

ನವದೆಹಲಿ: ಬಿಹಾರದ ಲೋಕ ಜನಶಕ್ತಿ ಪಕ್ಷದ ಐವರು ಸಂಸದರು ಹಾಜಿಪುರ ಕ್ಷೇತ್ರದ ಸಂಸದ, ಕೇಂದ್ರದ ಮಾಜಿ ಸಚಿವ ದಿವಂಗತ ರಾಮ್ ವಿಲಾಸ್ ಪಾಸ್ವಾನ್ರ ಸೋದರ ಸಂಬಂಧಿ ಪಶುಪತಿನಾಥ ಕುಮಾರ್ ಪರಸ್ ಅವರನ್ನು ತಮ್ಮ ಪಕ್ಷದ ಸಂಸದೀಯ ನಾಯಕನನ್ನಾಗಿ ಆಯ್ಕೆ ಮಾಡುವ ಮೂಲಕ ಬಿಹಾರ ರಾಜಕಾರಣ ಹೊಸ ತಿರುವು ಪಡೆದುಕೊಂಡಿದೆ. ಬಿಜೆಪಿ ಮಿತ್ರನಂತಿದ್ದುಕೊಂಡೇ ಎನ್ಡಿಎ ಮಿತ್ರ ಪಕ್ಷ ಜೆಡಿಯು ಮುಖಂಡ ನಿತಿಶ್ ಕುಮಾರ್ ವಿರುದ್ಧ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಈಗ ಸ್ವಪಕ್ಷದ ಸಂಸದೀಯರಿಂದಲೇ ಮೂಲೆಗುಂಪಾಗಿದ್ದಾರೆ. ಚಿರಾಗ್ರನ್ನು ರಸಲು ಬಿಜೆಪಿ ಕೂಡ ಮುಂದಾಗಿಲ್ಲ.
ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಸಾಧ್ಯತೆ ಬೆನ್ನಲ್ಲೇ ಈ ಬೆಳವಣಿಗೆಗಳು ಸಂಭವಿಸಿದ್ದು, ಈ ಬಾರಿಯ ಸಂಪುಟ ಪುನಾರಚನೆಯಲ್ಲಿ ಜೆಡಿಯು ಮತ್ತು ಎಲ್ಜೆಪಿ ಎರಡೂ ಪಕ್ಷದ ಸಂಸದರಿಗೆ ಆದ್ಯತೆ ಸಿಗಲಿದೆ ಎನ್ನಲಾಗಿದೆ.
ಏತನ್ಮಧ್ಯೆ, ನಿತಿಶ್ ಕುಮಾರ್ರನ್ನು ವಿಕಾಸ್ ಪುರುಷ ಎಂದು ಬಣ್ಣಿಸಿರುವ ಪಶುಪತಿನಾಥ್ ಪರಸ್, ಬಿಹಾರದಲ್ಲೂ ಎನ್ಡಿಎ ಜತೆ ಕೈಜೋಡಿಸಲು ಸಜ್ಜಾಗಿದ್ದಾರೆ. "ನಾನು ಪಕ್ಷ$$$ವಿಭಜಿಸುವ ಕೆಲಸ ಮಾಡಿಲ್ಲ. ಬದಲಿಗೆ, ಪಕ್ಷ ಕಾಪಾಡಿದ್ದೇನೆ. ಕಳೆದ ಚುನಾವಣೆಯಿಂದ ಹಿಡಿದು ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಶೇ.99ರಷ್ಟು ಕಾರ್ಯಕರ್ತರಿಗೆ ಬೇಸರವಾಗಿದೆ' ಎಂದು ಪರಸ್ ಪ್ರತಿಕ್ರಿಯಿಸಿದ್ದಾರೆ. ರಾಜಕೀಯ ಪ್ರಬುದ್ಧತೆ ಇಲ್ಲದಿದ್ದರೂ, ನಿತೀಶ್ ವಿರುದ್ಧ ಬಂಡಾಯ ಸಾರಿದ್ದಕ್ಕೆ ಚಿರಾಗ್ ತಮ್ಮ ಸಂಬಂಧಿಯಿಂದಲೇ ಸರಿಯಾದ ಏಟನ್ನೇ ತಿಂದಿದ್ದಾರೆ ಎಂದು ಬಿಹಾರ ಬಿಜೆಪಿ ಮುಖಂಡರು ಮಾತನಾಡಿಕೊಳ್ಳುತ್ತಿದ್ದಾರೆ. 2020ರ ಬಿಹಾರ ಚುನಾವಣೆಗೆ ಮುನ್ನ ಎನ್ಡಿಎ ಮೈತ್ರಿ ತೊರೆದಿದ್ದ ಎಲ್ಜೆಪಿ, ನಂತರ ಪ್ರತ್ಯೇಕವಾಗಿ ಸ್ಪಧಿರ್ಸಿ, ಹೀನಾಯ ಸೋಲು ಕಂಡಿತ್ತು. ಆದರೆ, ಮತಗಳನ್ನು ವಿಭಜಿಸಿ ಜೆಡಿಯು ಸೀಟುಗಳನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿತ್ತು. ಇದು ನಿತೀಶ್ ಕೆಂಗಣ್ಣಿಗೆ ಗುರಿಯಾಗಿತ್ತು.
ಗುಜರಾತ್ ಚುನಾವಣೆಯಲ್ಲಿ ಆಪ್ ಸ್ಪರ್ಧೆ
ಗುಜರಾತ್ನ 2022ರ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಕೂಡ ಸ್ಪಧಿರ್ಸಲಿದೆ ಎಂದು ಪಕ್ಷದ ನಾಯಕ, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಸೂರತ್ ಪಾಲಿಕೆ ಚುನಾವಣೆಯಲ್ಲಿ 27 (ಒಟ್ಟು 120) ಸೀಟುಗಳನ್ನು ಗೆದ್ದ ಬಳಿಕ ಎರಡನೇ ಬಾರಿಗೆ ಗುಜರಾತ್ಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ನಾವು ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯಥಿರ್ಗಳನ್ನು ಹಾಕಲಿದ್ದೇವೆ. ಕಳೆದ 27 ವರ್ಷಗಳಿಂದ ಬಿಜೆಪಿ ಇಲ್ಲಿ ಆಡಳಿತ ನಡೆಸುತ್ತಿದ್ದು, ಇದನ್ನು ಆಮ್ ಆದ್ಮಿ ಪಕ್ಷ ತಡೆಯಲಿದೆ' ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಹುದ್ದೆ ನಮ್ಮದೇ
ರಾಜ್ಯದಲ್ಲಿ ಸಿಎಂ ಹುದ್ದೆ ಹಂಚಿಕೆ ಪ್ರಶ್ನೆಯೇ ಇಲ್ಲ. 5 ವರ್ಷವೂ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದಿರುವ ಅವರು, ಸಿಎಂ ಹುದ್ದೆಯನ್ನು ಮಿತ್ರಪಕ್ಷಗಳೊಂದಿಗೆ ಹಂಚಿಕೊಳ್ಳುವ ಪ್ರಶ್ನೆಯೇ ಇಲ್ಲ. ಎರಡೂವರೆ ವರ್ಷದ ಬಳಿಕ ಸಿಎಂ ಹುದ್ದೆಗಾಗಿ ಎನ್ಸಿಪಿ ಮುಖಂಡರು ಬೇಡಿಕೆ ಮುಂದಿರಿಸಲಿದ್ದಾರೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಈ ರೀತಿ ವಿವಾದವೆಬ್ಬಿಸಿ ಹೊಸ ರಾಜಕೀಯ ಸಮೀಕರಣ ಸೃಷ್ಟಿಸುವುದು ಬಿಜೆಪಿ ಉದ್ದೇಶ. ಆದರೆ ಇದೆಲ್ಲ ಸಾಧ್ಯವಿಲ್ಲ ಎಂದು ರಾವತ್ ಹೇಳಿದ್ದಾರೆ.
ಟಿಆರ್ಎಸ್ ಮುಖಂಡ ಬಿಜೆಪಿಗೆ
ತೆಲಂಗಾಣದ ಟಿಆರ್ಎಸ್ ಸರ್ಕಾರದ ಮಾಜಿ ಆರೋಗ್ಯ ಸಚಿವ ಈಟೆಲಾ ರಾಜೇಂದ್ರ ಕೇಂದ್ರ ಸಚಿವರಾದ ಧಮೇರ್ಂದ್ರ ಪ್ರಧಾನ್ ಮತ್ತು ಕಿಶನ್ ರೆಡ್ಡಿ ಸಮ್ಮುಖದಲ್ಲಿ ನವದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮೇದಕ್ ಜಿಲ್ಲೆಯಲ್ಲಿ ಭೂ ಅತಿಕ್ರಮ ಮಾಡಿದ ಆರೋಪದಡಿಯಲ್ಲಿ ರಾಜೇಂದ್ರರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಆದರೆ, ಆರೋಪವನ್ನು ರಾಜೇಂದ್ರ ತಳ್ಳಿ ಹಾಕಿದ್ದರು.
ಒಪಿಎಸ್ಗೆ ಹುದ್ದೆ
ಎಐಎಡಿಎಂಕೆ ಮುಖಂಡ ಪನೀರ್ಸೆಲ್ವಂ ಅವರನ್ನು ವಿರೋಧ ಪಕ್ಷದ ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಮಾಜಿ ಸಚಿವ ಎಸ್.ಪಿ. ವೇಲುಮಣಿಯನ್ನು ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ.
ಬಿಜೆಪಿ ಎಚ್ಚರಿಕೆ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸೋತ ಬಳಿಕ ಟಿಎಂಸಿ ಪಕ್ಷಕ್ಕೆ ವಾಪಸಾಗಲು ಅನೇಕರು ಸಜ್ಜಾಗಿರುವ ಹಿನ್ನೆಲೆಯಲ್ಲಿ ಅಸಮಾಧಾನ ಹೊರಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ಕೇವಲ ಅಧಿಕಾರ ಅನುಭವಿಸುವುದಕ್ಕಾಗಿ ಪಕ್ಷದಲ್ಲಿರುವುದು ಅಥವಾ ಪಕ್ಷಕ್ಕೆ ಸೇರುವ ಅಗತ್ಯವಿಲ್ಲ. ರಕ್ತ ಹಾಗೂ ಬೆವರು ಸುರಿಸಿ ಹೋರಾಡುವ ವ್ಯಕ್ತಿಗಳನ್ನು ಮಾತ್ರ ಪಕ್ಷ ಅವಲಂಬಿಸಿದೆಯೇ ವಿನಾ ಅಧಿಕಾರಕ್ಕಾಗಿ ಹಪಹಪಿಸುವವರನ್ನಲ್ಲ ಎಂದು ಹೇಳಿದ್ದಾರೆ. 2017ರಲ್ಲಿ ಬಿಜೆಪಿ ಸೇರಿದ್ದ ಮುಕುಲ್ ರಾಯ್, ಟಿಎಂಸಿಗೆ ವಾಪಸ್ ಸೇರಿರುವ ಹಿನ್ನೆಲೆಯಲ್ಲಿ ಘೋಷ್ ಈ ಹೇಳಿಕೆ ನೀಡಿದ್ದಾರೆ.