ಮತ್ತಷ್ಟು ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಬೀದಿ ಬದಿ ವ್ಯಾಪಾರಿಗಳ ವ್ಯಾಪಾರ-ವಹಿವಾಟುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದೆಡೆ ಸೇರಿಸುವ ಪ್ರಯತ್ನ ನಡೆಸಲಾಗುವುದು. ಸಾಮಾನ್ಯ ವರ್ಗದ ಮನೆಗಳು ಮಂಜೂರಾಗಿದ್ದು, ಎಸ್‌ಟಿ, ಎಸ್‌ಸಿ ಮನೆಗಳು ಮಂಜೂರಾಗಿಲ್ಲ. ಈ ಬಗ್ಗೆ ನಿಗಮದ ಅಧಿಕಾರಿಗಳ ಗಮನಕ್ಕೆ ತಂದು ಮಂಜೂರು ಮಾಡಿಸಿಕೊಡಲಾಗುವುದು. ನಗರೋತ್ಥಾನ ಯೋಜನೆ ಅನುದಾನ, ಶಾಸಕರ ಅನುದಾನದಲ್ಲಿ ಪಟ್ಟಣ ಅಭಿವೃದ್ಧಿಗೆ ಪ್ರತಿ ವಾರ್ಡ್‌ಗಳಿಗೂ ಅನುದಾನ ನೀಡಲಾಗಿದೆ. ಪಟ್ಟಣದ ಅಭಿವೃದ್ಧಿಗೆ ಅಧಿಕಾರಿಗಳು ಸಮರ್ಪಕವಾಗಿ ಕಂದಾಯ ವಸೂಲಿ ಮಾಡಬೇಕು ಎಂದು ಸೂಚಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿ, ಸರಗೂರಿನ ಅಭಿವೃದ್ಧಿಗೆ ಪೂರಕ ಅನುದಾನವನ್ನು ಶಾಸಕರು ಸರಕಾರದಿಂದ ಕೊಡಿಸಿಕೊಡಬೇಕು ಎಂದು ಮನವಿ ಮಾಡಿದರು. ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ರಾಮು, ಸದಸ್ಯರಾದ ಹೇಮಾವತಿ ರಮೇಶ್, ಚೈತ್ರಾ ಸ್ವಾಮಿ, ಸಣ್ಣತಾಯಮ್ಮ, ಎಸ್.ಎಲ್.ರಾಜಣ್ಣ, ಶಿವಕುಮಾರ್, ನೂರಾಳಸ್ವಾಮಿ, ಶ್ರೀನಿವಾಸ್, ದಿವ್ಯಾ ನವೀನ್‌ಕುಮಾರ್, ಚಲುವಕೃಷ್ಣ, ಮುಖ್ಯಾಧಿಕಾರಿ ಎಸ್.ಎಸ್.ಮಂಜುನಾಥ್, ಆರೋಗ್ಯಾಧಿಕಾರಿ ಸಂತೋಷ್, ಸಿಬ್ಬಂದಿ ಮಹದೇವ್, ಪಳನಿಸ್ವಾಮಿ, ಅನಿತಾ, ನಾಗೇಶ್, ರಜಿನಿ, ಅರುಣಾರಾಧ್ಯ, ಶಿವಪ್ರಸಾದ್, ಸತೀಶ್, ದಿನೇಶ್ ಸೇರಿದಂತೆ 28 ಪೌರ ಕಾರ್ಮಿಕರು ಹಾಜರಿದ್ದರು.

ಇದಕ್ಕೂ ಮುನ್ನ ಪೌರ ಕಾರ್ಮಿಕರು, ಕುಟುಂಬದವರಿಗೆ ನಡೆಸಿದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net