

ನವದೆಹಲಿ: ಕಳೆದ ವಾರ ಸಂಭವಿಸಿದ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಸಂಸತ್ ಭವನ ಸಂಕೀರ್ಣದ ಭದ್ರತಾ ಹೊಣೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್ಎಫ್) ವಹಿಸಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಬುಧವಾರ ಅಧಿಸೂಚನೆಯೊಂದರಲ್ಲಿ ತಿಳಿಸಿದೆ. ಇದುವರೆಗೆ ದೆಹಲಿ ಪೊಲೀಸರು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಸಂಸತ್ ಭವನ ಸಂಕೀರ್ಣ ಪ್ರವೇಶಿಸುವವರನ್ನು ತಪಾಸಣೆ ನಡೆಸುವುದು ಸೇರಿದಂತೆ ಎಲ್ಲ ಜವಾಬ್ದಾರಿಗಳನ್ನು ಸಿಐಎಸ್ಎಫ್ ನೋಡಿಕೊಳ್ಳಲಿದೆ ಎಂದು ಅಧಿಸೂಚನೆ ಹೇಳಿದೆ.
ಸಂಸತ್ ಭವನ ಕಟ್ಟಡದ ಭದ್ರತೆ ಹೊಣೆ ಲೋಕ ಸಭಾ ಕಾರ್ಯಾಲಯದ ವ್ಯಾಪ್ತಿಯಲ್ಲೇ ಮುಂದುವರಿಯಲಿದ್ದು ಆವರಣದ ಹೊರ ಭಾಗಕ್ಕೆ ಪೊಲೀಸರು ರಕ್ಷಣೆ ಒದಗಿಸಲಿದ್ದಾರೆ. ವಿವಿಧ ಸಂಸ್ಥೆಗಳ ನಡುವೆ ಪರಸ್ಪರ ಹೊಂದಾಣಿಕೆ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಶಿಷ್ಟಾಚಾರಗಳನ್ನು ಸುಗಮಗೊಳಿಸುವ ಪ್ರಯತ್ನವಾಗಿ ಈ ಬದಲಾವಣೆಯನ್ನು ಮಾಡಲಾಗಿದೆ.
ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದಿದ್ದ ಇಬ್ಬರು ಡಿಸೆಂಬರ್ 13ರಂದು ಲೋಕಸಭೆಗೆ ಪ್ರವೇಶ ಪಡೆದಿದ್ದರು. ಕಲಾಪ ನಡೆಯುತ್ತಿದ್ದ ವೇಳೆ ವೀಕ್ಷಕರ ಗ್ಯಾಲರಿಯಿಂದ ಕೆಳಗೆ ಜಿಗಿದಿದ್ದ ಇಬ್ಬರೂ ಸದನದೊಳಗೆ ಹಳದಿ ಹೊಗೆ ಸೂಸುವ ಡಬ್ಬಿ ಸ್ಪೋಟಿಸಿದ್ದರಿಂದ ಆತಂಕ ಉಂಟಾಗಿತ್ತು. ದೆಹಲಿ ಪೊಲೀಸರ ದೈಹಿಕ ತಪಾಸಣೆ ವೇಳೆ ಅವರ ಕಣ್ಣು ತಪ್ಪಿಸಿ ಸದನದೊಳಗೆ ಹೊಗೆ ಡಬ್ಬಿ ತಂದಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ದುಷ್ಕರ್ವಿುಗಳು ತಮ್ಮ ಶೂಗಳನ್ನು ಕೊರೆದು ಅದರಲ್ಲಿ ಡಬ್ಬಿಯನ್ನು ಇಟ್ಟುಕೊಂಡು ಬಂದಿದ್ದರು.
ಸಿಐಎಸ್ಎಫ್ ಜವಾಬ್ದಾರಿ ಏನು?
ಸೂಕ್ಷ್ಮವಾದ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಸಮಗ್ರ ಭದ್ರತೆಯನ್ನು ಒದಗಿಸುವುದು ಸಿಐಎಸ್ಎಫ್ ಜವಾಬ್ದಾರಿಯಾಗಿದೆ. ಸಿಐಎಸ್ಎಫ್ ಸಿಬ್ಬಂದಿ ಪ್ರಸ್ತುತ ವಿಮಾನ ನಿಲ್ದಾಣಗಳು, ಬಂದರುಗಳು, ಮತ್ತು ಪರಮಾಣು ಸ್ಥಾವರಗಳ ಸಹಿತ 350ಕ್ಕೂ ಹೆಚ್ಚು ಸ್ಥಳಗಳ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದಾರೆ.