ಪ್ರವಾಹದ ಭೀತಿಗೆ ಸಿಲುಕಿದ ಯುದ್ಧೋನ್ಮಾದ ಚೀನಾ ಸೇನಾಪಡೆ

galwan river
Published on

ನವದೆಹಲಿ: ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಪ್ರವಾಹೋಪಾದಿಯಲ್ಲಿ ಭಾರತದ ಮೇಲೆ ಮುಗಿ ಬೀಳಲು ಹಾತೊರೆಯುತ್ತಿದೆ. ಮುಂಚೂಣಿ ನೆಲೆಗಳಲ್ಲಿರುವ ಸೇನಾಪಡೆಗಳಿಗೆ ಬೆಂಬಲವಾಗಿ ಗಲ್ವಾನ್​ ಕಣಿವೆಯಿಂದ 5 ಕಿ.ಮೀ. ದೂರದಲ್ಲಿ ಪಿಎಲ್​ಎನ ಬೃಹತ್​ ಸೇನಾಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಇದೀಗ ಈ ಯೋಧರು ಪ್ರವಾಹದ ಭೀತಿಗೆ ಸಿಲುಕಿಕೊಂಡಿದ್ದಾರೆ.

ಬ್ಯಾಕ್​ಅಪ್​ ಯೋಜನೆಯನ್ವಯ ಈ ಯೋಧರನ್ನು ಅಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಆದರೆ, ಇವರು ಶಿಬಿರಗಳನ್ನು ಹಾಕಿಕೊಂಡಿರುವ ಪ್ರದೇಶದಲ್ಲಿನ ನದಿಯ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿರಿಯ ಮಿಲಿಟರಿ ಕಮಾಂಡರ್​ ಅವರ ಪ್ರಕಾರ ಹಿಮ ತುಂಬಾ ವೇಗವಾಗಿ ಕರಗುತ್ತಿದೆ. ಇದರಿಂದಾಗಿ ಅಕ್ಸಾಯ್​ಚಿನ್​ ಪ್ರದೇಶದಿಂದ ಉಗಮಿಸುವ ಹಿಮಗಡ್ಡೆಗಳಿಂದ ಕೂಡಿರುವ ಗಲ್ವಾನ್​ ನದಿಯಲ್ಲಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಇದು ಯೋಧರ ಪಾಲಿಗೆ ಮೃತ್ಯಕೂಪವಾಗಿ ಮಾರ್ಪಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಡ್ರೋನ್​ ಮತ್ತು ಉಪಗ್ರಹದ ಚಿತ್ರಗಳನ್ನು ಆಧರಿಸಿ ಅವರು ಈ ಮಾಹಿತಿ ನೀಡಿದ್ದಾರೆ.

ಜೂ.15ರಂದು ಗಲ್ವಾನ್​ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ರಕ್ತಸಿಕ್ತ ಘರ್ಷಣೆ ನಡೆದಿತ್ತು. ಈ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಆದರೆ, ಚೀನಾ ಇದುವರೆಗೂ ಈ ಘರ್ಷಣೆಯಲ್ಲಿ ಮಡಿದಿರುವ ತನ್ನ ಯೋಧರ ಬಗ್ಗೆ ಮಾಹಿತಿ ನೀಡಿಲ್ಲ. ಬಿಕ್ಕಟ್ಟು ಪರಿಹರಿಸಲು ಉಭಯ ರಾಷ್ಟ್ರಗಳು ಮಿಲಿಟರಿ ಎಂದು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಸುತ್ತಿವೆ. ಆದರೂ, ಯಾವುದೇ ಪರಿಹಾರ ದೊರೆತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net