

ಬೆಂಗಳೂರು: ಮೈಕ್ರೋ ಫೈನಾನ್ಸ್ಗಳ ಬಲವಂತದ ವಸೂಲಿಗೆ ಬ್ರೇಕ್ ಹಾಕುವುದಕ್ಕಾಗಿ ರೂಪಿಸಲು ಉದ್ದೇಶಿಸಿರುವ ಮಸೂದೆಗೆ ಬರಬಹುದಾದ ನಿರೀಕ್ಷಿತ ತಾಂತ್ರಿಕ ಅಡೆತಡೆ ನಿವಾರಿಸುವ ಪ್ರಯತ್ನವನ್ನು ಸರ್ಕಾರ ತೀವ್ರಗೊಳಿಸಿದೆ. ಈ ನಿಟ್ಟಿನಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತಾದರೂ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿದೆ.
ಅಧಿಕಾರಿಗಳಿಗೆ ಹೊಣೆ: ಮತ್ತೊಂದೆಡೆ ಈ ವಿಚಾರವಾಗಿ ವ್ಯಾಪಕ ಚರ್ಚೆ ಅನಿವಾರ್ಯವಾದ್ದರಿಂದ ಸಿಎಂ ಗೃಹ ಕಚೇರಿಯಲ್ಲಿ ಹಿರಿಯ ಸಚಿವರ ಪ್ರತ್ಯೇಕ ಸಭೆ ನಡೆಯಿತು. ಗೃಹ ಸಚಿವ ಜಿ. ಪರಮೇಶ್ವರ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿ ಹಿರಿಯ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಸಿದ ಬಳಿಕ ಕರಡು ಮಸೂದೆಯಲ್ಲಿರುವ ಅಂಶಗಳನ್ನು ಪರಿಶೀಲಿಸಿ ಅಂತಿಮಗೊಳಿಸುವ ಹೊಣೆಯನ್ನು ಕಾನೂನು, ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ವಹಿಸಲಾಗಿದೆ.
ಮೈಕ್ರೋ ಫೈನಾನ್ಸ್ಗಳ ಕಿರುಕುಳದ ವಿಚಾರವಾಗಿ ಸಭೆಯಲ್ಲಿ ಸಿಎಂ ಹಲವು ವಿಚಾರ ಹಂಚಿಕೊಂಡರು. ಸಾಲ ಕಿರುಕುಳವನ್ನು ತಪ್ಪಿಸಿ, ಬಲವಂತದ ವಸೂಲಿಗೆ ಕಡಿವಾಣ ಹಾಕಬೇಕಿದೆ. ಇದಕ್ಕಾಗಿಯೇ ಬಲಿಷ್ಠ ಕಾಯ್ದೆ ರಚನೆ ಮಾಡಲು ನಿರ್ಧರಿಸಲಾಗಿದೆ. ಈ ಕಾಯ್ದೆ ಸಂಪೂರ್ಣವಾಗಿ ಕಾನೂನುಬದ್ಧವಾಗಿದ್ದು ಲೋಪರಹಿತವಾಗಿರಲಿದೆ ಎಂದರು.
ಹಣಕಾಸು ಇಲಾಖೆ ಹಿರಿಯ ಅಧಿಕಾರಿ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿ, ‘ಸಮಸ್ಯೆ ಅರಿವಿದೆ, ಪರಿಹಾರವೂ ಗೊತ್ತಿದೆ. ಆದರೆ, ಕಾನೂನು ರೂಪಿಸಿ ಜಾರಿ ಮಾಡುವಾಗ ಅನೇಕ ಸಮಸ್ಯೆ ಎದುರಾಗುತ್ತದೆ. ಅದರ ಬಗ್ಗೆ ಹಲವು ಸುತ್ತಿನ ಚರ್ಚೆ ಆಗಬೇಕಾಗುತ್ತದೆ. ಆತುರ ಮಾಡಿದರೆ ಪ್ರಯೋಜನ ಆಗುವುದಿಲ್ಲ’ ಎಂದರು.
ಕುತೂಹಲ ಕೆರಳಿಸಿದ ಸಚಿವರ ಸಭೆ: ಗುರುವಾರ ಸಂಪುಟ ಸಭೆ ಬಳಿಕ ನಾಲ್ವರು ಸಚಿವರು ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಮತ್ತೆ ಕುತೂಹಲಕ್ಕೆ ಕಾರಣವಾಗಿದೆ.
ಗೃಹ ಸಚಿವ ಪರಮೇಶ್ವರ ಅವರ ವಿಧಾನಸೌಧದ ಕೊಠಡಿಯಲ್ಲಿ ಸಹಕಾರ ಸಚಿವ ರಾಜಣ್ಣ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅರ್ಧತಾಸು ಸಭೆ ನಡೆಸಿದ್ದಾರೆ. ಎಸ್ಸಿಎಸ್ಟಿ ಸಮಾವೇಶದ ಉದ್ದೇಶದಿಂದ ಹಾಗೂ ಎಸ್ಸಿಎಸ್ಟಿ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಉದ್ದೇಶಿಸಿದ್ದಾಗ ಪಕ್ಷದ ಹೈಕಮಾಂಡ್ ಬ್ರೇಕ್ ಹಾಕಿತ್ತು. ನಂತರದ ಬೆಳವಣಿಗೆಯಲ್ಲಿ ಸಚಿವರು ಅಸಮಾಧಾನವನ್ನೂ ಹೊರಹಾಕಿದ್ದರು. ಇದೀಗ ಸಭೆ ನಡೆಸಲು ಅವಕಾಶ ಕೊಡುವಂತೆ ಹೈಕಮಾಂಡ್ ಮುಂದೆ ಬೇಡಿಕೆ ಇಡಲು ನಿರ್ಧರಿಸಿದ್ದಾರೆನ್ನಲಾಗಿದೆ.
ಸರ್ಕಾರದ ಮುಂದಿರುವ ಸವಾಲು: ಪರವಾನಗಿ ಪಡೆದ ಕಂಪನಿಗಳು ಶೇ.14ರಿಂದ ಶೇ.21ರವರೆಗೆ ಬಡ್ಡಿ ವಿಧಿಸುವುದಕ್ಕೆ ಆರ್ಬಿಐ ಅನುಮತಿಯಿದೆ. ಬಲವಂತ, ಅಮಾನವೀಯವಾಗಿ ಸಾಲ ವಸೂಲಿ, ಅಧಿಕ ಬಡ್ಡಿ ಪೀಕುತ್ತಿದ್ದರೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ, ಸಾಮಾಜಿಕವಾಗಿ ಏರುಪೇರು ಸೃಷ್ಟಿಸಿದ್ದರೆ ಮಾತ್ರ ಕ್ರಮವಹಿಸಬಹುದು. ಮೈಕ್ರೋಫೈನಾನ್ಸ್ಗಳ ವಿರುದ್ಧ ತೀವ್ರ ದಂಡಾಸ್ತ್ರ ಪ್ರಯೋಗ ಮಾಡಲು ಮುಂದಾದರೆ ಅವು ಆರ್ಥಿಕವಾಗಿ ನಷ್ಟಕ್ಕೀಡಾಗಬಹುದು. ಅದು ಇನ್ನೊಂದು ರೀತಿ ಸಮಸ್ಯೆಗೆ ಕಾರಣವಾಗುತ್ತದೆ. ಕಠಿಣವಾದ ಕಾನೂನುಗಳಿಂದ ಹೆದರಿ ಮೈಕ್ರೋ ಫೈನಾನ್ಸ್ ಕಂಪನಿಗಳು ಸಣ್ಣಪುಟ್ಟ ವ್ಯಾಪಾರ, ಹೈನುಗಾರಿಕೆ, ಗುಡಿ ಕೈಗಾರಿಕೆಗಳಿಗೆ ಸಾಲ ನೀಡಲು ಹಿಂದೇಟು ಹಾಕಬಹುದು.
ಇದರಿಂದ ಸಾಲದ ಅಗತ್ಯವುಳ್ಳ ಬಡವರು, ಕಾರ್ವಿುಕರು, ಸಣ್ಣ ವ್ಯಾಪಾರಿಗಳು ಖಾಸಗಿ ಲೇವಾದೇವಿದಾರರ ಆಶ್ರಯ ಪಡೆದು ಹೆಚ್ಚಿನ ಬಡ್ಡಿ ದರದ ಸುಳಿಗೆ ಸಿಲುಕುವರು. ಹಾಗಿದ್ದರೆ ಹೊಸ ಮಸೂದೆಯ ಔಚಿತ್ಯವೇನು ಎಂಬ ಪ್ರಶ್ನೆ ಎದುರಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಕೈಸಾಲ ತಕ್ಷಣಕ್ಕೆ ಸಿಗುವುದಿಲ್ಲ, ಅಲ್ಲಿ ಅಡಮಾನ ತಾಪತ್ರಯ ಇರುತ್ತದೆ. ಅಲ್ಲದೇ ಎಲ್ಲರಿಗೂ ಬ್ಯಾಂಕುಗಳಿಗೆ ಹೋಗಲಾಗದು. ಕಠಿಣ ಕಾಯ್ದೆಯಿಂದ ಮೈಕ್ರೋ ಫೈನಾನ್ಸ್ ಕಂಪನಿಗಳ ವ್ಯವಹಾರ ಸ್ಥಗಿತಗೊಂಡರೆ ಭದ್ರತೆಯಿಲ್ಲದೆ ಕಿರುಸಾಲ ವ್ಯವಸ್ಥೆಯೇ ಬಂದ್ ಆದರೆ ಆರ್ಥಿಕ ವ್ಯವಸ್ಥೆ ಏರುಪೇರಾಗಲಿದೆ.
ಹೊಸ ಕಾಯ್ದೆಗಿರುವ ತೊಡಕು
ಹೇಗಿದೆ ಮಸೂದೆ ಸ್ವರೂಪ
ಮೈಕ್ರೋ ಫೈನಾನ್ಸ್ಗಳ ಕಿರುಕುಳ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕಾನೂನು ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ವನಿಸಲಾಗಿದೆ.
ಡಿ.ಕೆ.ಶಿವಕುಮಾರ್, ಡಿಸಿಎಂ
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ನಿಯಂತ್ರಣಕ್ಕೆ ತರಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ನಿಶ್ಚಿತವಾಗಿ ಹೊರಡಿಸಲಿದೆ. ಮೈಕ್ರೋ ಫೈನಾನ್ಸ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸಹ ಭಾಗಿಯಾಗಬೇಕು. ನಾನು ಗೃಹ ಸಚಿವನಾಗಿದ್ದ ಸಂದರ್ಭ ಐಎಂಎ ಹಗರಣ ಆಗಿತ್ತು. ಈಗ ಮೈಕ್ರೋ ಫೈನಾನ್ಸ್ ಹಾವಳಿ ಮಿತಿಮೀರಿದೆ. ಇದಕ್ಕೆ ಅಂತ್ಯ ಹಾಡಬೇಕಿದೆ.
ಎಂ.ಬಿ.ಪಾಟೀಲ್, ಬೃಹತ್ ಕೈಗಾರಿಕೆ ಸಚಿವ