ರಾಷ್ಟ್ರಮಟ್ಟದ ಉನ್ನತ ಹುದ್ದೆಗೆ ಕನ್ನಡಿಗರ ಲಗ್ಗೆ

web
Published on

ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ: ಬಿಸಿಸಿಐ ಅಧ್ಯಕ್ಷರಾಗಿ ರೋಜರ್ ಭಿನ್ನಿ, ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ, ಬ್ರಿಟನ್ ದೇಶದ ಪ್ರಧಾನಿ ಆಗಿ ರಿಷಿ ಸುನ್ನಕ್ (ಕರ್ನಾಟಕದ ಅಳಿಯ) ಆಯ್ಕೆ ಬೆನ್ನೆಲ್ಲೇ, ಮತ್ತೊಬ್ಬ ಕನ್ನಡಿಗ ಐಎಪಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಗಂಗಸಮುದ್ರದ ಪ್ರೊ.ಜಿ.ವಿ.ಬಸವರಾಜ್, ಅತ್ಯಂತ ದಾಖಲೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ.

ಸಂಸ್ಥೆಯಲ್ಲಿ ಆಜೀವ ಸದಸ್ಯತ್ವ ಪಡೆದ ಮಕ್ಕಳ ತಜ್ಞ ವೈದ್ಯರು ಮತದಾನಕ್ಕೆ ಅರ್ಹರಾಗಿದ್ದು, ಈಚೆಗಷ್ಟೇ ಆನ್‌ಲೈನ್ ಮೂಲಕ ಚುನಾವಣಾ ನಡೆದು ಫಲಿತಾಂಶ ಹೊರ ಬಿದ್ದಿತ್ತು. ಐಎಪಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದವರ ಪೈಕಿ ಕರ್ನಾಟಕ ಪ್ರೊ.ಡಾ.ಜಿ.ವಿ.ಬಸವರಾಜ್ 13,318 ಮತ ಪಡೆದು ಭಾರಿ ಅಂತರದಲ್ಲಿ ಜಯಗಳಿಸಿದ್ದಾರೆ. ರಾಜ್ಯದಿಂದಲೂ ಅತಿ ಹೆಚ್ಚು ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತೆಲಂಗಾಣದ ಡಾ.ಹಿಮಾಬಿಂಧು ಸಿಂಗ್ 5,744, ಉತ್ತರ ಭಾರತದ ಡಾ.ಅಭಯ್ ಕಂಠಿಲಾಲ್ ಶಾ 2,986 ಮತವನ್ನು ಕ್ರಮವಾಗಿ ಪಡೆದು ಪರಾಭವಗೊಂಡಿದ್ದಾರೆ.

ಐಎಪಿ ಕೇಂದ್ರ ಕಚೇರಿಯೂ ಮುಂಬಯಿಯಲ್ಲಿದ್ದು, ದೇಶಾದ್ಯಾಂತ ಸಂಸ್ಥೆ ಇದೆ. 40 ಸಾವಿರ ಮತದಾರರನ್ನು ಒಳಗೊಂಡಿದೆ. ಈ ಹಿಂದೆ ರಾಜ್ಯದ ಬೆಂಗಳೂರಿನ ಡಾ.ಬೆಂಕಪ್ಪ, ಮಂಗಳೂರಿನ ಡಾ.ಸಂತೋಷ್ ಸೋವನ್ ಐಎಪಿಯ ಗೌರವಾನ್ವಿತ ಅಧ್ಯಕ್ಷ ಹುದ್ದೆ ಅಲಂಕರಿಸಿ ಕಾರ್ಯನಿರ್ವಹಿಸಿದ್ದರು.

ಪುನಃ ಅಧ್ಯಕ್ಷ ಸ್ಥಾನ ಕರ್ನಾಟಕದವರಿಗೆ ಲಭಿಸಿದೆ. ಅದು ಹೆಚ್ಚು ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಸಂಘದ ಇತಿಹಾಸದಲ್ಲಿಯೇ ಮೊದಲು ಎನ್ನಲಾಗಿದೆ. ಗಂಗಸಮುದ್ರ ಗ್ರಾಮದ ಜಿ.ಎಚ್.ವೀರಪ್ಪ, ಸಂಗಮ್ಮ ಪುತ್ರ ಬಸವರಾಜ್ ಅವರು, ಪ್ರಸ್ತುತ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಆಸ್ಪತ್ರೆಗೆ ರಾಜ್ಯದ ಹಲವು ಜಿಲ್ಲೆಗಳಿಂದ ವಿವಿಧ ನ್ಯೂನತೆಯಿಂದ ನರಳುವ ಮಕ್ಕಳನ್ನು ತಜ್ಞ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸು ಮಾಡುತ್ತಾರೆ. ಅ ಸಂದರ್ಭ ಅವರ ಕುರಿತು ಹೆಚ್ಚು ಕಾಳಜಿ ವಹಿಸುವ ಮೂಲಕ ವೃತ್ತಿಯ ಘನತೆ, ಗೌರವ ಕಾಪಾಡುತ್ತಿದ್ದಾರೆ. ಕರೊನಾ ಸಂದರ್ಭ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರಲಿದೆ, ಅದಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ಗಮನಸೆಳೆದಿದ್ದರು.

ಬಾಲ್ಯ, ಶಿಕ್ಷಣದ ಹಾದಿ: ಗಂಗಸಮುದ್ರದಲ್ಲಿ 1ರಿಂದ 6, ರಾಮಗಿರಿಯಲ್ಲಿ 6ರಿಂದ 10ನೇ ತರಗತಿ, ಚಿತ್ರದುರ್ಗ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ, ಬೆಂಗಳೂರಿನ ಬಿಎಂಸಿ ಕಾಲೇಜಿನಲ್ಲಿ ಎಂಬಿಬಿಎಸ್, ಜಯಪುರದ ಎಸ್‌ಎಂಸಿ ಕಾಲೇಜಿನಲ್ಲಿ ಎಂಡಿ, ದೆಹಲಿಯಲ್ಲಿ ಫೆಲೋಶಿಪ್ ಪದವಿ ಪಡೆದಿರುವ ಬಸವರಾಜ್, ಐಎಪಿ ಕಾರ್ಯದರ್ಶಿಯಾಗಿ 2020-21ರಲ್ಲಿ ಆಯ್ಕೆಯಾಗಿ ಕೆಲಸ ಮಾಡಿದ್ದಾರೆ. ಕನ್ನಡಿಗರು ಗಮನ ಸೆಳೆಯುವ ಮೂಲಕ ಕರುನಾಡಿನ ಕೀರ್ತಿಯನ್ನು ದೇಶದೆಲ್ಲೆಡೆ ಪಸರಿಸುವಂತೆ ಮಾಡುತ್ತಿದ್ದಾರೆ.

ಸುಸಜ್ಜಿತ ಮಕ್ಕಳ ಆಸ್ಪತ್ರೆಗೆ ಬೇಡಿಕೆ: ಹಿಂದುಳಿದ ಚಿತ್ರದುರ್ಗ ಜಿಲ್ಲೆಯಲ್ಲಿ ಒಂದೇ ಸೂರಿನಡಿ ಮಕ್ಕಳ ಎಲ್ಲ ರೋಗಗಳಿಗೂ ಚಿಕಿತ್ಸೆ ನೀಡಬಲ್ಲ 150 ಹಾಸಿಗೆ ಸಾಮರ್ಥ್ಯದ ಅತ್ಯಾಧುನಿಕ ಸುಸಜ್ಜಿತ ಮಕ್ಕಳ ಆಸ್ಪತ್ರೆ ನಿರ್ಮಿಸಬೇಕು. ರಾಜ್ಯದ ಯಾವ ಜಿಲ್ಲೆಯಲ್ಲಿ ಪ್ರತ್ಯೇಕ ಆಸ್ಪತ್ರೆ ಇಲ್ಲವೋ ಆ ಕಡೆಗಳಲ್ಲೂ ಸ್ಥಾಪಿಸಲು ಸರ್ಕಾರದ ಗಮನಸೆಳೆಯಬೇಕು ಎಂದು ಮಕ್ಕಳ ತಜ್ಞರು ಬಸವರಾಜ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದವರೇ ಆಯ್ಕೆ ಆಗಿರುವುದರಿಂದ ಮಕ್ಕಳ ಚಿಕಿತ್ಸೆ ಸಂಬಂಧ ತಾಲೂಕು, ಜಿಲ್ಲಾಮಟ್ಟದಲ್ಲಿ ಉಂಟಾಗುತ್ತಿರುವ ಸಮಸ್ಯೆ ಕುರಿತು ಬೆಳಕು ಚೆಲ್ಲಲ್ಲು ಸಹಕಾರಿಯಾಗಲಿದೆ. ಕೇಂದ್ರ ಸರ್ಕಾರದ ಸಹಕಾರ ಪಡೆದು ಮಕ್ಕಳಿಗೆ ಅನುಕೂಲ ಮಾಡಿಕೊಡುವ ವಿಶ್ವಾಸವಿದೆ. ಅವರ ಆಯ್ಕೆ ಜಿಲ್ಲೆ, ರಾಜ್ಯಕ್ಕೆ ಹೆಮ್ಮೆ ವಿಷಯ. ಡಾ.ದೇವರಾಜ್ ಮಕ್ಕಳ ತಜ್ಞ ಜಿಲ್ಲಾಸ್ಪತ್ರೆ, ಚಿತ್ರದುರ್ಗ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net