ನಗರಸಭೆ 22ನೇ ವಾರ್ಡ್ ಉಪ ಚುನಾವಣೆಗೆ ಶೇ. 56.79ರಷ್ಟು ಮತದಾನ

27-RNR-01
Published on

ರಾಣೆಬೆನ್ನೂರ: ಸ್ಥಳೀಯ ನಗರಸಭೆಯ 22ನೇ ವಾರ್ಡ್‌ನ ಉಪ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಶಾಂತಿಯುತ ಮತದಾನ ಜರುಗಿತು. ನಗರದ ವಿವೇಕಾನಂದ ಶಾಲೆಯಲ್ಲಿ ತೆರೆದಿದ್ದ ಎರಡು ಮತಗಟ್ಟೆಗಳಲ್ಲಿ ಬೆಳಗ್ಗೆ ಮಂದಗತಿಯಿಂದ ಸಾಗಿದ್ದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ವೇಳೆಗೆ ಚುರುಕುಗೊಂಡಿದ್ದು ಶೇ. 56.79ರಷ್ಟು ಮತದಾನವಾಗಿದೆ.
ಕೊನೆ ಕ್ಷಣದ ಓಲೈಕೆ…
ಮತಗಟ್ಟೆಯಿಂದ ನೂರು ಮೀಟರ್ ದೂರದಲ್ಲಿ ಚುನಾವಣೆಗೆ ಸ್ಪರ್ಧಿಸಿದ ಎಲ್ಲ್ಲ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕೊನೆ ಕ್ಷಣದಲ್ಲಿ ಮತದಾರರ ಓಲೈಕೆಯಲ್ಲಿ ತೊಡಗಿದ್ದರು. ಮತದಾರರ ಓಲೈಕೆ ಮಾಡುತ್ತಿರುವಾಗ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ಮಧ್ಯೆ ವಾಗ್ವಾದ ನಡೆಯಿತು. ಆಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣ ಮಾಡಿದರು.
ಗುರುತಿನ ಚೀಟಿ ತಾಪತ್ರಯ…
ಮತದಾರರಿಗೆ ಗುರುತಿನ ಚೀಟಿ ಕಡ್ಡಾಯ ಮಾಡಿದ್ದರೂ ಕೆಲವು ಮತದಾರರು ಅದನ್ನು ಮರೆತು ಮತಗಟ್ಟೆಗೆ ಆಗಮಿಸಿ ತೊಂದರೆ ಅನುಭವಿಸುತ್ತಿರುವುದು ಕಂಡು ಬಂದಿತು. ಒಬ್ಬ ಸುಶಿಕ್ಷಿತ ಮತದಾರ ಜೆರಾಕ್ಸ್ ಮಾಡಿದ ಗುರುತಿನ ಪತ್ರ ಮತ ಚಲಾಯಿಸಲು ಆಗಮಿಸಿದ್ದರು. ಆದರೆ, ಅದಕ್ಕೆ ಚುನಾವಣಾ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಹೀಗಾಗಿ ಮತಗಟ್ಟೆಯಿಂದ ಪುನಃ ಮನೆಗೆ ತೆರಳಿ ಗುರುತಿನ ಮೂಲ ಪ್ರತಿ ತಂದು ತೋರಿಸಿ ಮತ ಚಲಾಯಿಸಿದರು.
ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸುವ ಅಂಗವಿಕಲರಿಗೆ ಹಾಗೂ ವಯೋವೃದ್ಧರಿಗಾಗಿ ಮತಕೇಂದ್ರದಲ್ಲಿ ಎರಡು ವ್ಹಿಲ್ ಚೇರ್ ಹಾಗೂ ನಗರಸಭೆ ಸಿಬ್ಬಂದಿ ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net