

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಸಿವಿಲ್ ಇಂಜಿನಿಯರ್ ನೇಮಕ ವಿಚಾರದಲ್ಲಿ ಸರ್ಕಾರದ ದ್ವಂದ್ವ ಒಂದೊಂದಾಗಿ ಬಯಲಾಗುತ್ತಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಾಧಾನ್ಯತೆ ನೀಡಿ, ಸಂದರ್ಶನಕ್ಕೆ ಕಡಿಮೆ ಆದ್ಯತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ಆಧಾರದಲ್ಲಿ ಇಂಜಿನಿಯರ್ ನೇಮಕ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ಇದೇ ಹುದ್ದೆಗೆ ಈಗ ಮರು ಅರ್ಜಿ ಕರೆದಿರುವ ಸರ್ಕಾರ 50 ಅಂಕಗಳಿಗೆ ಸಂದರ್ಶನ ಭಾಗ ಸೇರಿಸಿದೆ.
ಕೆಪಿಎಸ್ಸಿ ಮೂಲಕ ನಡೆಯುವ ನೇಮಕ ಪ್ರಕ್ರಿಯೆಯಲ್ಲಿ ಸಂದರ್ಶನದ ಭಾಗದ ಬಗ್ಗೆ ಸಾಕಷ್ಟು ಟೀಕೆಟಿಪ್ಪಣಿಗಳಿವೆ. ಅಂಥದ್ದರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2019ರಲ್ಲಿ ನಡೆಸಿದ ಪರೀಕ್ಷೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಲೋಕೋಪಯೋಗಿ ಇಲಾಖೆ ಈಗ ಕೆಪಿಎಸ್ಸಿ ಮೂಲಕ ಸಂದರ್ಶನಕ್ಕೆ ಪ್ರಾತಿನಿಧ್ಯ ನೀಡಿ ನೇಮಕ ಪ್ರಕ್ರಿಯೆ ಅವಕಾಶ ನೀಡಿದೆ.
2019ರಲ್ಲಿ ಪಾರದರ್ಶಕವಾಗಿ ನೇಮಕ ಪ್ರಕ್ರಿಯೆ ನಡೆಯುತ್ತಿತ್ತು, ಆದರೆ ಪ್ರಕ್ರಿಯೆ ರದ್ದುಮಾಡಿದರು. ಈಗ 50 ಅಂಕಗಳಿಗೆ ಸಂದರ್ಶನ ನಡೆಸುವುದು ಯಾವ ಉದ್ದೇಶದಿಂದ ಎಂಬುದು ಸ್ಪಷ್ಟ. ಸಿಎಂ ಮಧ್ಯ ಪ್ರವೇಶಿಸಲಿ. ನ್ಯಾಯ ದೊರಕಿಸಲಿ | ಹುದ್ದೆ ಆಕಾಂಕ್ಷಿಗಳು
2019ರಲ್ಲಿ ಲೋಕೋಪಯೋಗಿ ಇಲಾಖೆ 570 ಸಹಾಯಕ ಇಂಜಿನಿಯರ್, 300 ಕಿರಿಯ ಇಂಜಿನಿಯರ್ ನೇಮಕಕ್ಕೆ ಅಧಿಸೂಚನೆ ಹೊರಡಿಸಿತ್ತು. 2019ರ ಜೂನ್ 22ರಿಂದ 24ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪರೀಕ್ಷೆಯೂ ನಡೆದಿತ್ತು. ಇದರಲ್ಲಿ ಸಂದರ್ಶನದ ಭಾಗ ಅತಿ ವಿರಳ. ನೇಮಕಾತಿ ಪ್ರಾಧಿಕಾರವು ಅಭ್ಯರ್ಥಿಯ ಸ್ವರ್ಧಾತ್ಮಕ ಪರೀಕ್ಷೆಯ ಮಾಹಿತಿ ಇಲ್ಲದ ರೀತಿ 15 ಅಂಕಗಳಿಗೆ ಸಂದರ್ಶನ ಮಾಡಲು ನಿರ್ಧರಿಸಿತ್ತು. ಇದೀಗ ಒಟ್ಟು 990 ಹುದ್ದೆಯ ಆಯ್ಕೆಗೆ, 200 ಅಂಕಗಳಿಗೆ ಸಾಮಾನ್ಯ ಪತ್ರಿಕೆ 200 ಅಂಕಗಳಿಗೆ ನಿರ್ದಿಷ್ಟ ಪತ್ರಿಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯುವುದು. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇಕಡವಾರು ಮತ್ತು ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಆಧಾರದ ಮೇಲೆ 1:3 ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಯ ನಿಗದಿಪಡಿಸಿದ ಒಟ್ಟು ಅಂಕಗಳ ಶೇಕಡ 12.5 ಸಂದರ್ಶನಕ್ಕೆ ನಿಗದಿಪಡಿಸಿದ ಗರಿಷ್ಠ ಅಂಕ ಗಳಾಗಿರುತ್ತವೆ ಎಂದು ಕೆಪಿಎಸ್ಸಿ ಸ್ಪಷ್ಟಪಡಿಸಿದೆ. ಅಭ್ಯರ್ಥಿ ಆಯ್ಕೆ ಬಯಸಿದ ಹುದ್ದೆಗೆ ಅವರ ಅರ್ಹತೆ, ವ್ಯಕ್ತಿತ್ವ, ಸಂಬಂಧಿತ ವಿಷಯದಲ್ಲಿ ವ್ಯಕ್ತಪಡಿಸುವ ಸಾಮರ್ಥ್ಯ, ಸೂಕ್ಷ್ಮ ಮತ್ತು ಕರ್ತೃತ್ವ ಶಕ್ತಿ, ಲೋಕ ಜ್ಞಾನ ಹಾಗೂ ವಿಷಯದಲ್ಲಿನ ಪರಿಜ್ಞಾನ ಹಾಗೂ ಇನ್ನಿತರ ವಿಶೇಷ ಗುಣಗಳನ್ನು ನಿರ್ಧರಿಸಲು ನಡೆಸಲಾಗುತ್ತಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದೇ ವಿಚಾರ ಹುದ್ದೆಯ ಆಕಾಂಕ್ಷಿಗಳಿಗೆ ಸಿಟ್ಟು ತರಿಸಿದ್ದು, ಒಂದು ವರ್ಷದ ಅವಧಿಯಲ್ಲಿ 15 ಅಂಕದ ಸಂದರ್ಶನ ಭಾಗ 50 ಅಂಕಕ್ಕೆ ಏರಿಸುವ ಉದ್ದೇಶಿಸಿ ಹೆಚ್ಚು ಮಹತ್ವ ನೀಡಿರುವ ಉದ್ದೇಶ ಸ್ಪಷ್ಟ ಎಂದು ಅಸಮಾಧಾನ ಹೊರಹಾಕಿದ್ದಾರೆ.