ಅಖಿಲ ಭಾರತ ಮುಷ್ಕರಕ್ಕೆ ಸಂಘಟನೆಗಳ ಸಾಥ್ ; ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ

26Tmk_JCTU_Protest
Published on

ತುಮಕೂರು: ಕೇಂದ್ರ, ರಾಜ್ಯ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಹಾಗೂ ಶಿಕ್ಷಣ, ಆರೋಗ್ಯ, ರೈಲ್ವೆ, ರಸ್ತೆ, ವಿದ್ಯುತ್, ದೂರಸಂಪರ್ಕ, ವಿಮೆ, ಬ್ಯಾಂಕ್, ಬಂದರು, ವಿಮಾನ ನಿಲ್ದಾಣ ಹಾಗೂ ರಕ್ಷಣಾ ವಲಯದ ಕೈಗಾರಿಕೆಗಳ ಖಾಸಗೀಕರಣ ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ (ಜೆಸಿಟಿಯು) ಅಖಿಲ ಭಾರತ ಮುಷ್ಕರದ ಭಾಗವಾಗಿ ಗುರುವಾರ ನಗರದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ನಗರದ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗ ಜೆಸಿಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತರು, ಕಟ್ಟಡ ಕಾರ್ಮಿಕರು, ಪೌರಕಾರ್ಮಿಕರು, ುಟ್‌ಪಾತ್ ವ್ಯಾಪಾರಿಗಳು, ವಿವಿಧ ಕಾರ್ಖಾನೆಗಳ ಕಾರ್ಮಿಕರು ಹಾಗೂ ಎಲ್‌ಐಸಿ, ಬಿಎಸ್‌ಎನ್‌ಎಲ್, ಅಂಚೆ ಇಲಾಖೆ ನೌಕರರು ಧರಣಿ ನಡೆಸಿದರು.

ನಂತರ ಮಾನವ ಸರಪಣಿ ರಚಿಸಿ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಾನವ ಸರಪಳಿ ರಚಿಸುವ ವೇಳೆ ತಡೆಯಲು ಯತ್ನಿಸಿದ ಪೊಲೀಸರೊಂದಿಗೆ ಪ್ರತಿಭಟನಾಕಾರರು ಮಾತಿನ ಚಕಮಕಿಗೆ ಇಳಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‌ಮುಜೀಬ್, ಜನತೆಯ ದಿಕ್ಕು ತಪ್ಪಿಸಲು ಮತಗಳ ದೃಷ್ಟಿಯಿಂದ ನಿಗಮಗಳನ್ನು ರಚಿಸಲಾಗುತ್ತಿದೆ. ಸರ್ಕಾರದ ನಡೆ ಸಮುದಾಯಗಳ ನೈಜ ಪ್ರಗತಿಗಿಂತ ಮತಕ್ಕಾಗಿ ಅಷ್ಟೆ. ತುರ್ತು ಪರಿಸ್ಥಿತಿ-ಕಾರ್ಪೋರೇಟ್ ಲಾಭಕ್ಕೆ ಹಾಗೂ ಬಡ ಜನರ ಲೂಟಿಗೆ ಬಳಸಲಾಗುತ್ತಿದೆ ಎಂದು ಹರಿಹಾಯ್ದರು.

ಸರ್ಕಾರ ಕಾರ್ಮಿಕ ವಿರೋಧಿಯಾಗಿದೆ, ಬಡ ಜನರ ಬಗ್ಗೆ ಸ್ಪಂದನೆ ನೀಡುತ್ತಿಲ್ಲ ಹಾಗಾಗಿ ಹೋರಾಟ ಅನಿವಾರ್ಯ ಎಂದು ಎಐಟಿಯುಸಿ ಕಂಬೇಗೌಡ ಎಚ್ಚರಿಸಿದರು. ಎಐಯುಟಿಯುಸಿ ಜಿಲ್ಲಾ ಸಂಚಾಲಕಿ ಮಂಜುಳಾ, ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಖಪ್ಪ , ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ಎಐಟಿಯುಸಿ ಕಾಂತರಾಜು, ಅಶ್ವತ್ಥ್‌ನಾರಾಯಣ್, ಕುಮಾರ್, ಅಂಗನವಾಡಿ ನೌಕರರ ಸಂಘದ ಗಂಗಾ, ಗೌರಮ್ಮಾ, ಜಬಿನಾ, ರಾಜಶೇಖರ್, ಮುತ್ತುರಾಜ್, ವಾಸೀಮ್ ಕಟ್ಟಡ ಕಾರ್ಮಿಕರ ಸಂಘದ ಗಂಗಾಧರ್, ಕಲೀಲ್, ಶಂಕರಪ್ಪ, ಪ್ರತಿಭಟನೆ ನೇತೃತ್ವವಹಿಸಿದ್ದರು.

ಅಂಗನವಾಡಿ ನೌಕರರು ಸ್ವಾತಂತ್ರ್ಯ ಚೌಕದಿಂದ, ಪೌರಕಾರ್ಮಿಕರು ಟೌನ್‌ಹಾಲ್‌ನಿಂದ, ುಟ್‌ಪಾತ್ ವ್ಯಾಪಾರಿಗಳು ಡಾ.ಅಂಬೇಡ್ಕರ್ ಭವನದಿಂದ ಪ್ರತ್ಯೇಕವಾಗಿ ಬಂದು ಬಿಎಸ್‌ಎನ್‌ಎಲ್ ಕಚೇರಿ ಬಳಿ ಜಮಾಯಿಸಿದರು.

ರೈತರ ಮೇಲಿನ ದಾಳಿಗೆ ಖಂಡನೆ: ಅಖಿಲ ಭಾರತ ಮುಷ್ಕರ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ದೆಹಲಿಗೆ ತೆರಳುತ್ತಿದ್ದ ಅನ್ನದಾತ ರೈತರ ಮೇಲೆ ಜಲಪಿರಂಗಿ ಬಳಸಿ ಪೊಲೀಸ್ ದೌರ್ಜನ್ಯದ ಮೂಲಕ ಹೋರಾಟವನ್ನು ಹತ್ತಿಕ್ಕುವ ಸರ್ಕಾರದ ಕ್ರಮವನ್ನು ಜೆಸಿಟಿಯು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net