ಚಿತ್ರಮಂದಿರಗಳಲ್ಲಿ ಸದ್ಯದ ಪರಿಸ್ಥಿತಿ; ತೆರೆದಿದೆ ಥಿಯೇಟರ್.. ಓ ಬಾ ಪ್ರೇಕ್ಷಕ...

City Cinema Talkies
Published on

ಬೆಂಗಳೂರು: ಕರೊನಾ ಮತ್ತು ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ 7 ತಿಂಗಳಿಂದ ಸ್ಥಗಿತಗೊಂಡಿದ್ದ ಸಿನಿಮಾ ಪ್ರದರ್ಶನವನ್ನು ಅ.15ರಿಂದ ಪ್ರಾರಂಭಿಸಬಹುದು ಎಂದು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಬೆಂಗಳೂರು ಸೇರಿ ರಾಜ್ಯದ ಹಲವು ನಗರಗಳಲ್ಲಿ ಚಿತ್ರಪ್ರದರ್ಶನ ಶುರುವಾಗಿತ್ತು. ಈ ಒಂದು ವಾರದಲ್ಲಿ ಜನರ ಪ್ರತಿಕ್ರಿಯೆ ಹೇಗಿತ್ತು ಎಂಬ ಪ್ರಶ್ನೆಗೆ ಅಷ್ಟೇನೂ ಆಶಾದಾಯಕ ಉತ್ತರ ಸಿಗುವುದಿಲ್ಲ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ ಕಾಡುತ್ತಿರುವುದರಿಂದ 'ತೆರೆದಿದೆ ಥಿಯೇಟರ್.. ಬಾ ಓ ಪ್ರೇಕ್ಷಕ..' ಎಂಬಂತಾಗಿದೆ ಪರಿಸ್ಥಿತಿ.

ಕಳೆದ ವಾರ ಏಕಪರದೆ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ‘ಲವ್ ಮಾಕ್​ಟೇಲ್’, ‘ಶಿವಾಜಿ ಸುರತ್ಕಲ್’, ‘ಶಿವಾರ್ಜುನ’, ‘ಮಾಯಾಬಜಾರ್ 2016’ ಮತ್ತು ‘ಕಾಣದಂತೆ ಮಾಯವಾದನು’ ಚಿತ್ರಗಳು ಬಿಡುಗಡೆಯಾಗಿದ್ದವು. ವಾರದ ಮಧ್ಯದಲ್ಲಿ ಇನ್ನಷ್ಟು ಚಿತ್ರಗಳು ಸೇರ್ಪಡೆಯಾದವು. ಈ ವಾರ ಇನ್ನಷ್ಟು ಚಿತ್ರಗಳು ಸೇರ್ಪಡೆಗೊಳ್ಳುತ್ತಿವೆ. ಪ್ರಮುಖವಾಗಿ ‘ಕುರುಕ್ಷೇತ್ರ’, ‘ಕೆಜಿಎಫ್’, ‘ಟಗರು’, ‘ರಾಜ್​ಕುಮಾರ’, ‘ಕೋಟಿಗೊಬ್ಬ 2’, ‘ದಮಯಂತಿ’, ‘ದಿಯಾ’ ಮುಂತಾದ ಚಿತ್ರಗಳು ಸೇರ್ಪಡೆಗೊಂಡಿವೆ.

ಕಾಡುತ್ತಿದೆ ಪ್ರೇಕ್ಷಕರ ಅಭಾವ: ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ಇನ್ನಷ್ಟು ಚಿತ್ರಗಳು ಬಿಡುಗಡೆಯಾಗುತ್ತಿವೆ ಯಾದರೂ ಪ್ರೇಕ್ಷಕರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಕಾಣುತ್ತಿಲ್ಲ. ಬಹುತೇಕ ಚಿತ್ರಗಳು ಏಕಪರದೆಯ ಚಿತ್ರಮಂದಿರಗಳಿಗಿಂತ ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆ ಆಗುತ್ತಿವೆ. ಅದರಲ್ಲೂ ಪ್ರತಿದಿನ ಒಂದು ಅಥವಾ ಎರಡು ಪ್ರದರ್ಶನಗಳು ಮಾತ್ರ ಕಾಣುತ್ತಿವೆ. ಇನ್ನು, ಕಳೆದ ವಾರ ಎಲ್ಲೆಲ್ಲಿ ಏಕಪರದೆಯ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ಪ್ರಾರಂಭವಾಯಿತೋ, ಅಲ್ಲೆಲ್ಲ ಪ್ರತಿದಿನ ನಾಲ್ಕು ಪ್ರದರ್ಶನಗಳು ಕಂಡಿವೆ ಎಂದು ಹೇಳುವುದು ಕಷ್ಟ. ಪ್ರೇಕ್ಷಕರ ಅಭಾವದಿಂದ ಹಲವು ಪ್ರದರ್ಶನಗಳು ರದ್ದಾಗಿದ್ದೂ ಉಂಟು.

ಹಳೇ ಚಿತ್ರಗಳಿಂದಲೇ ಸಮಸ್ಯೆ

ಪ್ರೇಕ್ಷಕರು ಕರೊನಾ ಭಯ ಬಿಟ್ಟು ಚಿತ್ರಮಂದಿರಗಳತ್ತ ಬರುತ್ತಿದ್ದಾರಾದರೂ, ನಿರೀಕ್ಷಿತ ಸಂಖ್ಯೆಯಲ್ಲಿ ಬರುತ್ತಿಲ್ಲ ಎಂಬುದು ಹಲವು ಪ್ರದರ್ಶಕರ ಅಭಿಪ್ರಾಯ. ಇಷ್ಟಕ್ಕೂ ಯಾಕೆ ಬರುತ್ತಿಲ್ಲ ಎಂದರೆ ಅದಕ್ಕೊಂದು ಪ್ರಮುಖ ಕಾರಣವಿದೆ. ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರಗಳೆಲ್ಲ ಬಿಡುಗಡೆಯಾದ ಹಳೆಯ ಚಿತ್ರಗಳೇ. ಈ ಚಿತ್ರಗಳನ್ನು ಜನ ಈಗಾಗಲೇ ಟಿವಿ ಮತ್ತು ಒಟಿಟಿಗಳಲ್ಲಿ ನೋಡಿದ್ದಾರೆ. ಬಹುಶಃ ಹೊಸ ಚಿತ್ರಗಳು ಮತ್ತು ಸ್ಟಾರ್​ಗಳ ಚಿತ್ರಗಳು ಬಿಡುಗಡೆಯಾಗಿದ್ದರೆ, ಜನ ಇನ್ನಷ್ಟು ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇತ್ತು.

ಜನ ಕ್ರಮೇಣ ಬರುತ್ತಿದ್ದಾರೆ. ಆದರೂ ಕಲೆಕ್ಷನ್ ಕಡಿಮೆಯೇ. ಹೊಸ ಚಿತ್ರಗಳು ಬಂದರೆ, ಜನ ಸಹಜವಾಗಿಯೇ ಚಿತ್ರಮಂದಿರದತ್ತ ಬರುತ್ತಾರೆ. ಹೊಸ ಚಿತ್ರಗಳು ಬಿಡುಗಡೆಯಾದರೆ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆ ಇದೆ.| ಕೆ.ವಿ. ಚಂದ್ರಶೇಖರ್ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷಮೊದಲ ವಾರ 40 ಚಿತ್ರಮಂದಿರ ಗಳಲ್ಲಿ ನಮ್ಮ ಚಿತ್ರದ ಪ್ರದರ್ಶನವಾಯಿತು. ಈ ವಾರ ಹೆಚ್ಚುವರಿ 20 ಚಿತ್ರಮಂದಿರಗಳು ಸೇರ್ಪಡೆಗೊಂಡಿವೆ. ಹೊಸ ಸಿನಿಮಾಗಳು ಬರುತ್ತಿದ್ದರೆ, ಪ್ರೇಕ್ಷಕ ಸಹ ಚಿತ್ರಮಂದಿರದತ್ತಬರಲು ಮನಸ್ಸು ಮಾಡುತ್ತಾನೆ.| ಶಿವಾರ್ಜುನ ಶಿವಾರ್ಜುನ ಚಿತ್ರದ ನಿರ್ಮಾಪಕ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net