

ಮುಂಬೈ: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಒಂದು ಕಾಲದಲ್ಲಿ ಟಾಪ್ ಹೀರೋಯಿನ್ ಮತ್ತು ಡ್ಯಾನ್ಸ್ ಕ್ವೀನ್ ಆಗಿ ಪ್ರೇಕ್ಷಕರ ಹೃದಯವನ್ನು ಗೆದ್ದವರು. ಆಕೆಯ ಸೌಂದರ್ಯಕ್ಕೆ ಮನಸೋಲದವರು ಇಲ್ಲವೇನೋ..ನಟಿಯಾಗಿ ಬೆಳ್ಳಿತೆರೆಯಲ್ಲಿ ಸ್ವಲ್ಪ ಗ್ಯಾಪ್ ತೆಗೆದುಕೊಂಡರೂ ಜಾಹಿರಾತುಗಳಲ್ಲಿ ನಟಿಸಿ ಹಲವು ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಭಾಗವಹಿಸಿ ಅಭಿಮಾನಿಗಳಿಗೆ ಕಾಣಿಸಿಕೊಳ್ಳುತ್ತಲೇ ಇದ್ದಾರೆ.
ಆದರೆ ಇತ್ತೀಚಿನ ಸುದ್ದಿ ಏನೆಂದರೆ ಮಾಧುರಿ ದೀಕ್ಷಿತ್ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮಾಧುರಿ ದೀಕ್ಷಿತ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಮಹಾರಾಷ್ಟ್ರದ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ರಾತ್ರೋರಾತ್ರಿ ಮಾಧುರಿ ದೀಕ್ಷಿತ್ ಅವರ ಬ್ಯಾನರ್ ರಾರಾಜಿಸಿತ್ತು. ಇದರಿಂದಾಗಿ ಬಿಜೆಪಿಯ ಹಾಲಿ ಸಂಸದೆ ಪೂನಂ ಮಹಾಜನ್ ಬದಲಿಗೆ ಮಾಧುರಿ ದೀಕ್ಷಿತ್ ಅವರು ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಬೈನಲ್ಲಿರುವ ಮಾಧುರಿ ದೀಕ್ಷಿತ್ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಕಿರುಪುಸ್ತಕವನ್ನು ಅವರಿಗೆ ಕೊಟ್ಟಿದ್ದರು. ಇದರಿಂದ ಮಾಧುರಿ ದೀಕ್ಷಿತ್ ಬಿಜೆಪಿ ಸೇರುತ್ತಾರೆ ಎಂಬ ಚರ್ಚೆಗೆ ಇನ್ನಷ್ಟು ಬಲ ಬಂದಂತಾಗಿದೆ. ಈ ಬಗ್ಗೆ ಮಾಧುರಿ ದೀಕ್ಷಿತ್ ಅಧಿಕೃತವಾಗಿ ಪ್ರತಿಕ್ರಿಯೆ ನೀಡಬೇಕಿದೆ.