

|ಸಾಯಿಲಕ್ಷ್ಮಿ ಎಸ್. ನಿವೃತ್ತ ಸಹಾಯಕ ನಿರ್ದೇಶಕಿ, ಆಕಾಶವಾಣಿ, ಬೆಂಗಳೂರು
ಎಪ್ಪತೆôದು ವರುಷಕ್ಕೂ ಮೀರಿದ ಶ್ರೀಮಂತ ಇತಿಹಾಸ ಆಕಾಶವಾಣಿ ಎಂಬ ಈ ಭವ್ಯ ಸಂಸ್ಥೆಗಿದೆ. ಈ ಸಾಂಸ್ಕೃತಿಕ ವೃಕ್ಷದಲ್ಲಿ ತರತರದ ಗಿಳಿಕೋಗಿಲೆಗಳ ಮಧುರ ಕಲರವ. ಇದರಲ್ಲಿ ಇಪ್ಪತೈದು ವರುಷಕ್ಕೂ ಜಾಸ್ತಿ ಸಮಯ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಭಾಗ್ಯ ನನ್ನದು.
ಸಾಮಾನ್ಯವಾಗಿ ನನಗೆ ಮಕ್ಕಳ ಕಾರ್ಯಕ್ರಮ ವಿಭಾಗದ ಜವಾಬ್ದಾರಿ ವಹಿಸುತ್ತಿದ್ದರು. ಮಂಗಳೂರು, ಹಾಸನ, ಬೆಂಗಳೂರು ಈ ಮೂರು ಕೇಂದ್ರಗಳಲ್ಲಿ ಸಾಗಿ ಮಾಗಿದ ನನ್ನ ವೃತ್ತಿ ಪಯಣದಲ್ಲಿ ಮಕ್ಕಳ ಒಡನಾಟವೇ ಹೃದಯಕ್ಕೆ ಹತ್ತಿರವಾಯಿತು.
ಮಕ್ಕಳಿಗಾಗಿ ಆಕಾಶವಾಣಿಯಲ್ಲಿ ವಿಶೇಷವಾಗಿ ಬೆಂಗಳೂರು ಕೇಂದ್ರದಲ್ಲಿ ವಾರಕ್ಕೆ ನಾಲ್ಕು ಕಾರ್ಯಕ್ರಮ. ಹಕ್ಕಿಯ ಬಳಗ, ಬಾಲ ಜಗತ್, ಚಿಲಿಮಿಲಿ ಹಾಗೂ ಬಾಲಗೋಪಾಲ. ಚಿಲಿಮಿಲಿಯ ಭಾಗವಹಿಸುವ ಪುಟಾಣಿಗಳ ವಯೋಮಾನ ಮೂರರಿಂದ ಆರು ವರ್ಷವಾದರೆ; ಬಾಲ ಗೋಪಾಲವು ಪ್ರಬುದ್ಧ ಮಕ್ಕಳಿಗಾಗಿ ಹದಿನಾಲ್ಕರ ಪ್ರಾಯದವರೆಗೆ. ಇನ್ನು ಉಳಿದೆರಡು 8 ರಿಂದ 12 ವರ್ಷ ಪ್ರಾಯದ ಮಕ್ಕಳಿಗೆ. ವಯೋಮಾನದ ಆಧಾರದ ಮೇಲೆ ಕಾರ್ಯಕ್ರಮದ ವಿಷಯವನ್ನು ವಿನ್ಯಾಸಗೊಳಿಸಲಾಗುತ್ತಿತ್ತು.
ಇಲ್ಲಿ ಪ್ರಸ್ತಾಪ ಮಾಡುತ್ತಿರುವುದು ಎರಡು ದಶಕಗಳ ಹಿಂದಿನ ಮಕ್ಕಳ ಕಾರ್ಯಕ್ರಮಗಳ ನನ್ನ ನಿರ್ವಹಣೆಯ ಕಾಲಘಟ್ಟಕ್ಕೆ ಸಂಬಂಧಿಸಿದ್ದು. ಈಗ ಚಿಲಿಮಿಲಿ ಕಾರ್ಯಕ್ರಮವಿಲ್ಲ. ಹೊಸ ಕಾಲಮಾನಕ್ಕೆ ತಕ್ಕಂತೆ ಮಕ್ಕಳ ದಿನಾಚರಣೆಯ ನಿಮಿತ್ತ ಎಫ್ಎಂ ರೇನ್ಬೋ ಮೂಲಕ ಮಕ್ಕಳಿಂದ ನೇರ ಪ್ರಸಾರ ಈಗಲೂ ನಡೆಯುತ್ತಿದೆ.
ಕಥನ ಕವನ ಸ್ನೇಹಗಾನದ ಜನನ: ಆಕಾಶವಾಣಿಯಲ್ಲಿ ಸದಾ ನನ್ನ ಸುತ್ತ ಮಕ್ಕಳೇ. ಮಕ್ಕಳೊಡನಿದ್ದು ಅವರಿಗಾಗಿ ಬರೆಯುವುದು, ಅವರ ಮನಸ್ಸಿನ ಹದಮುದ ನೋಡಿ ಕಾರ್ಯಕ್ರಮ ರೂಪಿಸುವುದು ನಿಜಕ್ಕೂ ಸವಾಲೇ ಸರಿ. ಪದಗಳು ಸರಳವಾಗಿದ್ದು ಪ್ರಾಸಬದ್ಧವಾಗಿದ್ದರೆ ಅವರಲ್ಲೊಂದು ಬಗೆಯ ಹಿಗ್ಗು, ಬೆರಗು ಮೂಡುತ್ತದೆ.
ಕೆಲವೊಮ್ಮೆ ಮಗುವಿನ ಪ್ರತಿಭೆ ಧ್ವನಿಯ ಏರಿಳಿತ, ಆಕರ್ಷಕ ಅಭಿವ್ಯಕ್ತಿ ಮಧುರ ಭಾವ ಸಂಚಾರಕ್ಕೆ ಹೊಂದುವಂತೆ ನನ್ನ ಬರವಣಿಗೆ ಯೋಜಿಸುತ್ತಿದ್ದೆ. ಉದಾಹರಣೆಗೆ ‘ಬಾನಿನ ಕಳ್ಳ ಪೋಲೀಸ್’ ಗೀತ ರೂಪಕ. ಸಂಗೀತ ಕ್ಷೇತ್ರದಲ್ಲಿ ಇಂದು ಬೆಳಗುತ್ತಿರುವ ಗಾಯಕಿ ವಾರಿಜಶ್ರೀ ಅಂದು ಈ ರೂಪಕದ ನಾಯಕಿ. ರಿತೀಷಾ ಎನ್ನುವ ಬಾಲಾದ್ಭುತ ಅಮೆರಿಕದಲ್ಲಿ ಈಗ ಹಿರಿಯ ಉದ್ಯೋಗ ಸ್ಥಾನ ನಿಭಾಯಿಸುತ್ತ ಪ್ರಪಂಚ ಪರ್ಯಟನೆ ಮಾಡುತ್ತ ಹಾಡಿನ ಕಾರ್ಯಕ್ರಮ ನೀಡುತ್ತಿದ್ದಾಳೆ. ಸಂಜಯ ನಾಗ್, ಮಧು ಕಶ್ಯಪ್, ರತ್ನ ಕಾಂಚಿ, ವಾರಿಧಿ ರಂಗನ್ ಇವರೆಲ್ಲ ಈ ಗುಂಪಿನಲ್ಲಿ ಕಂಗೊಳಿಸುವ ಪ್ರತಿಭೆಗಳು.
ಒಂದು ದಿನ ಮನೆಯ ಮಕ್ಕಳಿಗೆ ಪಾರಿವಾಳದ ಸ್ನೇಹದ ಹಸಿವಿನ ಕತೆ ಕಟ್ಟಿ ಹೇಳುತ್ತಿದ್ದೆ. ಅದರ ಒಟ್ಟು ಸಾರಾಂಶ ಹೀಗಿದೆ. ಅಮ್ಮ ಪಾರಿವಾಳ ತನ್ನ ಚಿನ್ನಿಮರಿಯನ್ನು ಗೂಡಲ್ಲಿ ಬಿಟ್ಟು ಆಹಾರ ಹುಡುಕುತ್ತ ಹಾರುತ್ತಿರುತ್ತದೆ. ಅಲ್ಲೊಂದು ಶಾಲೆ. ಅಲ್ಲಿ ಮಕ್ಕಳ ಗುಂಪು ಆನಂದದಿಂದ ಕಲೆತು ಆಟವಾಡುತ್ತಿರುತ್ತದೆ. ಒಂದು ಮಗು ಮಾತ್ರ ಮಂಕಾಗಿ ತಿಂಡಿಯ ಡಬ್ಬ ತೆರೆದು ಏನೋ ಯೋಚಿಸುತ್ತ ಕೂತಿರುತ್ತದೆ. ಹಾರುತ್ತಿದ್ದ ಅಮ್ಮ ಹಕ್ಕಿ ಮಗುವಿನ ಬಳಿ ತನ್ನ ಮಗುವಿಗೆ ಏನಾದರೂ ಸಿಗಬಹುದೆಂಬ ಆಸೆಯಿಂದ ಬರುತ್ತದೆ. ಮಗುವಿಗೂ ಅದನ್ನು ಕಾಣುತ್ತಿದ್ದಂತೆ ಮನದಲ್ಲಿ ಹರುಷದ ಅಲೆ. ಅದು ಕೂಗಿ ಕರೆಯುತ್ತದೆ.
ಬಾ ಹಕ್ಕಿ ಬಳಿ ಬಾ ಹಕ್ಕಿ
ಕೇಳು ಮನದ ಮಾತಾ ಹಕ್ಕಿ
ನಾನು ಕರೆವೆ ಹರುಷ ಉಕ್ಕಿ
ಕೊಡುವೆ ನಿನಗೆ ಕಾಳು ಹೆಕ್ಕಿ
ಬಾ ಹಕ್ಕಿ ಬಳಿ ಬಾ ಹಕ್ಕಿ
ಹೀಗೆ ಮಗು ಮತ್ತು ಹಕ್ಕಿಯ ನಡುವಿನ ಸ್ನೇಹ ದಿನೇದಿನೆ ಚಿಗುರುತ್ತದೆ. ಈ ಕಥೆ ರೆಕ್ಕೆ ಪುಕ್ಜ ತಳೆದು ಮುಂದೆ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಸ್ನೇಹಗಾನವಾಗಿ ಆಮಂತ್ರಿತ ಶ್ರೋತೃಗಳ ಸಮ್ಮುಖದಲ್ಲಿ ದೃಶ್ಯಕಾವ್ಯಕೃತಿಯಾಗಿ ಪ್ರತಿಷ್ಠಿತ ವೇದಿಕೆ ಪ್ರದರ್ಶನ ಕಂಡಿತು. ವರುಷವರುಷವೂ ಈ ವೇದಿಕೆ ಕಾರ್ಯಕ್ರಮ ವೈವಿಧ್ಯವನ್ನು ಆಕಾಶವಾಣಿಯ ಕೊಡುಗೆಯಾಗಿ ನನ್ನ ಬರಹಗಳು ಪ್ತತಿನಿಧಿಸಿದವು. ಈ ವೇದಿಕೆ ಕಾರ್ಯಕ್ರಮಗಳ ಕೆಲವು ಶೀರ್ಷಿಕೆಗಳು ಹೀಗಿವೆ. ಕಲರವ, ಸಡಗರ, ಹೊಂಗಿರಣ, ಚುಕ್ಕಿಚಿನ್ನಾರಿ, ಕಿನ್ನರ ಕಾಂತಿ ಮುಂತಾದವು. ವೇದಿಕೆ ಕಾರ್ಯಕ್ರಮ ಆಯೋಜಿಸಲು ರವೀಂದ್ರ ಕಲಾಕ್ಷೇತ್ರ ರಂಗಮಂದಿರವನ್ನು ಮೂರು ತಿಂಗಳ ಮೊದಲೇ ನಿಗದಿಪಡಿಸಿಕೊಳ್ಳಬೇಕಿರುತ್ತಿತ್ತು. ವಿವಿಧ ಶಾಲೆಗಳೊಡನೆ ಸಂಪರ್ಕ ಮಾಡಿ ಮನೋರಂಜನೆಯ ಕಾರ್ಯಕ್ರಮದ ರೂಪು ರೇಷೆ ಸಿದ್ಧಪಡಿಸುತ್ತಿದ್ದೇವು. ಕಾರ್ಯಕ್ರಮದ ಥೀಮ್ ವಿಭಿನ್ನವಾಗಿದ್ದು ಅದಕ್ಕೆ ತಕ್ಕಂತೆ ರಂಗಹಿನ್ನೆಲೆ ನಿರ್ವಣವಾಗುತ್ತಿತ್ತು. ಅರಣ್ಯ ಇಲಾಖೆಯವರ ಕಡೆಯಿಂದ ಜೀವಂತ ಮರಗಳು ವೇದಿಕೆಯನ್ನು ಅಲಂಕರಿಸಿ, ಮುಂದೆ ಅವು ಬನ್ನೇರುಘಟ್ಟದ ಕಾನನದ ಭಾಗವಾಗುತ್ತಿತ್ತು. ಮೈಸೂರು ಮೃಗಾಲಯದಿಂದ ನಿಂದ ಜೀವಂತ ಹಕ್ಕಿಗಳಂತೆ ತೋರುವ ಪಕ್ಷಿಗಳನ್ನು ತರಿಸಲಾಗುತ್ತಿತ್ತು. ಅವು ಈ ಮರದ ಕೊಂಬೆಗಳ ಸಿಂಗಾರ. ಒಟ್ಟಾರೆ ಕೊಳಲಿನ ನಾದದೊಂದಿಗೆ ಶುರುವಾಗಿ ಒಂದು ಅದ್ಭುತ ಪರಿಣಾಮ ಉಂಟಾಗುತ್ತಿತ್ತು.
ಆ ದಿನಗಳಲ್ಲಿ ಅಷ್ಟೊಂದು ಖುಷಿ ಮತ್ತು ಪ್ರೀತಿ ಧಾರೆಯೆರೆದು ಮಕ್ಕಳ ಕಾರ್ಯಕ್ರಮ ನಿರ್ವಪಕಿಯಾಗಿ ಸವಿದ ಸಂತಸ ನನ್ನ ಹೃದಯದಲ್ಲಿ ಇನ್ನು ಹಸಿರಾಗಿದೆ. ಆಕಾಶವಾಣಿಯ ಸಂಪರ್ಕಕ್ಕೆ ಬಂದ ಆ ಮಕ್ಕಳ ರೆಕಾರ್ಡಿಂಗ್ ನೆನಪು, ಆ ಸಮಯ ಅವರಲ್ಲಿ ತುಂಬಿದ ಆತ್ಮವಿಶ್ವಾಸ ಅವರ ಜೀವನದ ಮಹತ್ತರ ಮೈಲಿಗಲ್ಲು. ವಿವಿಧ ಮಾಧ್ಯಮಗಳ ಪೈಪೋಟಿಯ ನಡುವೆ ಆಕಾಶವಾಣಿಯ ಮಹತ್ವ ಮೊದಲಿಗಿಂತ ಕಡಿಮೆಯಾಗಿದ್ದರೂ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಇಂದಿಗೂ ಅದು ಇಂಬು ನೀಡುತ್ತಿದೆ.