

ನವದೆಹಲಿ: ಲಡಾಖ್ ಪೂರ್ವಭಾಗದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಬಹುತೇಕ ಶಮನಗೊಳ್ಳುವ ಹಂತ ತಲುಪುತ್ತಿದೆ. ಪ್ಯಾಂಗಾಂಗ್ ತ್ಸೊ ಸರೋವರದ ಫಿಂಗರ್ 4ರ ಬಳಿ ಬೀಡುಬಿಟ್ಟಿದ್ದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಯೋಧರು ಭಾಗಶಃ ಹಿಂದಕ್ಕೆ ಸರಿದಿದ್ದಾರೆ.
ಫಿಂಗರ್ 4ರ ಬಳಿ ಪಿಎಲ್ಎ ಯೋಧರು ನಿರ್ಮಿಸಿದ್ದ ಟೆಂಟ್ಗಳೆಲ್ಲವನ್ನೂ ತೆರವುಗೊಳಿಸಲಾಗಿದೆ. ಆದರೆ, ಸರೋವರದ ಏಣುಗಳಲ್ಲಿ ನಿರ್ಮಿಸಲಾಗಿದ್ದ ಬಯಲು ಶಿಬಿರಗಳು ಇನ್ನೂ ಹಾಗೆಯೇ ಇವೆ. ಈ ಪ್ರದೇಶವನ್ನು ಶುಕ್ರವಾರ ಹಾದು ಹೋಗಿರುವ ಖಾಸಗಿ ಉಪಗ್ರಹ ಸ್ಕೈಸ್ಯಾಟ್ನಿಂದ ತೆಗೆದ ಚಿತ್ರಗಳು ಇದನ್ನು ಖಚಿತಪಡಿಸಿವೆ.
ಲಡಾಖ್ ಬಿಕ್ಕಟ್ಟಿಗೆ ಕಾರಣವಾಗಿದ್ದ ಘರ್ಷಣೆ ನಡೆದಿದ್ದ ಸ್ಥಳಗಳಿಂದ ಚೀನಾ ಮತ್ತು ಭಾರತದ ಯೋಧರು ಸಂಪೂರ್ಣವಾಗಿ ಹಿಂದಕ್ಕೆ ಸರಿಯುತ್ತಿರುವ ಬೆನ್ನಲ್ಲೇ ಈ ಒಂದು ಬೆಳವಣಿಗೆ ಕಂಡು ಬಂದಿದೆ. ಈ ಪ್ರದೇಶದಿಂದ ಸೇನೆಯನ್ನು ಸಂಪೂರ್ಣವಾಗಿ ಹಿಂದೆಗೆಯುವ ಬಗ್ಗೆ ಭಾರತ ಮತ್ತು ಚೀನಾದ ಕೋರ್ ಕಮಾಂಡರ್ಗಳ ಮಟ್ಟದ 4ನೇ ಸುತ್ತಿನ ಸಭೆ ಮುಂದಿನ ವಾರ ಮುಂದುವರಿಯಲಿದೆ. ವಾಸ್ತವ ಗಡಿರೇಖೆಯ ಮುಂಚೂಣಿ ನೆಲೆಗಳಿಗಿಂತ ಹಿಂಬದಿಯಲ್ಲಿ ನಿಯೋಜನೆಗೊಳಿಸಿರುವ ಸೇನೆಯನ್ನು ಹಿಂತೆಗೆಯುವ ಬಗ್ಗೆ ಈ ಸುತ್ತಿನಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಲಾಗಿದೆ.
ಎಲ್ಎಸಿಯಿಂದ ಎರಡೂ ಬದಿಗಳಲ್ಲಿ ಮೂರು ಕಿ.ಮೀ. ಅಂತರದ ಮೀಸಲು ಪ್ರದೇಶವನ್ನು ಸೃಷ್ಟಿಸುವಲ್ಲಿ ಭಾರತ ಮತ್ತು ಚೀನಾ ಯಶಸ್ವಿಯಾಗಿವೆ. ಗಲ್ವಾನ್ ಕಣಿವೆ, ಗೋಗ್ರಾ ಮತ್ತು ಹಾಟ್ಸ್ಪ್ರಿಂಗ್ಗಳಲ್ಲಿ ಈಗಾಗಲೆ ಮೀಸಲು ಪ್ರದೇಶವನ್ನು ಸೃಷ್ಟಿಸಲಾಗಿದೆ.