ಕರೊನಾ ಬಳಿಕ ಚಾಪರ್ ಕಾಟ - ಅಮೆರಿಕ ವಿಜ್ಞಾನಿಗಳ ಎಚ್ಚರಿಕೆ

viruses-bacteria-fungi
Published on

ವಾಷಿಂಗ್ಟನ್: ಬೊಲಿವಿಯಾದಲ್ಲಿ ಪತ್ತೆಯಾಗಿರುವ ಚಾಪರ್ ಹೆಮೊರಾಗಿಕ್ (ರಕ್ತಸ್ರಾವ) ಜ್ವರ ಎಂಬ ಅಪರೂಪದ ರೋಗಕ್ಕೆ ಕಾರಣವಾಗುವ ಮಾರಕ ವೈರಸ್ ತ್ವರಿತವಾಗಿ ಹರಡುವ ಸಾಧ್ಯತೆಯಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಎಚ್ಚರಿಸಿದೆ.

ಚಾಪರ್ ರೋಗ ಲಕ್ಷಣ ಜ್ವರ, ಹೊಟ್ಟೆ ನೋವು, ವಾಂತಿ, ಒಸಡಿನಲ್ಲಿ ರಕ್ತಸ್ರಾವ, ಚರ್ಮ ತುರಿಕೆ ಮತ್ತು ಕಣ್ಣಿನ ಹಿಂದೆ ನೋವು ಇವೇ ಮೊದಲಾದ ಲಕ್ಷಣ ಚಾಪರ್ ರೋಗಿಗಳಲ್ಲಿ ಕಂಡು ಬಂದಿತ್ತು. ಈ ವ್ಯಾಧಿಗೆ ಇನ್ನೂ ಯಾವುದೇ ಔಷಧ ಸಂಶೋಧನೆಯಾಗಿಲ್ಲ. ಅಭಿದಮನಿ ದ್ರವ ನೀಡಿಕೆಯಂಥ ಕೆಲವು ಆರೈಕೆ ಮೂಲಕ ಮಾತ್ರವೇ ರೋಗಿಗೆ ಚಿಕಿತ್ಸೆ ನೀಡಬಹುದಾಗಿದೆ.

ಇಡೀ ಜಗತ್ತು ಕರೊನಾ ಹೆಮ್ಮಾರಿಯಿಂದ ನಲುಗುತ್ತಿದ್ದು ಅದಕ್ಕೆ ಪರಿಣಾಮಕಾರಿ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳ ನಡುವೆಯೇ ಇನ್ನೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. ಚಾಪರ್ ವೈರಸ್ ವ್ಯಾಧಿ 2004ರಲ್ಲಿ ಒಮ್ಮೆ ಸಣ್ಣ ಪ್ರಮಾಣದಲ್ಲಿ ಕಂಡುಬಂದಿತ್ತು. ಬೊಲಿವಿಯಾದ ಲಾ ಪಾಜ್ ಸಮೀಪದ ಚಾಪರ್ ವಲಯದಲ್ಲಿ ಇದು ಕಾಣಿಸಿಕೊಂಡಿತ್ತು. ಹೀಗಾಗಿ ಅದಕ್ಕೆ ಚಾಪರ್ ವೈರಸ್ ಎಂದು ಹೆಸರಿಸಲಾಗಿದೆ. ಎಬೊಲಾದಂತೆ ಇದು ಕೂಡ ರಕ್ತಸ್ರಾವದಿಂದ ಕೂಡಿದ ಜ್ವರಕ್ಕೆ ಕಾರಣವಾಗುತ್ತದೆ.

ಇಲಿಗಳು ಚಾಪರ್ ವೈರಸ್​ನ ಮೂಲವಾಗಿರಬಹುದು. ಇಲಿಗಳಿಂದ ಮಾನವರಿಗೆ ಹರಡಿರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಸಾಮಾನ್ಯವಾಗಿ ದೇಹದ ದ್ರವಗಳಿಂದ ಹರಡುವ ಈ ವೈರಸ್ ನಿಯಂತ್ರಿಸುವುದು ಸುಲಭ. ಆದರೆ, ಕರೊನಾದಂತೆ ಉಸಿರಾಟದ ಮೂಲಕ ಹರಡುವ ವೈರಾಣನ್ನು ನಿಯಂತ್ರಿಸುವುದು ಕಷ್ಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net