

ನವದೆಹಲಿ: ನಕಲಿ ಇನ್ವೆಸ್ಟ್ಮೆಂಟ್ ಆ್ಯಪ್ಗಳ ಮೂಲಕ 5 ಲಕ್ಷ ಭಾರತೀಯರಿಗೆ 150 ಕೋಟಿ ರೂಪಾಯಿ ವಂಚಿಸಿದ ಚೀನಿಯರ ಗ್ಯಾಂಗ್ ದೆಹಲಿ ಪೊಲೀಸರ ಬಲೆಗೆ ಬಿದ್ದಿದೆ. ಈ ಗ್ಯಾಂಗ್ನಲ್ಲಿ ಹನ್ನೊಂದು ಜನರಿದ್ದು, ಈ ಪೈಕಿ ಇಬ್ಬರು ಚಾರ್ರ್ಟಡ್ ಅಕೌಂಟಟ್ಸ್. ಬಂಧಿತರನ್ನು ದೆಹಲಿ ನಿವಾಸಿಗಳಾದ ಉಮಾಕಾಂತ ಆಕಾಶ್ ಜೋಯಿಸ್, ವೇದಚಂದ್ರ, ಹರಿಓಂ, ಅಭಿಷೇಕ್ ಮನಸರಮಣಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಚೀನಿಯರ ಬೇನಾಮಿ ಕಂಪನಿಗಳ ನಿರ್ದೇಶಕರು. ಈ ಕಂಪನಿ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಅವಿಕ್ ಕೇಡಿಯಾ ಮತ್ತು ರೋಣಕ್ ಲೆಕ್ಕ ಪರಿಶೋಧಕರು ಎಂದು ಗುರುತಿಸಲಾಗಿದೆ.
ಚೀನೀಯರ ಪತ್ತೆಗೆ ಶೋಧ ಶುರುವಾಗಿದೆ. ಆ್ಯಪ್ಗಳ ಮೂಲಕ ಹಣ ಹೂಡಿಕೆ ಮಾಡಿಸಿ ಗರಿಷ್ಠ ರಿಟರ್ನ್ಸ್ ಕೊಡುವ ಭರವಸೆ ನೀಡುವ ಮಲ್ಟಿಲೆವೆಲ್ ಮಾರ್ಕೆಟಿಂಗ್ ಮಾಡೆಲ್ (ಎಂಎಲ್ಎಂ) ಮಾದರಿಯಲ್ಲಿ ವಂಚನೆ ನಡೆದಿದೆ ಎಂದು ದೆಹಲಿಯ ಸೈಬರ್ ಕೆಮ್ ಸೆಲ್ನ ಡೆಪ್ಯೂಟಿ ಪೊಲೀಸ್ ಕಮಿಷನರ್ ಅನ್ಯೇಶ್ ರಾಯ್ ತಿಳಿಸಿದ್ದಾರೆ. ಬಂಧಿತರ ಬ್ಯಾಂಕ್ ಖಾತೆಯನ್ನು ಸ್ತಂಭನಕ್ಕೊಳಪಡಿಸಿದ್ದು ಅದರಲ್ಲಿ 11 ಕೋಟಿ ರೂಪಾಯಿಗೂ ಅಧಿಕ ಮೊತ್ತ ಇರುವುದನ್ನು ಖಚಿತಪಡಿಸಲಾಗಿದೆ. 97 ಲಕ್ಷ ರೂಪಾಯಿ ನಗದು ಹಣ, 30 ಮೊಬೈಲ್ ೋನ್ಗಳನ್ನು ಬಂಧಿತರಿಂದ ವಶಪಡಿಸಲಾಗಿದೆ.
ಪ್ಲೇಸ್ಟೋರ್ನಲ್ಲಿ ವಂಚಕರ ಆ್ಯಪ್
ಗೂಗಲ್ ಪ್ಲೇಸ್ಟೋರ್ನಲ್ಲಿ ವಂಚಕರು ಸಾಕಷ್ಟು ಆ್ಯಪ್ಗಳನ್ನು ಅಪ್ಲೋಡ್ ಮಾಡಿದ್ದು, ಅದನ್ನು ಪ್ಲೇಸ್ಟೋರ್ ಲಿಸ್ಟ್ ಕೂಡ ಮಾಡಿದೆ. ಗೊತ್ತಿಲ್ಲ ದವರು ಇಂತಹ ಆ್ಯಪ್ಗಳನ್ನು ಡೌನ್ಲೋಡ್ ಮಾಡಿ ಕೊಂಡು ಸುಲಭವಾಗಿ ವಂಚನೆಗೆ ಒಳಗಾಗುತ್ತಿದ್ದಾರೆ. ನಿಖರವಾಗಿ ಗೊತ್ತಿಲ್ಲದ ಆ್ಯಪ್ಗಳನ್ನು ಡೌನ್ಲೋಡ್ ಮಾಡುವ ಮುನ್ನವೇ ಎಚ್ಚರಿಕೆ ವಹಿಸಬೇಕು ಎಂದು ಅನ್ಯೇಶ್ ರಾಯ್ ಹೇಳಿದ್ದಾರೆ.
ಬೆಂಗಳೂರಿನಲ್ಲೂ ವಂಚಕರ ಜಾಲ
ವಾಟ್ಸ್ಆ್ಯಪ್, ಟೆಲಿಗ್ರಾಂ ಮೂಲಕ ಜನರನ್ನು ಸಂಪರ್ಕಿಸುವ ಈ ವಂಚಕರ ಜಾಲ ಪಶ್ಚಿಮ ಬಂಗಾಳ, ನವದೆಹಲಿ, ಬೆಂಗಳೂರು, ಒಡಿಶಾ, ಅಸ್ಸಾಂ, ಸೂರತ್ಗಳಲ್ಲಿ ಹೆಚ್ಚು ಜನರನ್ನು ಬಲೆಗೆ ಬೀಳಿಸಿಕೊಂಡಿದೆ. ಇಲ್ಲಿನ ಜನರ ಜತೆಗೆ ಒಡನಾಟ ನಡೆಸಲು ಸ್ಥಳಿಯರನ್ನೇ ವೇತನಕ್ಕೆ ನೇಮಕ ಮಾಡಿಕೊಂಡಿದೆ ಎಂದು ಡಿಸಿಪಿ ರಾಯ್ ಎಚ್ಚರಿಸಿದ್ದಾರೆ.
ಹಲವು ಚೀನಿಯರು ಭಾಗಿ
ವ್ಯವಸ್ಥಿತವಾಗಿ ನಡೆಯುತ್ತಿರುವ ಈ ವಂಚನೆಯಲ್ಲಿ ಹಲವು ಚೀನೀ ಪ್ರಜೆಗಳು ಭಾಗಿಯಾಗಿದ್ದಾರೆ. ಅವರ ಮಾಹಿತಿ ಲಭಿಸಿದ್ದು, ಶೋಧ ಕಾರ್ಯ ಶುರುವಾಗಿದೆ. 5 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ 150 ಕೋಟಿ ರೂಪಾಯಿಗೂ ಅಧಿಕ ವಂಚನೆ ನಡೆಸಿರುವ ಬಗ್ಗೆ ಮಾಹಿತಿ ಇದೆ. ಪೇಮೆಂಟ್ ಗೇಟ್ವೇ ಮೂಲಕ ಪಾವತಿಯಾದ 12 ಕೋಟಿ ರೂ. ಖಾತೆಯಲ್ಲಿವೆ. ಇದನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ರಾಯ್ ತಿಳಿಸಿದ್ದಾರೆ.