ನೈತಿಕ ಬಾಳ್ವೆ ನಡೆಸಲು ಪ್ರೇರಣೆ ನೀಡುವ ಕ್ರಿಸ್​ಮಸ್...

sdfsdfsfsdf
Published on
|ರೆವರೆಂಡ್ ಫಾದರ್ ವಿಜಯಕುಮಾರ್ ಕಾರ್ಯದರ್ಶಿ, ಮೈಸೂರು ಧರ್ಮಪ್ರಾಂತ್ಯ ಶಿಕ್ಷಣ ಸಂಸ್ಥೆಗಳು

ಸಕಲ ಸೃಷ್ಟಿಯ ಒಡೆಯರಾದ ದೇವರು, ಆದಿಯಲ್ಲಿ ಭೂಮಂಡಲ ನಿರಾಕಾರವಾಗಿ, ಬರಿದಾಗಿ ಮತ್ತು ಜಲಾಂಧಕಾರಮಯವಾಗಿ ಇದ್ದುದ್ದನ್ನು ಕಂಡು, ಈ ಸುಂದರ ಜಗತ್ತನ್ನು ಮತ್ತು ಅದರಲ್ಲಿರುವ ಸಕಲ ಜೀವಿಗಳನ್ನು ಕೇವಲ 6 ದಿನಗಳಲ್ಲಿ ಸೃಷ್ಟಿಸಿದರು. ಪೃಥ್ವಿಯಲ್ಲಿ ಏನೋ ರಚನೆಯ ಕೊರತೆಯೆನಿಸಿದಾಗ ತಮ್ಮದೇ ರಚನೆಯಲ್ಲಿ ಮಾನವನನ್ನು ಸೃಷ್ಟಿಸಿ, ಬುದ್ಧಿ, ಜಾಣ್ಮೆಯನ್ನು ನೀಡಿ ಸೃಷ್ಟಿಯ ಹೊಣೆಗಾರಿಕೆ ನೀಡಿದರು. ಮಾನವನಿಗೆ ಪ್ರೀತಿ ಧಾರೆಯೆರೆದರು.

ಸರ್ವೆಶ್ವರನನ್ನು ಮರೆತ ಮಾನವರು ಸ್ವಾರ್ಥಕ್ಕಾಗಿ ದೇವರಿಗೆ ಅವಿಧೇಯರಾಗಿ ನಡೆದು ಪಾಪವನ್ನು ಮಾಡಿ ದೇವರಿಗೆ ವಿಮುಖರಾದರು. ಕರುಣಾಮಯಿಯಾದ ದೇವರು ಅವರ ತಪ್ಪನ್ನು ತಿದ್ದಿ ಮತ್ತೆ ಹರಸಿದರು. ಅಬ್ರಹಾಮನ ಮುಖಾಂತರ ಉದ್ಭವಿಸಿದ ಸಂತತಿಯನ್ನು ಹರಸಿದ ಸರ್ವೆಶ್ವರನು ತಮ್ಮ ಪ್ರೀತಿಯ ಜನಾಂಗವನ್ನಾಗಿ ಆರಿಸಿಕೊಂಡರು. ತಮ್ಮನ್ನು ಆರಿಸಿ, ಪ್ರೀತಿಸಿ ಹಾಗೂ ಆಶೀರ್ವದಿಸಿದ ದೇವರನ್ನು ಮರೆತ ಈ ಜನಾಂಗ ಪಾಪಮಾರ್ಗದಲ್ಲಿ ನಡೆದಾಗ ಅವರ ಪಾಪ ವಿಮುಕ್ತಿಗೊಳಿಸಲು ದೇವರು ಯೋಜನೆ ರೂಪಿಸಿದರು. ಆ ಯೋಜನೆಯೇ ಸರ್ವೆಶ್ವರನ ಏಕಮಾತ್ರ ಪುತ್ರನನ್ನು ಧಾರೆಯೆರೆಯುವುದಾಗಿತ್ತು. ಇದನ್ನು ದೇವರು ಅನೇಕ ಪ್ರವಾದಿಗಳ ಮುಖಾಂತರ ಜನರಿಗೆ ತಿಳಿಸುತ್ತ ಬಂದರು. ಇದಕ್ಕೆ ಸಾಕ್ಷ್ಯವೆಂಬಂತೆ ಪ್ರವಾದಿ ಯೆಶಾಯನು ಈ ರೀತಿ ನುಡಿದಿದ್ದಾನೆ.

ಇಗೋ ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು (ಯೆಶಾಯ 7:14) (ಇಮ್ಮಾನುವೇಲ್ ಎಂದರೆ ದೇವರು ನಮ್ಮೊಡನೆ ಇದ್ದಾರೆ ಎಂದರ್ಥ)

ಅಬ್ಬಾ!.. ಕನ್ಯೆಯೊಬ್ಬಳು ಗರ್ಭಧರಿಸಿ ಮಗುವಿಗೆ ಜನ್ಮನೀಡಲು ಸಾಧ್ಯವೇ ಎಂದು ಅವಲೋಕಿಸಿದಾಗ ನಮಗೆ ದೊರಕುವ ಉತ್ತರ ಮಾನವನಿಗೆ ಅಸಾಧ್ಯವಾದುದು ದೇವರಿಂದ ಸಾಧ್ಯ. ಹೀಗೆ ದೇವರು ತಮ್ಮ ಮಗನ ಜನನಕ್ಕಾಗಿ ಆರಿಸಿಕೊಂಡ ಪರಿಶುದ್ಧ ಕನ್ಯೆಯೇ ಪೂಜ್ಯ ಮರಿಯಳು. ಮರಿಯಳಿಗೂ ಹಾಗೂ ಜೋಸೆಫ್ ಎಂಬುವವನಿಗೂ ನಿಶ್ಚಿತಾರ್ಥವಾಗಿತ್ತು. ಹೀಗಿರಲಾಗಿ ಒಂದು ದಿನ ಮರಿಯಳನ್ನು ಆರಿಸಿಕೊಂಡ ಸರ್ವೆಶ್ವರನು ಗಾಬ್ರಿಯೇಲ್ ದೂತನ ಮುಖಾಂತರವಾಗಿ ಈ ವಿಚಾರವನ್ನು ಆಕೆಗೆ ತಿಳಿಸಲು ಇಚ್ಛಿಸಿದರು. ಸರ್ವೆಶ್ವರನ ಅಪ್ಪಣೆಯಂತೆ ದೂತನು ಮರಿಯಳ ಬಳಿಗೆ ಬಂದು, ‘ದೈವಾನುಗ್ರಹಭರಿತಳೇ ನಿನಗೆ ಶುಭವಾಗಲಿ, ಸರ್ವೆಶ್ವರ ನಿನ್ನೊಡನೆ ಇದ್ದಾರೆ’ ಎಂದನು. ಇದನ್ನು ಕೇಳಿದ ಮರಿಯಳು ಗಾಬರಿಗೊಂಡು ಇದೆಂಥ ಶುಭಾಶಯ ಎಂದು ಯೋಚಿಸಿದಳು. ಆಗ ದೂತನು, ‘ಮರಿಯಾ ನೀನು ಅಂಜಬೇಕಾಗಿಲ್ಲ. ದೇವರ ಅನುಗ್ರಹ ನಿನಗೆ ಲಭಿಸಿದೆ. ಇಗೋ ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ಯೇಸು ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು’ ಎಂದನು. ಅದಕ್ಕೆ ಮರಿಯಳು, ‘ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲ?’ ಎಂದಳು. ಪ್ರತ್ಯುತ್ತರವಾಗಿ ದೂತನು, ‘ಪವಿತ್ರಾತ್ಮರು ನಿನ್ನ ಮೇಲೆ ಬರುವರು. ಪರಾತ್ಪರ ದೇವರಶಕ್ತಿ ನಿನ್ನನ್ನು ಆವರಿಸುವುದು. ಈ ಕಾರಣದಿಂದ ನಿನ್ನ ಉದರದಲ್ಲಿ ಹುಟ್ಟುವ ಆ ಪವಿತ್ರ ಶಿಶು ದೇವರಪುತ್ರ ಎನಿಸಿಕೊಳ್ಳುವನು’ ಎಂದನು. ಅದಕ್ಕೆ ಮರಿಯಳು, ‘ಇಗೋ ನಾನು ದೇವರದಾಸಿ, ನೀವು ಹೇಳಿದಂತೆ ನನಗಾಗಲಿ’ ಎಂದಳು. ಹೀಗೆ ಮರಿಯಳು ಪವಿತ್ರಾತ್ಮರ ಪ್ರಭಾವದಿಂದ ಗರ್ಭವತಿಯಾದಳು. ಇದಾದ ಕೆಲವು ದಿನಗಳ ನಂತರ ಮರಿಯಳು ತನ್ನ ಸಂಬಂಧಿಕಳಾದ ಜುದೇಯದ ಗುಡ್ಡಗಾಡಿನಲ್ಲಿ ನೆಲೆಸಿದ್ದ, ಮುಪ್ಪಿನಲ್ಲೂ ಗರ್ಭವತಿಯಾಗಿದ್ದ ಎಲಿಜಬೇತಳ ಮನೆಗೆ ತೆರಳಿ ಆಕೆಗೆ ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು. ಎಲಿಜಬೇತಳೂ ಪವಿತ್ರಾತ್ಮಭರಿತಳಾಗಿ, ಹಷೋದ್ಗಾರದಿಂದ ಹರಿಸಿ, ದೇವರಿಂದ ಬಂದ ವಾರ್ತೆ ನೆರವೇರುವುದೆಂದಳು. ಇದಾದ ನಂತರ ಮರಿಯಳು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.

ಈ ಮುನ್ನವೇ ಮರಿಯಳ ಜೊತೆ ನಿಶ್ಚಿತಾರ್ಥವಾಗಿದ್ದ ನೀತಿವಂತನಾದ ಜೋಸೆಫನು ಮರಿಯಳು ಗರ್ಭ ಧರಿಸಿರುವುದನ್ನು ತಿಳಿದು ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥ ಮುರಿಯಲು ಯೋಚಿಸಿದ. ಆತನು ಈ ರೀತಿ ಆಲೋಚಿಸುತ್ತಿದ್ದಂತೆ ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು ‘ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ, ಆಕೆ ಒಬ್ಬ ಮಗನನ್ನು ಹೆರುವಳು. ಆ ಪವಿತ್ರ ಮಗುವೇ ಜಗತ್ತಿನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರ ಮಾಡುವನು’ ಎಂದನು. ಆಗ ಜೋಸೆಫನು ಎಚ್ಚೆತ್ತು ಸರ್ವೆಶ್ವರನ ಅಪ್ಪಣೆಯಂತೆ ಮರಿಯಳನ್ನು ವಿವಾಹವಾದನು.

ಆ ಕಾಲದಲ್ಲಿ ಚಕ್ರವರ್ತಿ ಔಗುಸ್ತನು ಸಾಮ್ರಾಜ್ಯದಲ್ಲೆಲ್ಲ ಜನಗಣತಿಯಾಗಬೇಕೆಂದು ಅಪ್ಪಣೆ ಮಾಡಿದ. ಆಗ ಎಲ್ಲರೂ ಹೆಸರನ್ನು ದಾಖಲೆ ಮಾಡಿಸಿಕೊಳ್ಳಲು ಊರುಗಳಿಗೆ ಹೊರಟರು. ಹಾಗಾಗಿ, ಜೋಸೆಫ್ ಕೂಡ ಗಲಿಲೇಯ ಪ್ರಾಂತ್ಯದ ನಜರೇತ್​ನಿಂದ ಹೊರಟು ಜುದೇಯ ನಾಡಿನ ಬೆತ್ಲೆಹೇಂಗೆ ತಲುಪಿದ. ಆತನ ಸಂಗಡ ಪೂರ್ಣ ಗರ್ಭವತಿಯಾಗಿದ್ದ ಮರಿಯಳೂ ಹೋದಳು. ಹೀಗೆ ಅವರು ಬೆತ್ಲೆಹೇಂನಲ್ಲಿದ್ದಾಗ ಮರಿಯಳಿಗೆ ಪ್ರಸವಕಾಲ ಸಮೀಪಿಸಿತು. ಅವರಿಗೆ ಅಲ್ಲಿನ ಛತ್ರದಲ್ಲಿ ಸ್ಥಳ ಸಿಗದ ಕಾರಣ ದನದ ಕೊಟ್ಟಿಗೆಯಲ್ಲಿ ಮರಿಯಳು ಚೊಚ್ಚಲ ಮಗುವಿಗೆ ಜನ್ಮವಿತ್ತು, ಇದ್ದ ಬಟ್ಟೆಯಲ್ಲೇ ಸುತ್ತಿ ಗೋದಲಿಯಲ್ಲಿ ಮಲಗಿಸಿದಳು.

ಯೇಸುಸ್ವಾಮಿ ಜನಿಸಿದ್ದು ಹೆರೋದರಸನ ಕಾಲದಲ್ಲಿ; ಲೋಕೋದ್ಧಾರಕ ಜನಿಸಿದ ವಿಷಯ ತಿಳಿದ ಕೆಲವು ಜ್ಯೋತಿಷಿಗಳು ಪವಿತ್ರ ಶಿಶುವನ್ನು ನೋಡಲು ಪೂರ್ವ ದಿಕ್ಕಿನಲ್ಲಿ ಉದಯಿಸಿದ ನಕ್ಷತ್ರದ ಹಾದಿ ಹಿಡಿದು ಜೆರುಸಲೇಮಿಗೆ ಬಂದು ಹೆರೋದರಸನನ್ನು ವಿಚಾರಿಸಿದರು. ಇದನ್ನು ಕೇಳಿದ್ದೇ ತಡ ತನಗೆ ಪ್ರತಿಸ್ಪರ್ಧಿಯೊಬ್ಬ ಜನಿಸಿದ್ದಾನೆಂದು ತಿಳಿದು ಹೆರೋದ ತಳಮಳಗೊಂಡ. ನಂತರ ಜ್ಯೋತಿಷಿಗಳಿಂದ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸ್ಪಷ್ಟವಾಗಿ ತಿಳಿದುಕೊಂಡ. ಆನಂತರ ಅವರನ್ನು ಬೆತ್ಲೆಹೇಮಿಗೆ ಕಳುಹಿಸಿಕೊಡುತ್ತ, ‘ನೀವು ಹೋಗಿ ಮಗುವನ್ನು ಚೆನ್ನಾಗಿ ಹುಡುಕಿ, ಕಂಡಕೂಡಲೇ ನನಗೂ ತಿಳಿಸಿ, ನಾನೂ ಹೋಗಿ ಆ ಮಗುವನ್ನು ಆರಾಧಿಸಬೇಕು’ ಎಂದ. ಜ್ಯೋತಿಷಿಗಳು ಅರಸನ ಮಾತಿಗೆ ತಲೆಬಾಗಿ ಹೊರಟಾಗ ಪೂರ್ವ ದಿಕ್ಕಿನಲ್ಲಿ ಕಾಣಿಸಿಕೊಂಡ ನಕ್ಷತ್ರ ಪುನಃ ಅವರಿಗೆ ಕಾಣಿಸಿತು. ಅವರು ಪರಮಾನಂದಭರಿತರಾಗಿ ಆ ನಕ್ಷತ್ರವನ್ನು ಹಿಂಬಾಲಿಸಿದರು. ಆ ನಕ್ಷತ್ರ ಅವರ ಮುಂದೆ ಮುಂದೆ ಸಾಗುತ್ತ ಮಗು ಇದ್ದ ಸ್ಥಳದಲ್ಲಿ ಬಂದು ನಿಂತುಬಿಟ್ಟಿತು. ಜ್ಯೋತಿಷಿಗಳು ಆ ಮನೆಯನ್ನು ಪ್ರವೇಶಿಸಿ ಮಗುವನ್ನು, ತಾಯಿ ಮರಿಯಳ ಬಳಿ ಕಂಡು ಆನಂದಭರಿತರಾಗಿ ಸಾಷ್ಟಾಂಗವೆರಗಿ ಆರಾಧಿಸುತ್ತ ತಾವು ತಂದ ಚಿನ್ನ, ಪರಿಮಳದ್ರವ್ಯಗಳನ್ನು ಮಗುವಿಗೆ ಪಾದಕಾಣಿಕೆಯಾಗಿ ಸಮರ್ಪಿಸಿದರು. ಹೆರೋದನ ಬಳಿಗೆ ಹಿಂದಿರುಗಬಾರದೆಂದು ದೈವಾಜ್ಞೆಯಾದ್ದರಿಂದ, ಅವರು ಬೇರೆ ಮಾರ್ಗವಾಗಿ ತಮ್ಮ ದೇಶಕ್ಕೆ ತೆರಳಿದರು. ಜ್ಯೋತಿಷಿಗಳಿಂದ ಯಾವುದೇ ಮಾಹಿತಿ ಬಾರದ್ದನ್ನು ಮನಗಂಡ ಹೆರೋದ ಕೋಪಗೊಂಡು ಹೇಗಾದರೂ ಮಗುವನ್ನು ಕೊಲ್ಲಲೇಬೇಕೆಂದು ಹವಣಿಸುತ್ತಿದ್ದ.

ಇತ್ತ ದೇವದೂತನು ಜೋಸೆಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, ‘ಏಳು, ಹೆರೋದನು ಮಗುವನ್ನು ಕೊಂದು ಹಾಕಲು ಹವಣಿಸುತ್ತಿದ್ದಾನೆ. ಮಗುವನ್ನೂ, ತಾಯಿಯನ್ನೂ ಕರೆದುಕೊಂಡು ಈಜಿಪ್ಟ್ ದೇಶಕ್ಕೆ ಹೋಗು, ನಾನು ಮತ್ತೆ ತಿಳಿಸುವ ತನಕ ಅಲ್ಲೇ ನೆಲೆಸಿರು’ ಎಂದ. ಅದರಂತೆ ಜೋಸೆಫನು ಕೂಡಲೇ ಎದ್ದು ರಾತ್ರೋರಾತ್ರಿಯಲ್ಲೇ ಈಜಿಪ್ಟಿಗೆ ತೆರಳಿದ.

ಮತ್ತೊಂದೆಡೆ, ಹೆರೋದನು ಬೆತ್ಲೆಹೇಮಿಗೂ ಹಾಗೂ ಅದರ ಸುತ್ತಮುತ್ತಲಿನ ಊರುಗಳಿಗೂ ತನ್ನ ಆಳುಗಳನ್ನು ಕಳುಹಿಸಿದ. ತಾನು ಜ್ಯೋತಿಷಿಗಳಿಂದ ತಿಳಿದುಕೊಂಡಿದ್ದ ಕಾಲದ ಆಧಾರದ ಮೇಲೆ ಅಲ್ಲಿದ್ದ, ಎರಡು ವರ್ಷಗಳಿಗೆ ಮೀರದ ಎಲ್ಲ ಗಂಡುಮಕ್ಕಳನ್ನು ಕೊಂದುಹಾಕಿಸಿದ. ಕೆಲವು ದಿನಗಳ ಬಳಿಕ ದೇವದೂತನು ಈಜಿಪ್ಟಿನಲ್ಲಿ ನೆಲೆಸಿದ್ದ ಜೋಸೆಫನಿಗೆ ಹೆರೋದನು ಮರಣ ಹೊಂದಿದ ವಿಚಾರವನ್ನು ತಿಳಿಸಿ ಪುನಃ ನಜರೇತಿಗೆ ಹಿಂದಿರುಗಲು ಹೇಳಿದ. ದೇವದೂತನ ಆದೇಶದಂತೆ ಜೋಸೆಫನು ನಜರೇತ್ ಪ್ರಾಂತ್ಯದಲ್ಲಿ ವಾಸಮಾಡಿದ.

ಕ್ರಿಸ್ತ ಜನನದ ಸಂದೇಶ: ಕ್ರಿಸ್ತ ನಮ್ಮ ಮಧ್ಯೆ, ನಮ್ಮೊಳಗೇ ಇದ್ದಾರೆ. ಪ್ರಭು ಯೇಸು ಕಲಿಸಿಕೊಟ್ಟ ನ್ಯಾಯ, ಪ್ರೀತಿ, ಸತ್ಯದ ಹಾದಿಯಲ್ಲಿ ನಡೆದು, ಒಳ್ಳೆಯತನವನ್ನು ಮೈಗೂಡಿಸಿಕೊಂಡು, ಇತರರನ್ನು ಪ್ರೀತಿಯಿಂದ ಗೌರವಿಸಿ, ಅನ್ಯೋನ್ಯತೆಯಿಂದ ಬಾಳಬೇಕು. ಕ್ರಿಸ್ಮಸ್ ಅನುಭಾವ ಮತ್ತು ಅನುಭವದ ಅವಿನಾಭಾವವೆಂದರೆ ದೇವರು ಮತ್ತು ಮಾನವರ ಸಹಮಿಲನ, ಪ್ರಭು ಕ್ರಿಸ್ತರ ಪ್ರೇರೇಪಣೆಯಲ್ಲಿ ಬದುಕುವವರೆಲ್ಲರಿಗೂ ಅದೊಂದು ರೋಮಾಂಚನ. ಮಾನವನನ್ನು ಅತಿಯಾಗಿ ಪ್ರೀತಿಸಲು ಬಂದ ಕ್ರಿಸ್ತನ ಜನನವನ್ನು ಕಂಡು ಅಂದು ಸೃಷ್ಟಿಯೆಲ್ಲವೂ ತನ್ನ ಸೃಷ್ಟಿಕರ್ತನ ಜನನವನ್ನು ಸಾರಿತ್ತು. ಅಂತೆಯೇ, ಇಂದು ಪ್ರಭುಕ್ರಿಸ್ತರ ಜನನವನ್ನು ಸಂಭ್ರಮದಿಂದ ಕೊಂಡಾಡುತ್ತಿರುವ ನಾವು ಕ್ರಿಸ್ತರ ಮೌಲ್ಯಗಳನ್ನು ಅರಿತು, ನೈತಿಕ ಬಾಳುವೆಯನ್ನು ನಡೆಸಬೇಕೆಂಬುದೇ ಕ್ರಿಸ್ತ ಜನನದ ಸಂದೇಶ.

ದ್ವೇಷಿಸದಿರಲು ಕಲಿಸಿದರು: ಕನ್ಯಾ ಮರಿಯಮ್ಮನವರ ಮೂಲಕ ದೇವಪುತ್ರ ಯೇಸುಕ್ರಿಸ್ತರ ಜನನವೇ ಕ್ರಿಸ್​ವುಸ್. ಆ ಪವಿತ್ರ ರಾತ್ರಿಯಂದು ಕುರುಬರಿಗೆ ದೇವದೂತನು ಹೀಗೆಂದನು, ‘ಇಗೋ ಜನರೆಲ್ಲರಿಗೂ ಪರಮಾನಂದ ತರುವ ಶುಭ ಸಂದೇಶವನ್ನು ನಿಮಗೆ ತಿಳಿಸುತ್ತೇನೆ’. ಇದನ್ನು ಕೇಳಿ ನಿಜವಾಗಿಯೂ ಮಾನವ ರೂಪದಲ್ಲಿರುವ ದೇವರನ್ನು ಕಂಡು ಅನೇಕರು ಅನುಭವ ಹೊಂದಿದರು ಹಾಗೂ ಸಂತೋಷಪಟ್ಟರು. ‘ಜೀಸಸ್’ ಅಥವಾ ‘ಯೇಸು’ ಎಂದರೆ, ‘ದೇವರು ರಕ್ಷಕರು’ ಎಂದು ಅರ್ಥ. ಯೇಸು ನಮ್ಮನ್ನು ಪಾಪ ಮತ್ತು ಮರಣದಿಂದ; ದ್ವೇಷ ಮತ್ತು ಹಿಂಸಾತ್ಮಕ ಮನೋಭಾವದಿಂದ ರಕ್ಷಿಸುತ್ತಾರೆ. ಯೇಸು ತನ್ನ ಜೀವನದ ಆದರ್ಶದ ಮೂಲಕ ಇತರರ ವಿಚಾರದಲ್ಲಿ ಕಾಳಜಿ ವಹಿಸಲು ಮತ್ತು ಹಂಚಿ ಬಾಳಲು, ವಿರೋಧಿಗಳನ್ನು ಕ್ಷಮಿಸಲು, ಎಂದಿಗೂ ಯಾರನ್ನೂ ದ್ವೇಷಿಸದಿರಲು ಕಲಿಸುತ್ತಾರೆ. ಸ್ವಚ್ಛ ಭಾರತ ನಿರ್ವಣಕ್ಕಾಗಿ ‘ಗ್ರೋ ಗ್ರೀನ್’ ವಿಚಾರವಾಗಿ ನಾವೀಗ ಮಾತನಾಡುತ್ತೇವೆ. ದ್ವೇಷ ಮತ್ತು ಉದಾಸೀನತೆ ಇಲ್ಲದ, ಸ್ವಚ್ಛ ಮನಸ್ಸು ಮತ್ತು ಶುದ್ಧ ಹೃದಯವನ್ನು ನಾವು ನಮ್ಮಲ್ಲಿ ಬೆಳೆಸಲು ಸಾಧ್ಯವೇ? ಈ ಕ್ರಿಸ್​ವುಸ್ ನಮಗೆಲ್ಲರಿಗೂ ಶುದ್ಧ ಹೃದಯವನ್ನು ಬೆಳೆಸಲು ಪಂಥಾಹ್ವಾನವಾಗಲಿ. ಆ ಮೂಲಕ ನಾವು ನಮ್ಮ ನೆರೆಕರೆಯವರಲ್ಲಿ ಮತ್ತು ಪ್ರಕೃತಿಯಲ್ಲಿ ದೇವರನ್ನು ಕಾಣಲು ಸಾಧ್ಯವಾಗಲಿ. ಎಲ್ಲರಿಗೂ ಕ್ರಿಸ್​ವುಸ್ ಹಾಗೂ ಹೊಸ ವರ್ಷದ ಶುಭಾಶಯಗಳು.
|ಡಾ.ಪೀಟರ್ ಪಾವ್ಲ್ ಸಲ್ಡಾನ್ಹ ಧರ್ಮಾಧ್ಯಕ್ಷರು, ಮಂಗಳೂರು ಕ್ರೖೆಸ್ತ ಧರ್ಮಪ್ರಾಂತ್ಯ
ಪ್ರೀತಿ ಉದಯಿಸಲಿ: ಕರೊನಾ ಎಂಬ ಚಂಡಮಾರುತದ ನಂತರ ಸ್ವಾಗತಾರ್ಹ ತಂಗಾಳಿಯಾಗಿ ಪ್ರಸ್ತುತ ವರ್ಷದ ಕ್ರಿಸ್ತಜಯಂತಿ ಹಬ್ಬವು ಬಂದಿದೆ. ಇಮ್ಯಾನುಯೆಲ್- ದೇವರು ನಮ್ಮೊಂದಿಗೆ ಇದ್ದಾರೆ ಎಂಬ ಸತ್ಯವನ್ನು ಸಾಬೀತುಪಡಿಸುವುದೇ ಈ ಹಬ್ಬದ ಮೂಲ ಉದ್ದೇಶವಾಗಿದೆ. ನಮ್ಮ ಮಾನವ ತಿಳಿವಳಿಕೆಗೆ, ಪ್ರಸ್ತುತ ಪರಿಸ್ಥಿತಿಯು ದೇವರು ನಮ್ಮಿಂದ ದೂರವಿರುವಂತೆ ತೋರುತ್ತದೆ. ಆದರೆ ದೇವರ ದೃಷ್ಟಿಯಲ್ಲಿ, ಜಗತ್ತಿನಲ್ಲಿ ನಡೆಯುವ ಪ್ರತಿಯೊಂದಕ್ಕೂ ಉದ್ದೇಶ ಮತ್ತು ಅರ್ಥವಿದೆ. ಇಂತಹ ಮಹಾಮಾರಿಯ ಭಯದ ವಾತಾವರಣದಲ್ಲಿಯೂ ದೇವರು ನಮ್ಮೊಂದಿಗಿದ್ದಾರೆ. ಕ್ರಿಸ್ತ ಜಯಂತಿಯು ದುಃಖಪೀಡಿತ ಮನುಕುಲದ ರಕ್ಷಣೆಗಾಗಿ, ಅತೀಂದ್ರಿಯ ದೇವರು ಮಾನವನಾಗುವ ಹಾಗೂ ಶಾಂತಿ ಮತ್ತು ನೆಮ್ಮದಿಯನ್ನು ತರುವ ಹಬ್ಬವಾಗಿದೆ. ದೇವರು ನಮ್ಮನ್ನು ಎಷ್ಟಾಗಿ ಪ್ರೀತಿಸಿದರೆಂದರೆ, ನಾವು ನಿತ್ಯಜೀವವನ್ನು ಪಡೆಯಲು, ತನ್ನ ಏಕೈಕ ಪುತ್ರನನ್ನೇ ಧಾರೆಯೆರೆದರು. ಮನುಕುಲವನ್ನು ರಕ್ಷಿಸಲು ಕ್ರಿಸ್ತ ತನ್ನ ಸ್ವಂತ ಜೀವನವನ್ನು ಅರ್ಪಿಸಿದರು. ಕ್ರಿಸ್ತನು ನಮ್ಮ ಹೃದಯದಲ್ಲಿ ಹುಟ್ಟಲಿ; ಈ ಕ್ರಿಸ್​ವುಸ್ ಪರಸ್ಪರರಲ್ಲಿ ಕ್ರಿಸ್ತನನ್ನು ಕಂಡುಕೊಳ್ಳುವ ಕಾಲವಾಗಲಿ. ಅಸೂಯೆ, ಅಹಂಕಾರ, ದ್ವೇಷ, ಸ್ವಾರ್ಥ ಬದಿಗಿಟ್ಟು, ಹೊಸ ಮತ್ತು ಉತ್ತಮ ಸಮಾಜಕ್ಕೆ ಅಡಿಪಾಯ ಹಾಕುವ ಸಂದರ್ಭ ಇದಾಗಿರಲಿ. ಸಾಂಕ್ರಾಮಿಕ ರೋಗವು ಕೊನೆಗೊಳ್ಳಲಿ ಮತ್ತು ಜನಜೀವನ ಶೀಘ್ರ ಸಹಜ ಸ್ಥಿತಿಗೆ ಹಿಂದಿರುಗಲಿ ಎಂದು ಆಶಿಸುತ್ತೇನೆ.
| ಡಾ. ಕೆ. ಎ. ವಿಲಿಯಂ ಧರ್ಮಾಧ್ಯಕ್ಷರು, ಮೈಸೂರು ಧರ್ಮಪ್ರಾಂತ್ಯ
ಮಾನವೀಯತೆ ಜೀವಂತಗೊಳಿಸುವ ಹಬ್ಬ: ಸ್ವರ್ಗ -ಭುವಿಗಳಿಗೆ ಮಹದಾನಂದವನ್ನು ತಂದ ಸುದಿನವೇ ಕ್ರಿಸ್​ವುಸ್. ದೇವಪುತ್ರ ಈ ಲೋಕದಲ್ಲಿ ಮುಗ್ಧ ಮಗುವಾಗಿ ಜನಿಸಿ, ಪಾಪವೊಂದನ್ನು ಬಿಟ್ಟು ಇನ್ನೆಲ್ಲದರಲ್ಲಿಯೂ ನಮ್ಮಂತೆಯೇ ಆಗಬಯಸಿದ ಯೇಸು ಬಡವರಿಗೆ ಆಶಾಕಿರಣವಾಗಿ, ದುಃಖಿತರಿಗೆ ಸಾಂತ್ವನವಾಗಿ, ದೀನ ದಲಿತರ ಸಂಗಾತಿಯಾಗಿ, ನೊಂದವರ ಭರವಸೆಯಾಗಿ, ಬಹಿಷ್ಕೃತರ ಗೆಳೆಯನಾಗಿ ಬಂದರು. ಕಳೆದೆರಡು ವರ್ಷಗಳಿಂದ ಇಡೀ ವಿಶ್ವ ಕರೊನಾ ಸೋಂಕಿನ ಅಟ್ಟಹಾಸಕ್ಕೆ ನಲುಗಿದೆ. ಬಸವಳಿದ ಈ ಲೋಕಕ್ಕೆ ಹೊಸ ಜೀವವನ್ನು ನೀಡುವ ಅಗತ್ಯವಿದೆ. ಕ್ರಿಸ್​ವುಸ್ ಹಬ್ಬದ ಆಚರಣೆ ನಮ್ಮಲ್ಲಿ ಮಾನವೀಯತೆಯನ್ನು ಜೀವಂತಗೊಳಿಸಬೇಕು. ಮನುಷ್ಯನಿಗೆ ಮಾನವೀಯತೆಯು ಮರೀಚಿಕೆಯಾಗದೆ ಸ್ವಾತಂತ್ರ್ಯ ಶಾಂತಿ, ಭಾವೈಕ್ಯತೆ, ಕ್ಷಮೆ, ಪ್ರೀತಿ, ಸಹನೆ, ಸಂಯಮ ಮತ್ತು ನೈತಿಕತೆ ಉಸಿರಾಗಿಸಬೇಕಿದೆ. ಕ್ರಿಸ್​ವುಸ್ ಉತ್ಸವವನ್ನು ಯೋಗ್ಯವಾಗಿ ಆಚರಿಸಲು ಶಕ್ತರಲ್ಲದ ಸಾವಿರಾರು ಜನರು ಮತ್ತು ಕುಟುಂಬಗಳು ನೆರೆಹೊರೆಯಲ್ಲಿವೆ. ನಮ್ಮಲ್ಲಿ ಇರುವ ಸಂಪನ್ಮೂಲಗಳನ್ನು ಇಲ್ಲದವರೊಡನೆ ಕಿಂಚಿತ್ತಾದರೂ ಹಂಚಿಕೊಂಡರೆ ಕ್ರಿಸ್​ವುಸ್​ನ ಮೂಲ ಅರ್ಥ ಸ್ಪಷ್ಟವಾಗಬಹುದು. ‘ಶಾಂತಿ ದೇವನೊಲಿದ ಮನುಜರಿಗೆ’ ಎಂಬ ದೇವದೂತರ ಹಾಡು ನಮಗೆ ಅರ್ಥಪೂರ್ಣವಾಗಿ ಕೇಳಿಸಲಿ. ಈ ಕ್ರಿಸ್​ವುಸ್ ನಮಗೆ ಸೋಂಕಿನ ಭೀತಿಯಿಂದ, ನಿರಾಸೆ -ದುಃಖಗಳಿಂದ ಬಿಡುಗಡೆಗೊಳಿಸಿ ಸ್ವರ್ಗದ ಶಾಂತಿ, ಪ್ರೀತಿಯಿಂದ ನಮ್ಮನ್ನು ತುಂಬಲಿ.
| ಜೆರಾಲ್ಡ್ ಐಸಾಕ್ ಲೋಬೊ ಧರ್ಮಾಧ್ಯಕ್ಷರು, ಉಡುಪಿ ಕ್ರೖೆಸ್ತ ಧರ್ಮಪ್ರಾಂತ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net