

ಪಟನಾ: ಪೌರತ್ವ ತಿದ್ದುಪಡಿ ಕಾನೂನನ್ನು (ಸಿಎಎ) ಮರುಪರಿಶೀಲನೆಗೆ ಒಳಪಡಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಆಗ್ರಹಿಸಿದ್ದಾರೆ. ರಾಷ್ಟ್ರವ್ಯಾಪಿ ಪೌರತ್ವ ನೋಂದಣಿಯ (ಎನ್ಆರ್ಸಿ) ಅಗತ್ಯವೂ ಇಲ್ಲ ಎಂದು ಅವರು ಹೇಳಿದ್ದಾರೆ. ಈ ಮೂಲಕ ಸಿಎಎ ಬಗ್ಗೆ ಅಪಸ್ವರ ಎತ್ತಿದ ಬಿಜೆಪಿ ನೇತೃತ್ವದ ಮೈತ್ರಿಕೂಟದ ಮೊದಲ ನಾಯಕನಾಗಿ ನಿತೀಶ್ ಹೊರಹೊಮ್ಮಿದ್ದಾರೆ. ಸಿಎಎ ಬಗ್ಗೆ ರ್ಚಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ನಡೆಸುವ ಅಗತ್ಯವಿದೆ. ಎನ್ಆರ್ಸಿಯನ್ನು ರಾಜ್ಯದಲ್ಲಿ ಜಾರಿಗೊಳಿಸುವ ಪ್ರಶ್ನೆಯೇ ಇಲ್ಲ. ಅದರ ಅಗತ್ಯವೂ ಇಲ್ಲ ಎಂದಿದ್ದಾರೆ.
ಅಂದು ಬೆಂಬಲ; ಇಂದು ವಿರೋಧ: ರಾಷ್ಟ್ರೀಯ ಪೌರತ್ವ ಮಸೂದೆಗೆ ನಿತೀಶ್ ನಾಯಕತ್ವದ ಜೆಡಿಯು ಸಂಸತ್ತಿನಲ್ಲಿ ಬೆಂಬಲ ನೀಡಿತ್ತು. ಈಗ ನಿತೀಶ್ ತಮ್ಮ ನಿಲುವನ್ನು ಬದಲಾಯಿಸಿ ಸಿಎಎ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್ ಮತ್ತು ಲಾಲು ಪ್ರಸಾದ್ ಯಾದವ್ರ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಸದಸ್ಯರು, ಸಿಎಎ ವಿರುದ್ಧ ಸದನದಲ್ಲಿ ತೀಕ್ಷ್ಣ ವಾಗ್ದಾಳಿ ನಡೆಸಿದ ನಂತರ ಮುಖ್ಯಮಂತ್ರಿ ನಿತೀಶ್ಕೂಡ ಇದಕ್ಕೆ ದನಿಗೂಡಿಸಿದರು. ಸಿಎಎ ಬಗ್ಗೆ ರ್ಚಚಿಸುವ ಅಗತ್ಯವಿದೆ. ಎಲ್ಲ ಸದಸ್ಯರು ಬಯಸಿದರೆ ಈ ಸದನದಲ್ಲಿ ಚರ್ಚೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಎನ್ಆರ್ಸಿಗೆ ಯಾವುದೇ ಸಮರ್ಥನೆ ಇಲ್ಲ ಎಂದರು. ‘ಸಿಎಎ, ಎನ್ಆರ್ಸಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವುದಿಲ್ಲ’ ಎಂದು ಜೆಡಿಯು ನಾಯಕ ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ ಮರುದಿನವೇ ನಿತೀಶ್ ತಮ್ಮ ನಿಲುವನ್ನು ಬಹಿರಂಗಪಡಿಸಿದ್ದಾರೆ.