ಕ್ರಿಸ್​ಮಸ್​ ಆಚರಣೆಗೆ ಭರದ ಸಿದ್ಧತೆ; ವಿದ್ಯುತ್​ ದೀಪಗಳಿಂದ ಸಿಂಗಾರಗೊಂಡ ಚರ್ಚ್​ಗಳು; ಇಂದು ವಿವಿಧೆಡೆ ವಿಶೇಷ ಪ್ರಾರ್ಥನೆ

ಕ್ರಿಸ್​ಮಸ್​ ಪ್ರಯುಕ್ತ ಕೋಲಾರದ ಮೆಥೋಡಿಸ್ಟ್​ ಚರ್ಚ್​ನಲ್ಲಿ ಭರದಿಂದ ಸಾಗಿದ ಗೋದಲಿ ಹಾಗೂ ದೀಪಾಲಂಕಾರ
ಕ್ರಿಸ್​ಮಸ್​ ಪ್ರಯುಕ್ತ ಕೋಲಾರದ ಮೆಥೋಡಿಸ್ಟ್​ ಚರ್ಚ್​ನಲ್ಲಿ ಭರದಿಂದ ಸಾಗಿದ ಗೋದಲಿ ಹಾಗೂ ದೀಪಾಲಂಕಾರ
Published on

ಕೋಲಾರ: ಜಿಲ್ಲೆಯಾದ್ಯಂತ ಕ್ರಿಸ್​ಮಸ್​ ಆಚರಣೆಗೆ ಕ್ರಿಶ್ಚಿಯನ್ನರು ಸಜ್ಜಾಗಿದ್ದಾರೆ. ಚರ್ಚ್​ಗಳು, ಮನೆಗಳಿಗೆ ಝಗಮಗಿಸುವ ವಿದ್ಯುತ್​ ದೀಪಾಲಂಕಾರ ಮಾಡಲಾಗಿದ್ದು, ವಿದ್ಯುತ್​ ದೀಪಗಳನ್ನೊಳಗೊಂಡ ನಕ್ಷತ್ರಗಳು, ಕ್ರಿಸ್​ಮಸ್​ ಟ್ರೀ ಗಳನ್ನು ಸ್ಥಾಪಿಸಿ ಹಬ್ಬದ ವಾತಾವರಣ ನಿರ್ಮಿಸಲಾಗಿದೆ.

ಕಳೆದೆರಡು ವರ್ಷ ಕರೊನಾ ಹಿನ್ನೆಲೆಯಲ್ಲಿ ಕ್ರಿಸ್​ಮಸ್​ ಮತ್ತು ಹೊಸ ವರ್ಷಾಚರಣೆಗೆ ಮಸುಕು ಕವಿದಿತ್ತು. ಆದರೆ ಈ ಬಾರಿ ಕರೊನಾ ಸ್ಫೋಟಿಸಿದ ಹಿನ್ನೆಲೆಯಲ್ಲಿ ಕ್ರಿಸ್​ಮಸ್​ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಗರದ ಹಳೇ ಬಸ್​ ನಿಲ್ದಾಣ ಬಳಿಯಿರುವ ಮೆಥೋಡಿಸ್ಟ್​ ಚರ್ಚ್​ನಲ್ಲಿ ಶುಕ್ರವಾರ ಚರ್ಚ್​ ಮೇಲ್ವಿಚಾರಕ ಶಾಂತಕುಮಾರ್​ ನೇತೃತ್ವದಲ್ಲಿ ಸ್ವಚ್ಛತೆ, ಸಿಂಗಾರ ಮತ್ತು ಬರುವ ಜನರಿಗೆ ಕುರ್ಚಿ, ಕುಡಿಯುವ ನೀರು ಸೇರಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು.

ಚರ್ಚ್​ನೊಳಗೆ ಮತ್ತು ಹೊರಗೆ ಕಣ್ಣು ಕೊರೈಸುವ ವಿದ್ಯುತ್​ ದೀಪಾಲಂಕಾರ ಮಾಡಿದ್ದು, ಒಳಗೆ ಕ್ರಿಸ್ತನ ಬಳಿ ಆಕರ್ಷಕ ಕ್ರಿಸ್​ಮಸ್​ ಟ್ರೀ ಸ್ಥಾಪಿಸಲಾಗಿತ್ತು. ಚರ್ಚ್​ ಮುಂಭಾಗ ಉದ್ಯಾನದಲ್ಲಿ ಯೇಸುಕ್ರಿಸ್ತನ ಜೀವನ ಚರಿತ್ರೆ ಸಾರುವ ಹಲವು ಗೊಂಬೆಗಳನ್ನೊಳಗೊಂಡ ಗುಡಿಸಲು ಮನೆ(ಗೋದಲಿ) ಸ್ಥಾಪಿಸಲಾಗಿದೆ. ಅದರಲ್ಲಿ ಬಾಲ ಏಸು, ಕುರಿಗಳ ಜತೆ ಕ್ರಿಸ್ತ, ಶಿಲುಬೆಗೆ ಏರಿಸಿರುವ ಗೊಂಬೆಗಳನ್ನು ಸ್ಥಾಪಿಸಲಾಗಿದೆ.

ಚರ್ಚ್​ನ ಬಲಬದಿ ಸಾಂತಾ ಕ್ಲಾಸ್​, ಸ್ವಾಗತ ಗೊಂಬೆಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಭಾನುವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಸಹಸ್ರಾರು ಮಂದಿ ಸಂಜೆ ಕ್ಯಾಂಡಲ್​ ಹಚ್ಚಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಕೆಜಿಎಫ್​ನಲ್ಲಿ 250ಕ್ಕೂ ಹೆಚ್ಚು ಚರ್ಚ್​ಗಳಿದ್ದು ಕ್ರಿಸ್​ಮಸ್​ ಆಚರಣೆಗೆ ಭರ್ಜರಿ ತಯಾರಿ ನಡೆದಿದೆ. ಮಾಲೂರು, ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾಸಪುರ ತಾಲೂಕಿನಲ್ಲಿ ಸಹ ಚರ್ಚ್​ಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಕ್ರಿಸ್ತ ಆರಾಧನೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಎಲ್ಲೆಡೆ ಕ್ರಿಶ್ಚಿಯನ್ನರು ಮನೆಗಳನ್ನು ಸ್ವಚ್ಛಗೊಳಿಸಿ, ವಿದ್ಯುತ್​ ದೀಪಗಳು, ಬಣ್ಣ ಬಣ್ಣದ ಕಾಗದಗಳಿಂದ ಸಿಂಗರಿಸಿದ್ದಾರೆ. ಹೊಸಬಟ್ಟೆ ತೊಟ್ಟು ಚರ್ಚ್​ಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಕಾತುರರಾಗಿದ್ದಾರೆ. ಕೋಲಾರದ ಮೆಕ್ಕೆ ವೃತ್ತದ ಸೇಂಟ್​ ಮೇರಿಸ್​ ಚರ್ಚ್​ನಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕರೊನಾ ಮತ್ತೆ ದೇಶಕ್ಕೆ ಕಾಲಿಡದಿರಲಿ, ಸಮಸ್ತ ಜನರಿಗೆ ಭಗವಂತ ಒಳಿತು ಮಾಡಲಿ. ಎಲ್ಲೆಡೆ ಶಾಂತಿ ನೆಲೆಸಿ ರೈತ, ಸಮಸ್ತ ಜನರು ಸುಭಿಕ್ಷವಾಗಿರಲೆಂದು ಕ್ರಿಸ್ತನಲ್ಲಿ ಪ್ರಾರ್ಥಿಸುತ್ತೇವೆ. | ಪಿ.ಶಾಂತಕುಮಾರ್​ ಮೆಥೋಡಿಸ್ಟ್​ ಚರ್ಚ್​ ಮೇಲ್ವಿಚಾರಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net