ಇ-ಸ್ವತ್ತು ನಾಗರಿಕರು ಸುಸ್ತು! ಗ್ರಾಪಂಗಳಲ್ಲಿ ಆಗುತ್ತಿಲ್ಲ ಕೆಲಸ

ವಿಜಯವಾಣಿ-14-1
Published on

|ವಿಲಾಸ ಮೇಲಗಿರಿ, ಬೆಂಗಳೂರು

ಗ್ರಾಮೀಣ ಪ್ರದೇಶದಲ್ಲಿ ಆಸ್ತಿ ಮಾರಾಟ, ಖರೀದಿ, ಬ್ಯಾಂಕ್ ಸಾಲ, ವಿದ್ಯುತ್ ಸಂಪರ್ಕ, ಖಾತೆ ಬದಲಾವಣೆ.. ಮತ್ತಿತರ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ! ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇ-ಸ್ವತ್ತು ನೀಡುವ ವಿಚಾರದಲ್ಲಿ ತಲೆದೋರಿರುವ ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ. ಸ್ಥಳೀಯ ಮಟ್ಟದಲ್ಲೇ ಆಡಳಿತ ನೀಡುವ ಪರಿಕಲ್ಪನೆಯಡಿ ಅನೇಕ ಸವಲತ್ತುಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀಡಲಾಗುತ್ತದೆ. ಆದರೆ ತಾಂತ್ರಿಕ ಸಮಸ್ಯೆಗಳಿಂದ ಈ ಸೌಲಭ್ಯಗಳು ಜನರ ಕೈಗೆ ಸಕಾಲದಲ್ಲಿ ಸಿಗುತ್ತಿಲ್ಲ.

ರೈತರು, ಸಾರ್ವಜನಿಕರು ದಾಖಲೆಗಳಿಗಾಗಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಈ ಹಿಂದೆ ಇದ್ದ ಇ-ಸ್ವತ್ತು ತಂತ್ರಾಂಶವನ್ನು 4.8 ಅವತರಣಿಕೆ ಮೇಲ್ದರ್ಜೆಗೇರಿಸಿ ನಮೂನೆ 11ಎ ಮತ್ತು 11ಬಿ ವಿತರಣೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವುದು ಅವಾಂತರ ಸೃಷ್ಟಿಸಿದೆ. ಈ ತಂತ್ರಾಂಶ ಬಳಕೆದಾರಸ್ನೇಹಿ ಆಗಿಲ್ಲದ ಕಾರಣ ಪದೇಪದೆ ತಾಂತ್ರಿಕ ದೋಷ ಎದುರಾಗಿ ಜನರಿಗೆ ಸೌಲಭ್ಯ ಕಲ್ಪಿಸುವಲ್ಲಿ ಅಡ್ಡಿಯಾಗಿದೆ. ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಸರ್ಕಾರದ ನಿರ್ದೇಶನದಂತೆ ನಮೂನೆ 9/11ಎ, 11 ಬಿ ವಿತರಿಸಿ ನಿವೇಶನ ತೆರಿಗೆ, ಕಟ್ಟಡಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ.

ನಿತ್ಯ 50-60 ಸಾವಿರ ಅರ್ಜಿ

ಗ್ರಾಮ ಪಂಚಾಯಿತಿಗಳಲ್ಲಿ ನಿತ್ಯ ಕನಿಷ್ಠ 50 ರಿಂದ 60 ಸಾವಿರ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಒಂದು ತಿಂಗಳಿಂದ ಸೇವೆ ಒದಗಿಸಲು ಆಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಮತ್ತು ಪಂಚಾಯಿತಿ ಅಧಿಕಾರಿಗಳ ನಡುವೆ ಸಂಘರ್ಷ ಏರ್ಪಡುತ್ತಿದೆ. ಇ-ಸ್ವತ್ತು ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಸಾಕಷ್ಟು ಬಾರಿ ಸಂಬಂಧಪಟ್ಟವರಲ್ಲಿ ಮನವಿ ಮಾಡಿಕೊಂಡರೂ ಸಮಸ್ಯೆ ಬಗೆಹರಿದಿಲ್ಲ ಎಂದು ಪಿಡಿಒಗಳು ದೂರುತ್ತಾರೆ.

ಏನೇನು ಸಮಸ್ಯೆ?

  • ಇ-ಸ್ವತ್ತು 4.8 ತಂತ್ರಾಂಶ ಅತ್ಯಂತ ನಿಧಾನವಾಗಿ ಕಾರ್ಯವಿರ್ವಹಿಸುತ್ತಿದೆ
  • ಪದೇ ಪದೆ ಲಾಗ್ ಔಟ್ ಆಗುತ್ತಿದ್ದು, ಅರ್ಜಿಯನ್ನು ಅಪ್​ಲೋಡ್ ಮಾಡಲು ದಿನವಿಡೀ ಕಾಯಬೇಕಾಗಿದೆ
  • ಸರ್ವರ್ ಎರರ್ ಸಮಸ್ಯೆ
  • ಹೊಸ ಅರ್ಜಿಗಳನ್ನು ದಾಖಲಿಸುವಾಗ ಲಾಗ್ ಔಟ್ ಆದಲ್ಲಿ ಆ ಸಮಯದವರೆಗೆ ದಾಖಲಿಸಿದ ಮಾಹಿತಿಗಳು ಮತ್ತೆ ಲಭ್ಯವಾಗಲು ರಿಟ್ರೖೆವ್ ಆಪ್ಷನ್ ತಂತ್ರಾಂಶದಲ್ಲಿ ಇದ್ದರೂ, ಅದು ಕೆಲಸ ಮಾಡುತ್ತಿಲ್ಲ
  • ಮ್ಯೂಟೇಷನ್ ಅನುಮೋದನೆ ನೀಡುವಾಗ ಫಸ್ಟ್ ಇನ್ ಫಸ್ಟ್ ಔಟ್ ಮಾದರಿ ಜಾರಿಯಾಗಿದೆ. ಇದರಿಂದಾಗಿ ತುರ್ತು ಕೆಲಸವಿರುವವರಿಗೆ ಮ್ಯೂಟೇಷನ್ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ

ಗ್ರಾಮ ಪಂಚಾಯಿತಿಗಳ ಇ-ಸ್ವತ್ತಿನಲ್ಲಿ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಎನ್​ಐಸಿ ಈಗಾಗಲೇ ಸಮಸ್ಯೆ ಪರಿಹರಿಸಿರುವುದಾಗಿ ಹೇಳಿದ್ದಾರೆ. ಆದಾಗ್ಯೂ ಬೆಂಗಳೂರು ಆಸುಪಾಸಿನ ಐದಾರು ಪಿಡಿಒಗಳನ್ನು ಸೋಮವಾರ ಕಚೇರಿಗೆ ಆಹ್ವಾನಿಸಿ ಎನ್​ಐಸಿ ಅವರ ಸಮ್ಮುಖದಲ್ಲೇ ಲಾಗಿನ್ ಮಾಡಿಸಿ ಚೆಕ್ ಮಾಡುತ್ತೇವೆ. ಏನಾದರೂ ಸಮಸ್ಯೆ ಇದ್ದರೆ ಅವುಗಳನ್ನು ಪರಿಹರಿಸುತ್ತೇವೆ.

| ಡಾ.ಕೆ. ನಂದಿನಿ ದೇವಿ, ನಿರ್ದೇಶಕರು, ಇ-ಆಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net