

ಬ್ರಸೆಲ್ಸ್: ಕರೊನಾ ಸೋಂಕಿನ ಪ್ರಮಾಣ ಭಾರತದಲ್ಲಿ ಕಡಿಮೆಯಾಗುತ್ತಿದೆಯಾದರೂ ಹೊರ ದೇಶಗಳಲ್ಲಿ ಕಡಿಮೆಯಾಗಿಲ್ಲ. ಬೆಲ್ಜಿಯಂನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಲಾಕ್ಡೌನ್ ಸಮಯದಲ್ಲೇ ಕ್ರಿಸ್ಮಸ್ ಬಂದಿರುವುದರಿಂದಾಗಿ, ಹಬ್ಬದ ಆಚರಣೆಗೆ ಅನುಮತಿ ನೀಡಿರುವ ಸರ್ಕಾರ ವಿಚಿತ್ರ ನಿಯಮಗಳನ್ನು ಹಾಕಿದೆ.
ಕ್ರಿಸ್ಮಸ್ ಆಚರಣೆಗೆ ಮನೆಗೆ ಅತಿಥಿಗಳು ಬರಬಹುದು. ಆದರೆ ಅವರ್ಯಾರೂ ಮನೆ ಒಳಗೆ ಬರುವಂತಿಲ್ಲ. ಮನೆಯಿಂದ ಹೊರಗೆಯೇ ಹೆಚ್ಚೆಂದರೆ ನಾಲ್ವರು ಸೇರಿ ಪಾರ್ಟಿ ಮಾಡಬಹುದು. ಬಂದ ಅತಿಥಿಗಳಲ್ಲಿ ಒಬ್ಬರಿಗೆ ಮಾತ್ರ ಮನೆ ಒಳಗೆ ಹೋಗುವುದಕ್ಕೆ ಅವಕಾಶವಿದೆ. ಅವರನ್ನು ಬಿಟ್ಟು ಬೇರ್ಯಾರೂ ಹೋಗುವಂತಿಲ್ಲ. ಮನೆ ಒಳಗಿರುವ ಬಾತ್ರೂಂ ಬಳಸಲೂ ಒಬ್ಬರಿಗೆ ಮಾತ್ರವೇ ಅವಕಾಶ ಎಂದು ಸರ್ಕಾರ ಹೇಳಿದೆ.
ಕ್ರಿಸ್ಮಸ್ ಪ್ರಯುಕ್ತ ಅಗತ್ಯ ಸರಕು ಅಂಗಡಿಗಳನ್ನು ಸೇರಿ ಎಲ್ಲ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ. ಯಾವ ಪ್ರದೇಶದಲ್ಲಿಯೂ ನಾಲ್ಕಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ನವೆಂಬರ್ನಿಂದ ಎರಡನೇ ಹಂತದ ಲಾಕ್ಡೌನ್ ಜಾರಿಯಾಗಿದ್ದು, ಫೆಬ್ರವರಿವರೆಗೂ ಜಾರಿಯಲ್ಲಿರಲಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)