ಚಿತ್ರದುರ್ಗದಲ್ಲಿ ಒಂದೇ ಕುಟುಂಬದ ಮೂವರು ಮಹಿಳೆಯರು ಅನುಮಾನಾಸ್ಪದ ಸಾವು

Three Woman
Published on

ಚಿತ್ರದುರ್ಗ: ಗೋಪನಹಳ್ಳಿ ಗ್ರಾಮದಲ್ಲಿ ಮೂವರು ಮಹಿಳೆಯರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ನಿವಾಸಿ ತಿಪ್ಪಜ್ಜಿ (75), ಪುತ್ರಿಯರಾದ ಮಾರಕ್ಕ (45) ಹಾಗೂ ದ್ಯಾಮಕ್ಕ (43) ಮೃತಪಟ್ಟವರು. ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಮೂವರು ಮಹಿಳೆಯರು ಮಾತ್ರ ಮನೆಯಲ್ಲಿದ್ದರು. ಬುಧವಾರ ರಾತ್ರಿ ಮಲಗಿದ್ದ ಇವರು ಗುರುವಾರ ಸಂಜೆಯಾದರೂ ಮನೆಯಿಂದ ಹೊರಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಿಟಕಿ ತೆರೆದು ನೋಡಿದಾಗ ಮಲಗಿದ ಸ್ಥಿತಿಯಲ್ಲಿ ಇರುವುದು ಗೊತ್ತಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಒಡೆದು ಪರಿಶೀಲಿಸಿದಾಗ ಮೂವರು ಮೃತಪಟ್ಟಿರುವುದು ಖಚಿತವಾಗಿದೆ. ತಿಪ್ಪಜ್ಜಿ ಪುತ್ರ ದ್ಯಾಮಣ್ಣ (47) ಅನಾರೋಗ್ಯ ಸಮಸ್ಯೆಯಿಂದ ಕೆಲ ತಿಂಗಳ ಹಿಂದಷ್ಟೇ ಮೃತಪಟ್ಟಿದ್ದರು. ಪತಿ ಕೆಂಚಪ್ಪ ಕೂಡ ವರ್ಷದ ಹಿಂದೆ ಕೊನೆಯುಸಿರೆಳೆದಿದ್ದರು. ಮಾರಕ್ಕ ಮತ್ತು ದ್ಯಾಮಕ್ಕ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡು ತವರು ಸೇರಿದ್ದರು. ಇದರಿಂದ ಇಡೀ ಕುಟುಂಬ ಮಾನಸಿಕ ಖಿನ್ನತೆಗೆ ಒಳಗಾಗಿತ್ತು. ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಚಳ್ಳಕೆರೆ ಠಾಣೆಯ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net