

ನಾಯ್ಪಿಟಾವ್ (ಮ್ಯಾನ್ಮರ್): ಆಧುನಿಕ ಜಗತ್ತಿನಲ್ಲಿ ಅನೇಕರಲ್ಲಿ ಕಾಡುತ್ತಿರುವ ಸಮಸ್ಯೆಯೆಂದರೆ ಅದು ದೇಹದ ತೂಕ. ಹೇರಳವಾಗಿ ದೊರೆಯುವ ಕುರುಕಲು ತಿಂಡಿಗಳನ್ನು ತಿಂದು ಅಳತೆ ಮೀರಿ ದೇಹ ತೂಕವನ್ನು ಹೆಚ್ಚಿಸಿಕೊಂಡು ಮತ್ತೆ ಕರಗಿಸಲು ಪರದಾಡುವ ಅನೇಕರನ್ನು ನೋಡಿದ್ದೇವೆ.
ಅದರಲ್ಲೂ ಹೆಣ್ಣು ಮಕ್ಕಳು ಸ್ಲಿಮ್ ಆಗಿ ಇರಲು ಹೆಚ್ಚು ಬಯುಸುತ್ತಾರೆ. ಇನ್ನು ಸಿನಿಮಾಗಳಲ್ಲಿ ನಟಿಯರಿಗೆ ಇದೇ ಬಂಡವಾಳವೂ ಹೌದು. ಆದರೆ, ಇಂದಿನ ದಿನಗಳಲ್ಲಿ ದೇಹವು ಊದಿಕೊಂಡಿದ್ದರೆ, ಅದನ್ನು ಕರಗಿಸಲು ಜಿಮ್ ಹಾಗೂ ವ್ಯಾಯಾಮದ ಮೊರೆ ಹೋಗುವುದು ಸಹಜ. ಆದರೆ, ಅದೇ ನೈಸರ್ಗಿಕವಾಗಿ ಬಂದರೆ ಎಷ್ಟು ಚೆಂದ ಅಲ್ಲವಾ? ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ಸಾಧ್ಯವಿದೆ ಎಂಬುದಕ್ಕೆ ಮ್ಯಾನ್ಮರ್ ದೇಶದ ಸುಂದರಿಯೇ ಸಾಕ್ಷಿ.
ಅತ್ಯಂತ ಸಣ್ಣ ನಡುವನ್ನು ಹೊಂದಿರುವ ಈ ಮ್ಯಾನ್ಮರ್ ಸುಂದರಿಗೆ ಇದು ನೈಸರ್ಗಿಕವಾಗಿ ಬಂದಿದೆಯಂತೆ. ವಿದ್ಯಾರ್ಥಿನಿಯಾಗಿರುವ ಈಕೆಯ ಹೆಸರು ಸೂ ನೈಂಗ್, ಕೇವಲ 23 ವರ್ಷ ಮಾತ್ರ. ಈಕೆಯ ನಡುವಿನ ಸುತ್ತಳತೆ ಕೇವಲ 13.7 ಇಂಚು ಮಾತ್ರ. ಇದು ವಿಶ್ವದಲ್ಲೇ ಅತ್ಯಂತ ಸಣ್ಣ ನಡುವು ಎಂದೇ ನಂಬಲಾಗಿದೆ.
ಇನ್ಸ್ಟಾಗ್ರಾಂನಲ್ಲಿ ಭಾರಿ ಹಿಂಬಾಲಕರನ್ನು ಹೊಂದಿರುವ ನೈಂಗ್, ಆಗಾಗ ತನ್ನ ತೆಳ್ಳನೆ ನಡುವಿನ ಸೌಂದರ್ಯವನ್ನು ಸಾಬೀತು ಮಾಡುವು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ಇದು ಫೋಟೋ ಎಡಿಟಿಂಗ್ ಮತ್ತು ದೇಹವನ್ನು ಸ್ಲಿಮ್ ಆಗಿ ತೋರಿಸುವಂತಹ ರಿಬ್ ರಿಮೂವಲ್ ಆ್ಯಪ್ಗಳಿಂದ ಫೋಟೋ ಎಡಿಟ್ ಮಾಡಲಾಗಿದೆ ಎಂಬ ಸಾಕಷ್ಟು ಆರೋಪಗಳು ಎದರುರಾದರೂ ಸಹ ನೈಂಗ್ ಮಾತ್ರ ಇದು ನೈಸರ್ಗಿಕ ಕೊಡುಗೆ ಎಂದು ಸಮರ್ಥಿಸಿಕೊಳ್ಳುತ್ತಾರೆ.
ನಾನು ಯಾವುದೇ ಕಾರಣಕ್ಕೂ ಫೋಟೋಗಳನ್ನು ಎಡಿಟ್ ಮಾಡುವುದಿಲ್ಲ. ಆರೋಗ್ಯಯುತ ಆಹಾರವನ್ನಷ್ಟೇ ಸೇವಿಸುತ್ತೇನೆ. ತನ್ನ ಅನುವಂಶೀಯ ಕಾರಣದಿಂದ ನೈಸರ್ಗಿಕವಾಗೇ ನನ್ನ ಸೊಂಟ ಹೀಗಿದೆ ಎನ್ನುತ್ತಾರೆ ನೈಂಗ್.
ರಾಷ್ಟ್ರೀಯ ಆರೋಗ್ಯ ಸೇವೆ (ಎನ್ಎಚ್ಎಸ್) ಹೇಳುವ ಪ್ರಕಾರ ಆರೋಗ್ಯವಂತರ ನಡುವಿನ ಗಾತ್ರವು 35.5 ಇಂಚಿಗೂ ಕಡಿಮೆ ಇರಬೇಕಂತೆ.
ನೈಂಗ್ ಮಾತನಾಡಿ, ನಾನು ಆರೋಗ್ಯಯುತ ಸ್ಥಿತಿಯಲ್ಲಿದ್ದೇನೆ. ಅಲ್ಲದೆ, ಆರೋಗ್ಯಕರ ಆಹಾರ ಕ್ರಮ ಅನುಸರಿಸುತ್ತಿರುವುದರಿಂದ ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ನಾನು ಹೇಗೆ ಕಾಣುತ್ತೇನೆ ಎಂಬುದರಿಂದ ನನ್ನಲ್ಲಿ ಏನೋ ತೊಂದರೆ ಇದೆ ಎಂದು ನಾನು ಯೋಚಿಸಿಲ್ಲ. ನನ್ನ ಲುಕ್ ತೋರಿಸಲು ಕ್ಯಾಮೆರಾಗೆ ಪೋಸ್ ನೀಡುವುದನ್ನು ನಾನು ಎಂಜಾಯ್ ಮಾಡುತ್ತೇನೆ. ನನ್ನ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆಯ ಕಾಮೆಂಟ್ಗಳು ಬರುತ್ತಿವೆ. ನನ್ನ ಸುಂದರ ನೋಟವನ್ನು ಜನರು ಮುಕ್ತ ಮನಸ್ಸಿನಿಂದ ಹೊಗಳಿದ್ದಾರೆ ಎಂದು ನೈಂಗ್ ಹೇಳಿಕೊಂಡಿದ್ದಾರೆ.
ವಿಶ್ವದ ಅತ್ಯಂತ ಸಣ್ಣ ನಡುವಿನ ಗಿನ್ನೆಸ್ ವಿಶ್ವ ದಾಖಲೆ ಯುನೈಟೆಡ್ ಕಿಂಗ್ಡಮ್ನ ಎಥೆಲ್ ಗ್ರ್ಯಾಂಜರ್ ಹೆಸರಿನಲ್ಲಿದೆ. ಆದರೆ, ಅವರು 1982ರಲ್ಲೇ ಮೃತಪಟ್ಟಿದ್ದಾರೆ. ಅವರ ನಡುವಿನ ಸುತ್ತಳತೆ ಕೇವಲ 13 ಇಂಚಿನಷ್ಟಿತ್ತು. ಎಥೆಲ್ ಅವರ ನಡು ನೈಸರ್ಗಿಕವಾಗಿರಲಿಲ್ಲ. ಅದಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದರು. ನಡು ಸಣ್ಣಗಾಗಿಸಲು ನಿಯಮಿತವಾಗಿ ಕಾರ್ಸೆಟ್ಸ್ ಧರಿಸುವ ಮೂಲಕ ಜೀವಿತಾವಧಿಯವರೆಗೂ ನಡುವಿನ ತರಬೇತಿ ಪಡೆಯುತ್ತಿದ್ದರು.
ಇನ್ನು ನೈಂಗ್ ಅವರ ನಡುವನ್ನು ಈವರೆಗೂ ಪರಿಶೀಲಿಸಿಲ್ಲ. ಆಕೆಯ ಕೆಲವೊಂದು ಫೋಟೋಗಳು ನಡುವಿನ ಸುತ್ತ ಎಡಿಟ್ ಮಾಡಿರುವಂತೆಯೇ ಕಾಣುತ್ತದೆ. ಆದರೂ ಇದನ್ನು ಆಕೆ ನಿರಾಕರಿಸಿದ್ದು, ನಿಜವಾದ ನಡು ಎಂದಿದ್ದಾಳೆ. ಆಕೆಯ ಫೋಟೋಗಳಿಗೆ ಬರುವ ಬಹುತೇಕ ಕಾಮೆಂಟ್ಗಳು ಆಕೆಯ ಪರವಾಗಿಯೇ ಬಂದಿವೆ. (ಏಜೆನ್ಸೀಸ್)