

ಬೆಂಗಳೂರು: 118 ಕೋಟಿ ರೂ. ಮೌಲ್ಯದ ನಕಲಿ ಬಿಲ್ ಸೃಷ್ಟಿಸಿದ ಆರೋಪದಡಿ 8 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಇಂಜಿನಿಯರ್‌ಗಳನ್ನು ಕರ್ನಾಟಕದ ನಗರಾಭಿವೃದ್ಧಿ ಇಲಾಖೆ ಅಮಾನತುಗೊಳಿಸಿದೆ.
ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರವು(State Government) ಬೆಂಗಳೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಿಸಿದ್ದು, 2022ರ ಜನವರಿಯಲ್ಲಿ ನಡೆದ ಆಪಾದಿತ ಹಗರಣದ ತನಿಖೆಯ ನಂತರ ಕರ್ನಾಟಕ ಲೋಕಾಯುಕ್ತರು ಸಲ್ಲಿಸಿದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್(DK Suresh) 2020ರ ಸೆಪ್ಟೆಂಬರ್ನಲ್ಲಿ ಭ್ರಷ್ಟಾಚಾರ ವಿರೋಧಿ ಸಾರ್ವಜನಿಕ ತನಿಖಾಧಿಕಾರಿಗೆ ದೂರು ನೀಡಿದ್ದ ಬೆನ್ನಲ್ಲೇ ಲೋಕಾಯುಕ್ತ ತನಿಖೆ ಚುರುಕುಗೊಂಡಿದೆ. ಬಿಬಿಎಂಪಿಯು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ(KRDIL) ಮೂಲಕ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಿತ್ತು. ಅಮಾನತು ಆದೇಶದಲ್ಲಿ, "ಎರಡು ಯೋಜನೆಗಳಲ್ಲಿ ಕಾಮಗಾರಿಗಳು ಟೆಂಡರ್ ನಿರ್ದಿಷ್ಟವಾಗಿಲ್ಲ. ಸುಮಾರು 118 ಕೋಟಿ ಸಾರ್ವಜನಿಕ ಹಣವನ್ನು ಅಧಿಕಾರಿಗಳು ದುರುಪಯೋಗಪಡಿಸಿಕೊಂಡಿದ್ದಾರೆ" ಎಂದು ಉಲ್ಲೇಖವಾಗಿದೆ.